ಬೆಂಗಳೂರು: ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಅವರು ಸೋಮವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಮೊಮ್ಮಗರಾಗಿದ್ದು, ಕಾಂಗ್ರೆಸ್ ಪಕ್ಷದ ಯುವ ಹಾಗೂ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು.
ಹೃದಯಾಘಾತಕ್ಕೆ ಒಳಗಾದ ಸೂರಜ್ ಹೆಗ್ಡೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ಸೂರಜ್ ಹೆಗ್ಡೆ ಅವರು ಎಐಸಿಸಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದುದರ ಜೊತೆಗೆ ತಮಿಳುನಾಡು ಹಾಗೂ ಪುದುಚೇರಿ ಕಾಂಗ್ರೆಸ್ ಘಟಕಗಳ ಉಸ್ತುವಾರಿಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು.
ಅವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ ಉಂಟಾಗಿದ್ದು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ತೀವ್ರ ಸಂತಾಪ ಸೂಚಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸೂರಜ್ ಹೆಗ್ಡೆ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಡಿ.ಕೆ. ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿದ್ದ ನನ್ನ ಆತ್ಮೀಯ ಸಹೋದ್ಯೋಗಿ ಶ್ರೀ ಸೂರಜ್ ಹೆಗ್ಗಡೆ ಅವರ ಹಠಾತ್ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ.
ಸಂಘಟನಾ ಚಾತುರ್ಯ ಹಾಗೂ ಜನಪರ ಕಾಳಜಿಯ ಮೂಲಕ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು. ಕಾರ್ಯಕರ್ತರೊಂದಿಗೆ ಸದಾ ಉತ್ತಮ ಬಾಂಧವ್ಯ ಹೊಂದಿದ್ದ ಒಬ್ಬ ಸಕ್ರಿಯ ನಾಯಕನನ್ನು ಇಂದು ನಾವು ಕಳೆದುಕೊಂಡಿದ್ದೇವೆ.
ಈ ಕಷ್ಟದ ಸಮಯದಲ್ಲಿ ಭಗವಂತನು ಅವರ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆಯ ವೇದನೆಯನ್ನು ಸಹಿಸುವ ಧೈರ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.