ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ. 
ರಾಜ್ಯ

ಖಾತೆ ಹಂಚಿಕೆ ಕಿತ್ತಾಟ: ಆರಂಭದಲ್ಲೇ ಅಸಮಾಧಾನದ ಅಲೆ: ಡಿಕೆಶಿ ಸರ್ಕಾರಕ್ಕಿದು ಆರಂಭಿಕ ಆಘಾತವೋ, ದೊಡ್ಡ ಸಂಕಷ್ಟದ ಮುನ್ಸೂಚನೆಯೋ?

ಇದು ಕೇವಲ ಖಾತೆಗಳಿಗಾಗಿ ನಡೆದ ಅಸಮಾಧಾನವೇ, ಅಥವಾ ಕಾಂಗ್ರೆಸ್‌ನೊಳಗಿನ ಆಳವಾದ ಭಿನ್ನಾಭಿಪ್ರಾಯಗಳ ಮೊದಲ ಸಂಕೇತವೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಬೆಂಗಳೂರು: ಅಧಿಕಾರದ ಗದ್ದುಗೆ ಏರುವುದು ಒಂದು ಸವಾಲಾದರೆ, ಅದನ್ನು ಸ್ಥಿರವಾಗಿ ಉಳಿಸಿಕೊಳ್ಳುವುದು ಇನ್ನೊಂದು ದೊಡ್ಡ ಸವಾಲು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಕಾಂಗ್ರೆಸ್ ಸರ್ಕಾರ ಇನ್ನೂ ತನ್ನ ಆಡಳಿತದ ದಿಕ್ಕು ಮತ್ತು ಆದ್ಯತೆಗಳನ್ನು ನಿರ್ಧರಿಸುವ ಹಂತದಲ್ಲಿರುವಾಗಲೇ ಸಚಿವ ಸಂಪುಟದೊಳಗಿನ ಅಸಮಾಧಾನ ಬಹಿರಂಗಗೊಂಡಿದೆ.

ಖಾತೆ ಹಂಚಿಕೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ ಅಸ್ತ್ರ ಪ್ರಯೋಗಿಸಿದ್ದು, ಬಳಿಕ ಕೆ.ಎಚ್. ಮುನಿಯಪ್ಪ ಕೂಡ ಅಸಮಾಧಾನ ವ್ಯಕ್ತಪಡಿಸಿರುವುದು ಸರ್ಕಾರದ ಆರಂಭಿಕ ದಿನಗಳ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

ಇದು ಕೇವಲ ಖಾತೆಗಳಿಗಾಗಿ ನಡೆದ ಅಸಮಾಧಾನವೇ, ಅಥವಾ ಕಾಂಗ್ರೆಸ್‌ನೊಳಗಿನ ಆಳವಾದ ಭಿನ್ನಾಭಿಪ್ರಾಯಗಳ ಮೊದಲ ಸಂಕೇತವೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಅಧಿಕಾರ ಹಸ್ತಾಂತರವನ್ನು ಸುಗಮವಾಗಿ ಪೂರ್ಣಗೊಳಿಸಿದ ಕಾಂಗ್ರೆಸ್ ಹೈಕಮಾಂಡ್, ಆಡಳಿತದ ಮೊದಲ ಹೆಜ್ಜೆಯಲ್ಲೇ ಎದುರಾದ ಈ ಸವಾಲನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.

ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಸರ್ಕಾರದ ಮುಂದೆ ಆಡಳಿತಾತ್ಮಕ ಸಾಧನೆಗಳಷ್ಟೇ ಅಲ್ಲ, ಪಕ್ಷದೊಳಗಿನ ಸಮನ್ವಯ ಮತ್ತು ನಾಯಕತ್ವದ ಸ್ವಾಯತ್ತತೆಯ ಪರೀಕ್ಷೆಯೂ ಆರಂಭವಾಗಿದೆ.

ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ಅಭಿವೃದ್ಧಿ ಖಾತೆ ನೀಡದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ನಂತರ ಮುಖ್ಯಮಂತ್ರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮನವೊಲಿಕೆಯಿಂದ ರಾಜೀನಾಮೆ ಹಿಂಪಡೆದಿದ್ದಾರೆ. ಈ ಬೆಳವಣಿಗೆ ಸರ್ಕಾರದ ಆರಂಭಿಕ ದಿನಗಳ ಮೇಲೆಯೇ ನೆರಳು ಬೀರಿದೆ.

ರಾಜಕೀಯವಾಗಿ ರಾಮಲಿಂಗಾ ರೆಡ್ಡಿ ಸಾಮಾನ್ಯ ನಾಯಕನಲ್ಲ. 1989ರಿಂದ ಬೆಂಗಳೂರಿನಲ್ಲಿ ಸತತ ಎಂಟು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಅವರು ಕಾಂಗ್ರೆಸ್‌ನ ಪ್ರಭಾವಿ ಮುಖಗಳಲ್ಲಿ ಒಬ್ಬರು. ಗೃಹ, ಸಾರಿಗೆ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಬೆಂಗಳೂರು ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿರುವ ಅನುಭವ ಅವರಿಗಿದೆ. ಬೆಂಗಳೂರಿನ ರಾಜಕೀಯ ಲೆಕ್ಕಾಚಾರಗಳಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ.

ಅಂತಹ ನಾಯಕರ ಅಸಮಾಧಾನ ಕೇವಲ ವೈಯಕ್ತಿಕ ವಿಷಯವಾಗಿ ಉಳಿಯುವುದಿಲ್ಲ. ಅದು ಪಕ್ಷದ ಕಾರ್ಯಕರ್ತರು ಮತ್ತು ಇತರ ನಾಯಕರ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಶೀಘ್ರದಲ್ಲೇ ನಡೆಯಲಿರುವ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯ ಐದು ನಗರ ನಿಗಮಗಳ ಚುನಾವಣೆಗಳ ಸಂದರ್ಭದಲ್ಲಿ ಈ ಬೆಳವಣಿಗೆ ಕಾಂಗ್ರೆಸ್‌ಗೆ ರಾಜಕೀಯವಾಗಿ ದುಬಾರಿಯಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಸ್ಥಿತಿ ಈಗಾಗಲೇ ಸವಾಲಿನದ್ದಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 12 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಉಳಿದ 16 ಸ್ಥಾನಗಳು ಬಿಜೆಪಿಯ ಪಾಲಾಗಿದ್ದವು. ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕೂ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ರಾಮಲಿಂಗಾ ರೆಡ್ಡಿ ಹಾಗೂ ಕೃಷ್ಣ ಬೈರೇಗೌಡ ಅವರಂತಹ ನಾಯಕರು ಪಕ್ಷದ ನಗರಾಧಾರಿತ ಮತಬ್ಯಾಂಕ್ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.

ಡಿ.ಕೆ. ಶಿವಕುಮಾರ್ ಅವರಿಗೆ ಸಂಪೂರ್ಣ ಸ್ವಾಯತ್ತತೆ ದೊರೆತಿದ್ದರೆ ಈ ವಿವಾದವನ್ನು ಆರಂಭದಲ್ಲೇ ತಪ್ಪಿಸಬಹುದಿತ್ತು. ರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಭರವಸೆ ಈಡೇರಿಸುವ ಮೂಲಕ ಅಸಮಾಧಾನಕ್ಕೆ ಅವಕಾಶವೇ ಇರದಂತೆ ಮಾಡಬಹುದಿತ್ತು. ಆದರೆ, ಖಾತೆ ಹಂಚಿಕೆಯ ಅಂತಿಮ ನಿರ್ಧಾರ ಪಕ್ಷದ ಹಿರಿಯ ನಾಯಕತ್ವದಿಂದ ತೆಗೆದುಕೊಳ್ಳಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

ಇದರಿಂದ ಮತ್ತೊಂದು ಪ್ರಶ್ನೆ ಉದ್ಭವಿಸಿದೆ. ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಅಂತಿಮ ಅಧಿಕಾರ ಮುಖ್ಯಮಂತ್ರಿ ಅವರಿಗಿದೆಯೇ, ಅಥವಾ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಇನ್ನೂ ಪ್ರಮುಖ ಪಾತ್ರವಹಿಸುತ್ತಿದೆಯೇ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ರಾಮಲಿಂಗಾ ರೆಡ್ಡಿ ಪ್ರಕರಣವೊಂದೇ ಅಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಕೂಡ ತಮಗೆ ನೀಡಲಾದ ಖಾತೆಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಅವರನ್ನು ಕೂಡ ಪಕ್ಷದ ಹಿರಿಯ ನಾಯಕರು ಸಮಾಧಾನಪಡಿಸಿದರು. ಆದರೆ, ಒಂದೇ ಸಮಯದಲ್ಲಿ ಇಬ್ಬರು ಹಿರಿಯ ಸಚಿವರು ಅಸಮಾಧಾನ ಹೊರಹಾಕಿರುವುದು ಸರ್ಕಾರದ ಒಳಗಿನ ಅಸಮತೋಲನವನ್ನು ಬಹಿರಂಗಪಡಿಸಿದೆ.

ಇದನ್ನು ಆರಂಭಿಕ ಗೊಂದಲ ಅಥವಾ ತಪ್ಪು ಅರ್ಥೈಸುವಿಕೆ ಎಂದು ಕೆಲವರು ಪರಿಗಣಿಸಬಹುದು. ಆದರೆ ರಾಜಕೀಯದಲ್ಲಿ ಮೊದಲ ಅಭಿಪ್ರಾಯವೇ ಬಹುಮುಖ್ಯವಾಗುತ್ತದೆ. ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಉಂಟಾಗುವ ಇಂತಹ ಬೆಳವಣಿಗೆಗಳು ಸಾರ್ವಜನಿಕರ ಮುಂದೆ ಆಡಳಿತದ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡಿಸುವ ಸಾಧ್ಯತೆ ಇರುತ್ತದೆ.

ಇದೇ ವೇಳೆ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರು ಇದನ್ನು ಪಕ್ಷಕ್ಕೆ "ದೊಡ್ಡ ಎಚ್ಚರಿಕೆಯ ಗಂಟೆ" ಎಂದು ಬಣ್ಣಿಸಿರುವುದು ಗಮನಾರ್ಹ ವಿಚಾರವಾಗಿದೆ.

ಸರ್ಕಾರದ ಅವಧಿ ಎರಡು ವರ್ಷಕ್ಕಿಂತಲೂ ಕಡಿಮೆ ಇರುವ ಸಂದರ್ಭದಲ್ಲಿ ಆಡಳಿತಾತ್ಮಕ ಸಾಧನೆಗಳ ಜೊತೆಗೆ ರಾಜಕೀಯ ಸಮನ್ವಯವೂ ಅತ್ಯಂತ ಮುಖ್ಯವಾಗುತ್ತದೆ. ಸಚಿವ ಸಂಪುಟದ ಉಳಿದ 20 ಸ್ಥಾನಗಳನ್ನು ಭರ್ತಿ ಮಾಡಬೇಕಿರುವ ಸಂದರ್ಭದಲ್ಲಿ ಅಸಮಾಧಾನದ ಕಿಡಿ ಮತ್ತಷ್ಟು ಹರಡದಂತೆ ನೋಡಿಕೊಳ್ಳುವುದು ನಾಯಕತ್ವದ ದೊಡ್ಡ ಪರೀಕ್ಷೆಯಾಗಲಿದೆ.

ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ತಮ್ಮದೇ ರೀತಿಯಲ್ಲಿ ತಂಡವನ್ನು ಕಟ್ಟಿಕೊಳ್ಳುವ ಅವಕಾಶ ಹೊಂದಿದ್ದರು. ಆದರೆ, ಡಿ.ಕೆ. ಶಿವಕುಮಾರ್ ಅವರು ಈಗ ಆಡಳಿತಾತ್ಮಕ ಸವಾಲುಗಳ ಜೊತೆಗೆ ರಾಜಕೀಯ ಸಮತೋಲನದ ಹೊಣೆಗಾರಿಕೆಯನ್ನೂ ಸಹ ಹೊತ್ತುಕೊಂಡಿದ್ದಾರೆ. ಜನರ ನಿರೀಕ್ಷೆಗಳು ದೊಡ್ಡದಿವೆ, ಆದರೆ ಸಮಯ ಕಡಿಮೆ ಇದೆ.

ಹೀಗಾಗಿ, ಈ ಬೆಳವಣಿಗೆಯನ್ನು ಕೇವಲ ಸಚಿವ ಖಾತೆಗಳ ವಿವಾದವೆಂದು ನೋಡುವುದಕ್ಕಿಂತ, ಹೊಸ ಸರ್ಕಾರದ ಕಾರ್ಯಶೈಲಿ, ಅಧಿಕಾರದ ಕೇಂದ್ರಿಕರಣ, ನಾಯಕತ್ವದ ಸ್ವಾಯತ್ತತೆ ಮತ್ತು ಪಕ್ಷದ ಆಂತರಿಕ ಆರೋಗ್ಯದ ಸೂಚಕವಾಗಿ ನೋಡಬೇಕಾಗಿದೆ.

ಆರಂಭದಲ್ಲೇ ಎದುರಾಗಿರುವ ಈ ಅಸಮಾಧಾನದ ಅಲೆ ತಾತ್ಕಾಲಿಕ ಗೊಂದಲವಾಗಿ ಉಳಿಯುತ್ತದೆಯೇ ಅಥವಾ ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಸವಾಲಿನ ರೂಪ ಪಡೆಯುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಆದರೆ, ಒಂದು ವಿಷಯವಂತೂ ಸ್ಪಷ್ಟ—ಡಿಕೆಶಿ ಸರ್ಕಾರದ ಮುಂದೆ ಆಡಳಿತಕ್ಕಿಂತ ಮೊದಲು ಪಕ್ಷದೊಳಗಿನ ಸಮನ್ವಯದ ಪರೀಕ್ಷೆಯೇ ದೊಡ್ಡದಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ: ಗೃಹಬಳಕೆ ಸಿಲಿಂಡರ್‌ ದರ ಮತ್ತೆ ಏರಿಕೆ, ಬರೋಬ್ಬರಿ 29 ರೂ. ಹೆಚ್ಚಳ..!

'ಮಲ್ಲಘಟ್ಟ ಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ನನಗೆ ಮನಶಾಂತಿ ಸಿಗುತ್ತದೆ:ಡಿ ಕೆ ಶಿವಕುಮಾರ್ ರೋಡ್‌ಶೋ; ಬೆಂಬಲಿಗರ ಸಂಭ್ರಮ-Video

ಬರನಾಡಿನ ಭಗೀರಥ: 200 ಕೆರೆ-3,000 ಕೊಳವೆ ಬಾವಿಗಳಿಗೆ ಮರುಜೀವ; ಗದಗದ ‘ಜಲಯೋಧ’ನ ಪ್ರೇರಣಾದಾಯಕ ಯಶೋಗಾಥೆ..!

ಪ್ಲಾಸ್ಟಿಕ್ ಬಾಟಲಿ ನಿಷೇಧ ಆದೇಶ ಉಲ್ಲಂಘನೆ: ಸರ್ಕಾರಿ ಕಚೇರಿಗಳಿಗೆ KSPCB ಕಠಿಣ ಎಚ್ಚರಿಕೆ, ನೋಟಿಸ್ ಜಾರಿ..!

NEET-UG 2026: ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ 'ಸೋರಿಕೆ' ಆರೋಪ ತಳ್ಳಿಹಾಕಿದ NTA; ಸುಳ್ಳು ಸುದ್ದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

SCROLL FOR NEXT