ಧರ್ಮಸ್ಥಳ ಪ್ರಕರಣ 
ರಾಜ್ಯ

ಧರ್ಮಸ್ಥಳ ಪ್ರಕರಣ ತನಿಖೆ ಚುರುಕು: ನಾಪತ್ತೆಯಾಗಿರುವ 17 ಮಂದಿ DNA ಹೊಂದಾಣಿಕೆ ಪ್ರಕ್ರಿಯೆ ಆರಂಭ..!

2025ರಲ್ಲಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್‌ಐಟಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಏಳು ಮಾನವ ತಲೆಬುರುಡೆಗಳು ಹಾಗೂ ಇತರೆ ಅಸ್ಥಿಪಂಜರದ ಅವಶೇಷಗಳನ್ನು ಪತ್ತೆಹಚ್ಚಿತ್ತು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನಾಪತ್ತೆಯಾಗಿರುವ 17 ಮಂದಿಯ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಿದ್ದು, ಬಂಗ್ಲೆಗುಡ್ಡೆ ಮೀಸಲು ಅರಣ್ಯದಲ್ಲಿ ಪತ್ತೆಯಾದ ಮಾನವ ಅವಶೇಷಗಳೊಂದಿಗೆ ಅವರ ಡಿಎನ್‌ಎ ಹೊಂದಾಣಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ.

2025ರಲ್ಲಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್‌ಐಟಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಏಳು ಮಾನವ ತಲೆಬುರುಡೆಗಳು ಹಾಗೂ ಇತರೆ ಅಸ್ಥಿಪಂಜರದ ಅವಶೇಷಗಳನ್ನು ಪತ್ತೆಹಚ್ಚಿತ್ತು.

ಇದೇ ಪ್ರದೇಶದಿಂದ ಈ ಹಿಂದೆ ಮಾನವ ತಲೆಬುರುಡೆಯೊಂದನ್ನು ದೂರುದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೂರುದಾರನಾಗಿರುವ ಮಾಜಿ ಪೌರಕಾರ್ಮಿಕನು, ಅತ್ಯಾಚಾರ ಮತ್ತು ಕೊಲೆಗೀಡಾದ ಹಲವರ ಮೃತದೇಹಗಳನ್ನು ತಾನು ಸಮಾಧಿ ಮಾಡಿದ್ದಾಗಿ ಹೇಳಿಕೆ ನೀಡಿದ್ದನು.

ಮಾನವ ಅವಶೇಷಗಳು ಪತ್ತೆಯಾದ ಬಳಿಕ ಅವುಗಳನ್ನು ಪೊಲೀಸರು ವಶಕ್ಕೆ ಪಡೆದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (Unnatural Death Report) ಪ್ರಕರಣಗಳನ್ನು ದಾಖಲಿಸಿದ್ದರು.

ಬಳಿಕ ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗಾಗಿ ಅವಶೇಷಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿತ್ತು. ವಿಧಿ ವಿಜ್ಞಾನ ತಜ್ಞರ ಪ್ರಾಥಮಿಕ ವರದಿ ಪ್ರಕಾರ, ಪತ್ತೆಯಾದ ಎಲ್ಲಾ ಅವಶೇಷಗಳು ಪುರುಷರದ್ದಾಗಿವೆ ಎಂದು ತಿಳಿದುಬಂದಿದೆ.

ಈ ನಡುವೆ ಎಸ್‌ಐಟಿ ಕರ್ನಾಟಕ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ (SCRB), ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ (DCRB), ರಾಜ್ಯದ ವಿವಿಧ ಪೊಲೀಸ್ ಠಾಣೆಗಳು, ನೆರೆಯ ಕೇರಳ, ತೆಲಂಗಾಣ ಹಾಗೂ ಇತರ ರಾಜ್ಯಗಳಲ್ಲಿನ ನಾಪತ್ತೆ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸುತ್ತಿದೆ.

ವಿಶೇಷವಾಗಿ ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿರುವವರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಇದೇ ವೇಳೆ ತಮ್ಮ ಕುಟುಂಬ ಸದಸ್ಯರು ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೊಂಡು ಕೆಲವು ಕುಟುಂಬಗಳು ಎಸ್‌ಐಟಿಯನ್ನು ಸಂಪರ್ಕಿಸಿವೆ.

ಪತ್ತೆಯಾದ ಏಳು ಮಾನವ ಅವಶೇಷಗಳಲ್ಲಿ ಇಬ್ಬರು ನಾಪತ್ತೆಯಾದವರ ಬಗ್ಗೆ ಎಸ್‌ಐಟಿ ಮಹತ್ವದ ಮಾಹಿತಿ ಕಲೆಹಾಕಿದೆ. ಅವರಲ್ಲಿ ಒಬ್ಬರು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ 70 ವರ್ಷದ ಯು.ಬಿ. ಅಯ್ಯಪ್ಪ ಎಂದು ಶಂಕಿಸಲಾಗಿದೆ. ಸುಮಾರು ಏಳು ವರ್ಷಗಳ ಹಿಂದೆ ಅವರು ನಾಪತ್ತೆಯಾಗಿದ್ದರು. ಅಸ್ಥಿಪಂಜರಗಳ ಬಳಿ ಅವರ ಗುರುತಿನ ಚೀಟಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಶಂಕೆ ವ್ಯಕ್ತವಾಗಿದೆ.

ಇನ್ನೊಬ್ಬರು ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಆದಿಶೇಷ ನಾರಾಯಣ ಎಂದು ಗುರುತಿಸಲಾಗಿದೆ. ಅವರು 2013ರಲ್ಲಿ ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ. ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್‌ಐಟಿ ನಡೆಸಿದ ಶೋಧದ ವೇಳೆ ಅವರ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಪತ್ತೆಯಾಗಿತ್ತು.

ಎಸ್‌ಐಟಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ ಎಂಟು ನಾಪತ್ತೆಯಾದವರ ಕುಟುಂಬ ಸದಸ್ಯರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಮಾದರಿಗಳ ಡಿಎನ್‌ಎಯನ್ನು ಬಂಗ್ಲೆಗುಡ್ಡೆ ಅರಣ್ಯದಲ್ಲಿ ಪತ್ತೆಯಾದ ಮಾನವ ಅವಶೇಷಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಅಲ್ಲದೆ, ಇನ್ನೂ ಒಂಬತ್ತು ನಾಪತ್ತೆಯಾದವರ ಸಂಬಂಧಿಕರ ಮಾಹಿತಿಯನ್ನೂ ಸಂಗ್ರಹಿಸಲಾಗಿದ್ದು, ಅವರ ರಕ್ತದ ಮಾದರಿಗಳನ್ನು ಶೀಘ್ರದಲ್ಲೇ ಪಡೆದು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಡಿಎನ್‌ಎ ಹೊಂದಾಣಿಕೆ ಪ್ರಕ್ರಿಯೆಯ ಫಲಿತಾಂಶಗಳು ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ಮಾಹಿತಿ ನೀಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಒಪ್ಪಂದ ಬೆನ್ನಲ್ಲೇ Hormuzನಲ್ಲಿ ತೈಲ ಸಾಗಣೆ ಪುನರಾರಂಭ: ಲೆಬನಾನ್'ನಲ್ಲಿ ಮುಂದುವರೆದ ಉದ್ವಿಗ್ನತೆ, ಮಧ್ಯಪ್ರಾಚ್ಯ ಶಾಂತಿಗೆ ಕಂಟಕ..!

ಶತ್ರು ಮುಂದೆ ಶರಣಾಗುವ ಪ್ರಶ್ನೆಯೇ ಇಲ್ಲ, ಹತಾಶೆಯಿಂದ ಒಪ್ಪಂದಕ್ಕೆ ಮುಂದಾಗಿದ್ದಾರೆ: ಇರಾನ್‌ ಪರಮೋಚ್ಛ ನಾಯಕ ಮೊಜ್ತಾಬಾ ಖಮೇನಿ

ಪರಿಷತ್ತಿನಲ್ಲಿ ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್: ಗೋಹತ್ಯೆ ನಿಷೇಧ ಮಸೂದೆ ಪರಿಶೀಲಿಸುವತ್ತ ಸರ್ಕಾರದ ಚಿತ್ತ?

ವಿಧಾನ ಪರಿಷತ್ ಚುನಾವಣೆ: ಯಾವುದೇ ತಂತ್ರ ರೂಪಿಸಿಲ್ಲ, ಅಡ್ಡ ಮತದಾನ ಬಗ್ಗೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್

ವರ್ತನೆ ಬದಲಿಸಿಕೊಳ್ಳಿ, ಒಪ್ಪಂದ ಸಂಪೂರ್ಣವಾಗಿ ಪಾಲಿಸಬೇಕು: ಇರಾನ್‌ಗೆ JD ವ್ಯಾನ್ಸ್ ಎಚ್ಚರಿಕೆ