ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಹಶಿಕ್ಷಕರು ಹಾಗೂ ಅಡುಗೆ ಕೆಲಸದವರೊಂದಿಗೆ ಜಗಳವಾಡಿದ ನೊಂದು ವಿಷ ಸೇವಿಸಿದ್ದ ಮುಖ್ಯ ಶಿಕ್ಷಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
ಸಹಶಿಕ್ಷಕರು, ಅಡುಗೆ ಕೆಲಸದವರು ಮತ್ತು ಹೆಡ್ ಮಾಸ್ಟರ್ ಮಧ್ಯ ಒಳಜಗಳದ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಶಾಲೆಯ ಶೌಚಾಲಯಕ್ಕೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮುಖ್ಯ ಶಿಕ್ಷಕರಾದ ಜಯಪ್ಪ(55) ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ಜಯಪ್ಪ ಅವರನ್ನು ಸ್ಥಳೀಯರು, ಶಿಕ್ಷಕರು ತಕ್ಷಣವೇ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದರು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಪ್ಪ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಳೆದ ಕೆಲ ದಿನಗಳಿಂದ ಶಾಲೆಯಲ್ಲಿ ಒಳಜಗಳ ನಡೆಯುತ್ತಲೇ ಇತ್ತು. ನಿನ್ನೆ ಎಸ್ಡಿಎಂಸಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಈ ಸಭೆ ವೇಳೆ, ಮುಖ್ಯ ಶಿಕ್ಷಕ ಜಯಪ್ಪ ಅವರು ಎದ್ದು ಶೌಚಾಲಯಕ್ಕೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಗ್ಗೆ ಪೊಲೀಸರ ಪ್ರತಿಕ್ರಿಯೆ
ಮಲೇಬೆನ್ನೂರು ಠಾಣೆಯ ಪಿಎಸ್ಐ ಹಾರೂನ್ ಅಖ್ತರ್ ಮಾತನಾಡಿ, ಸಹಶಿಕ್ಷಕರು, ಅಡುಗೆ ಕೆಲಸದವರು ಹಾಗೂ ಮುಖ್ಯ ಶಿಕ್ಷಕ ಜಯಪ್ಪ ನಡುವೆ ಒಳಜಗಳವಿತ್ತು. ಈ ಹಿಂದೆ ಕೂಡ ಜಗಳ ನಡೆದಿತ್ತು. ಈ ಕಾರಣ ಜಯಪ್ಪ ಅವರು ವಿಷ ಸೇವಿಸಿದ್ದಾರೆ. ಅವರನ್ನು ಮಲೇಬೆನ್ನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು ಎಂದು ತಿಳಿಸಿದ್ದಾರೆ.