ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತನ್ನ ಮೂರನೇ ಹಂತದ 3A ರೆಡ್‌ಲೈನ್ ಯೋಜನೆಯಲ್ಲಿದ್ದ ವೆಟರಿನರಿ ಕಾಲೇಜು (Veterinary College) ಮೆಟ್ರೋ ನಿಲ್ದಾಣವನ್ನು ಕೈಬಿಟ್ಟಿರುವ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.
“ಪ್ರಯಾಣಿಕರ ಸಂಖ್ಯೆ ಕಡಿಮೆ” ಎಂಬ ಕಾರಣ ನೀಡಿ ನಿಲ್ದಾಣ ಕೈಬಿಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೇಳಿದ್ದರೂ, ಅದರದೇ ವಿವರವಾದ ಯೋಜನಾ ವರದಿ (DPR) ಈ ವಾದಕ್ಕೆ ವಿರುದ್ಧವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದು, ರಾಜ್ಯ ಸರ್ಕಾರದ ಪ್ರಸ್ತಾವಿತ ಶಾರ್ಟ್ ಟನಲ್ ರಸ್ತೆ ಯೋಜನೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ಮೆಟ್ರೋ ನಿಲ್ದಾಣವನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.
BMRCL ನೀಡಿರುವ “ಕಡಿಮೆ ಪ್ರಯಾಣಿಕರ ಸಂಖ್ಯೆ” ಎಂಬ ಕಾರಣವನ್ನು ಪ್ರಶ್ನಿಸಿರುವ ಅವರು, ಸಂಸ್ಥೆಯದೇ DPR ಪ್ರಕಾರ 2031ರ ವೇಳೆಗೆ ಪಶುವೈದ್ಯಕೀಯ ಕಾಲೇಜು ನಿಲ್ದಾಣದಲ್ಲಿ ಪ್ರತಿದಿನ 18,303 ಪ್ರಯಾಣಿಕರು ಏರಿಳಿಯಲಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಖ್ಯೆ ರೆಡ್‌ಲೈನ್‌ನ ಇತರ ಕೆಲವು ನಿಲ್ದಾಣಗಳಿಗಿಂತಲೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಈ ನಿಲ್ದಾಣವನ್ನು ಮೊದಲು ಸುರಂಗ (Underground) ನಿಲ್ದಾಣವಾಗಿ ಯೋಜಿಸಲಾಗಿತ್ತು. ಬಳಿಕ ಅದನ್ನು ಎಲಿವೇಟೆಡ್ ನಿಲ್ದಾಣವಾಗಿ ಮರು ವಿನ್ಯಾಸಗೊಳಿಸಿ, ಈಗ ಸಂಪೂರ್ಣವಾಗಿ ಕೈಬಿಡಲಾಗಿದೆ. ಈ ಬದಲಾವಣೆಗಳೆಲ್ಲವೂ ಟನಲ್ ರಸ್ತೆ ಯೋಜನೆಗೆ ಹೊಂದಾಣಿಕೆ ಮಾಡುವ ಉದ್ದೇಶದಿಂದ ನಡೆದಿವೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ರೆಡ್‌ಲೈನ್ ಮೆಟ್ರೋ ಯೋಜನೆ ಮತ್ತು ಟನಲ್ ರಸ್ತೆ ಯೋಜನೆಯ ನಡುವಿನ ಬೇಡಿಕೆಯನ್ನು ಹೋಲಿಕೆ ಮಾಡಿರುವ ಅವರು, 2033ರ ವೇಳೆಗೆ ಈ ಮಾರ್ಗದಲ್ಲಿ ದಿನಕ್ಕೆ 8 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುವ ನಿರೀಕ್ಷೆಯಿದೆ. ಆದರೆ, ಕಾರುಗಳಿಗಾಗಿ ಮಾಡುವ ಸುರಂಗ ರಸ್ತೆಯಲ್ಲಿ ಕೇವಲ 6,500 ವಾಹನಗಳು ಮಾತ್ರ ಹೋಗಲು ಸಾಧ್ಯ. ಸುರಂಗ ರಸ್ತೆಯ ಗೊಂದಲದಿಂದಾಗಿ ಈಗಾಗಲೇ ಎರಡು ವರ್ಷ ತಡವಾಗಿದ್ದು, ಯೋಜನೆಯ ವೆಚ್ಚ ದುಬಾರಿಯಾಗಿದೆ. ಈ ತಪ್ಪುಗಳನ್ನು ಮುಚ್ಚಿಹಾಕಲು ಈಗ BMRCL ನಿಲ್ದಾಣವನ್ನೇ ರದ್ದು ಮಾಡುತ್ತಿರುವುದು ವಿಚಿತ್ರವಾಗಿದೆ ಎಂದು ಕಿಡಿಕಾರಿದ್ದಾರೆ.
ಸಾವಿರಾರು ಜನರಿಗೆ ಅನುಕೂಲವಾಗುವ ಮೆಟ್ರೋ ನಿಲ್ದಾಣವನ್ನು ಕೈಬಿಟ್ಟು, ಕೇವಲ ಕಾರುಗಳಿಗಾಗಿ ಸುರಂಗ ರಸ್ತೆ ಮಾಡುತ್ತಿರುವುದು ಸರಿಯಾದ ನಿರ್ಧಾರವೇ? ಇದು ಕೇವಲ ಕಂಟ್ರಾಕ್ಟರ್‌ಗಳಿಗೆ ಲಾಭ ಮಾಡುವ ಆಡಳಿತ. ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸುಧಾರಿಸಬೇಕಾದರೆ BMLTA ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಬೇಕು. ಬೆಂಗಳೂರಿಗೆ ಉತ್ತಮ ಸೌಲಭ್ಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ನಾಗರಿಕರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ