ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಟ ಪ್ರಕಾಶ್ ರಾಜ್ ಮತ್ತು ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ಅವರೊಂದಿಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ. 
ರಾಜ್ಯ

ಬೆಂಗಳೂರಿನಲ್ಲಿ Cockroach Janta Party ಮೊದಲ ಪ್ರತಿಭಟನೆ: ಪ್ರಕಾಶ್ ರಾಜ್, ಸೋನಂ ವಾಂಗ್ಚುಕ್ ಭಾಗಿ; 'ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇವೆ' ಘೋಷಣೆ

ಸರ್ಕಾರದ ವಿರುದ್ಧ ಪ್ರಶ್ನೆ ಕೇಳಿದರೆ ದೇಶದ್ರೋಹಿ ಅಥವಾ ಪಾಕಿಸ್ತಾನದ ಏಜೆಂಟ್ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಕೇಳಿದ 17 ವರ್ಷದ ಬಾಲಕನನ್ನೇ 'ಡೀಪ್ ಸ್ಟೇಟ್ ಪಾಕಿಸ್ತಾನಿ ಏಜೆಂಟ್' ಎಂದು ಕರೆಯಲಾಗಿದೆ.

ಬೆಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಭಾನುವಾರ ಬೆಂಗಳೂರಿನಲ್ಲಿ ತನ್ನ ಮೊದಲ ಪ್ರತಿಭಟನೆಯನ್ನು ನಡೆಸಿತು. ದೇಶವ್ಯಾಪಿ ಹೋರಾಟದ ಭಾಗವಾಗಿ ನಡೆದ ಈ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದವು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಕೇಂದ್ರ ಸರ್ಕಾರವು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಅದನ್ನೇ ಬಳಸಿಕೊಂಡು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಭಾರೀ ಮಳೆಯ ನಡುವೆಯೂ ಸುಮಾರು 250ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ, ನೀಟ್ ಪರೀಕ್ಷೆಯ ನಿರ್ವಹಣೆಯಲ್ಲಿ ನಡೆದಿರುವ ಎನ್ನಲಾದ ವೈಫಲ್ಯಗಳ ಹೊಣೆಯನ್ನು ಹೊತ್ತು ಧರ್ಮೇಂದ್ರ ಪ್ರಧಾನ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್, ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು. ವೇದಿಕೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA) ಸದಸ್ಯರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು.

ನೀಟ್ ಪರೀಕ್ಷೆ ವಿವಾದಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಕುರಿತು ಮಾತನಾಡಿದ ದೀಪ್ಕೆ, "ಇತರರ ಜೀವ ಉಳಿಸುವ ಕನಸು ಕಂಡಿದ್ದ ಯುವಕರು ತಮ್ಮದೇ ಜೀವವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶಕ್ಕೆ ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ" ಎಂದು ಹೇಳಿದರು.

"ಸರ್ಕಾರದ ವಿರುದ್ಧ ಪ್ರಶ್ನೆ ಕೇಳಿದರೆ ದೇಶದ್ರೋಹಿ ಅಥವಾ ಪಾಕಿಸ್ತಾನದ ಏಜೆಂಟ್ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಕೇಳಿದ 17 ವರ್ಷದ ಬಾಲಕನನ್ನೇ 'ಡೀಪ್ ಸ್ಟೇಟ್ ಪಾಕಿಸ್ತಾನಿ ಏಜೆಂಟ್' ಎಂದು ಕರೆಯಲಾಗಿದೆ" ಎಂದು ಆರೋಪಿಸಿದರು.

ಇದೇ ವೇಳೆ ತಮ್ಮ ತಾಯಿ ತಮ್ಮ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿದ ದೀಪ್ಕೆ, "ಭಾರತಕ್ಕೆ ಹಿಂದಿರುಗಬೇಡ, ನಿನ್ನನ್ನು ಬಂಧಿಸಬಹುದು ಎಂದು ತಾಯಿ ಹೇಳಿದ್ದರು. ನಾವು ಇನ್ನೆಷ್ಟು ದಿನ ಸರ್ಕಾರಕ್ಕೆ ಹೆದರಿ ಬದುಕಬೇಕು? ಜೈಲಿಗೆ ಹೋಗಬೇಕಾದರೆ ಹೋಗುತ್ತೇವೆ. ಮೊದಲು ನಾನೇ ಜೈಲಿಗೆ ಹೋಗುತ್ತೇನೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇವೆ" ಎಂದು ಹೇಳಿದರು.

ಬಳಿಕ ಯುವಕರನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ರಾಜ್, "ನನ್ನ ಯುವ ಕಾಕ್‌ರೋಚ್‌ಗಳೇ, ನಿಮ್ಮ ಧ್ವನಿಯನ್ನು ಎತ್ತುವುದನ್ನು ಮುಂದುವರಿಸಿ. ನಿವೃತ್ತಿ ವಯಸ್ಸು ದಾಟಿರುವವರು ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಅವರ ಕಾರ್ಯಗಳಿಗೆ ಯಾವುದೇ ಹೊಣೆಗಾರಿಕೆ ಅಥವಾ ಉತ್ತರದಾಯಿತ್ವವಿಲ್ಲ" ಎಂದು ವಾಗ್ದಾಳಿ ನಡೆಸಿದರು. ನೀಟ್ ವಿವಾದದ ಬಗ್ಗೆ ಪ್ರಧಾನಿ ಮೋದಿ ಅವರ ಮೌನವನ್ನೂ ಅವರು ಪ್ರಶ್ನಿಸಿದರು.

ಸೋನಂ ವಾಂಗ್ಚುಕ್ ಮಾತನಾಡಿ, "ಜನರ ಶಕ್ತಿ ಅವರ ಧ್ವನಿಯಲ್ಲಿದೆ. ಅಧಿಕಾರದಲ್ಲಿ ಯಾರು ಇದ್ದರೂ ಸರ್ಕಾರವನ್ನು ಪ್ರಶ್ನಿಸುತ್ತಲೇ ಇರಬೇಕು. ನಾವು ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸಲು ಇಲ್ಲಿ ಸೇರಿದ್ದೇವೆ. ಆದರೆ, ನಮ್ಮ ದೇಶದ ಬಹುತೇಕ ಎಲ್ಲಾ ವ್ಯವಸ್ಥೆಗಳು, ವಿಶೇಷವಾಗಿ ರಾಜಕೀಯ ವ್ಯವಸ್ಥೆಯೇ ಕೊಳೆತು ಹೋಗಿದೆ. ಭಾರತ ಈಗ ಪ್ರಜಾಪ್ರಭುತ್ವ ರಾಷ್ಟ್ರವಲ್ಲ ಎಂದು ಘೋಷಿಸಿ. ಇದು ಸರ್ವಾಧಿಕಾರಿ ರಾಷ್ಟ್ರವಾಗಿ ಮಾರ್ಪಟ್ಟಿದೆ" ಎಂದು ಅಭಿಪ್ರಾಯಪಟ್ಟರು.

ಪ್ರತಿಭಟನೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಟಿ ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ನಾನು ಅವರ ಹೆಸರನ್ನೂ ಉಲ್ಲೇಖಿಸಿದ್ದೇನೆಯೇ? ಬಂಧನದ ಬಳಿಕ ಉದಯನಿಧಿ ಸ್ಟಾಲಿನ್

ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; DMK ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ, ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ..!

ಸಿದ್ದರಾಮಯ್ಯ ಮಾತಿಗೆ ಯಾವುದೇ ಬೆಲೆ ಇಲ್ಲ, ಅವರ ಆಪ್ತನಾಗಿದ್ದಕ್ಕೆ ಸಚಿವ ಸ್ಥಾನ ಕೈ ತಪ್ಪಿದೆ: CM ಡಿಕೆಶಿ ವಿರುದ್ಧ ಸುಧಾಕರ್ ಕಿಡಿ

Crass, cheap and derogatory': ನಟಿ ತ್ರಿಶಾಗೆ ಅಸಭ್ಯ, ಕೀಳುಮಟ್ಟದಲ್ಲಿ ಅಪಮಾನ, ಉದಯನಿಧಿ ಸ್ಟಾಲಿನ್ ಕ್ಷಮೆಯಾಚನೆಗೆ ಖುಷ್ಬೂ ಸುಂದರ್ ಒತ್ತಾಯ!

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ: ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು; ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!