ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆ ಜೂನ್ 20ರಿಂದ ಆರಂಭವಾಗಲಿದ್ದು, ರಾಜ್ಯದಾದ್ಯಂತ ಸಿದ್ಧತೆಗಳು ಪೂರ್ಣಗೊಂಡಿವೆ.
ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ಜೂನ್ 20ರಿಂದ ಮತದಾರರ ಎಣಿಕೆ ನಮೂನೆಗಳ (Enumeration Forms) ಮುದ್ರಣ ಕಾರ್ಯ ಆರಂಭಿಸಲಿದೆ. ಈ ನಮೂನೆಗಳು ಬೂತ್ ಮಟ್ಟದ ಅಧಿಕಾರಿಗಳ (BLOs) ಕೈ ಸೇರಲು ಸುಮಾರು ಒಂಬತ್ತು ದಿನಗಳು ಬೇಕಾಗಲಿದ್ದು, ಜೂನ್ 30ರಿಂದ ಅವರು ಮನೆ ಮನೆಗೆ ತೆರಳಿ ಮತದಾರರಿಗೆ ನಮೂನೆಗಳನ್ನು ವಿತರಿಸಲಿದ್ದಾರೆ.
ಭಾರತ ಚುನಾವಣಾ ಆಯೋಗ (ECI) ಈ ವರ್ಷದ ಮೇ 14ರಂದು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ನ ಮೂರನೇ ಹಂತವನ್ನು ಜೂನ್ 20ರಿಂದ ಆರಂಭಿಸುವುದಾಗಿ ಘೋಷಿಸಿತ್ತು.
ಕರ್ನಾಟಕದಲ್ಲಿ ಇದು ಒಂಬತ್ತನೇ ವಿಶೇಷ ತೀವ್ರ ಪರಿಷ್ಕರಣೆ ಆಗಿದ್ದು, ಕೊನೆಯದಾಗಿ 2002ರಲ್ಲಿ ಈ ಪ್ರಕ್ರಿಯೆ ನಡೆದಿತ್ತು. ಆಗ ರಾಜ್ಯದಲ್ಲಿ ಸುಮಾರು 3 ಕೋಟಿ ಮತದಾರರಿದ್ದರು.
ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ 5,55,74,064 ಮತದಾರರಿದ್ದು, ಅವರಿಗಾಗಿ 11 ಕೋಟಿಗೂ ಅಧಿಕ ಎಣಿಕೆ ನಮೂನೆಗಳನ್ನು ಮುದ್ರಿಸಲಾಗುತ್ತಿದೆ.
ಪ್ರತಿಯೊಬ್ಬ ಅರ್ಹ ಮತದಾರರಿಗೆ ಎರಡು ವಿಶೇಷ ಪೂರ್ವಮುದ್ರಿತ ನಮೂನೆಗಳನ್ನು ನೀಡಲಾಗುತ್ತದೆ. ಮತದಾರರು ಎರಡನ್ನೂ ಭರ್ತಿ ಮಾಡಬೇಕು. ಒಂದನ್ನು ಬಿಎಲ್‌ಒಗೆ ಹಿಂತಿರುಗಿಸಬೇಕಾಗಿದ್ದು, ಮತ್ತೊಂದು ನಮೂನೆಯನ್ನು ಬಿಎಲ್‌ಒ ದೃಢೀಕರಿಸಿದ ಬಳಿಕ ಮತದಾರರು ತಮ್ಮ ಬಳಿ ಉಳಿಸಿಕೊಳ್ಳಬಹುದು.
ಜೂನ್ 30ರಿಂದ ಜನರ ನೇರ ಭಾಗವಹಿಸುವಿಕೆ ಆರಂಭವಾಗಲಿದ್ದು, ಅಗತ್ಯ ದಾಖಲೆಗಳು ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು ಸಿದ್ಧವಾಗಿಟ್ಟುಕೊಂಡು ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅನ್ಬುಕುಮಾರ್ ಮನವಿ ಮಾಡಿದ್ದಾರೆ. ಮತದಾರರು ನಮೂನೆಗೆ ಸಹಿ ಹಾಕಿ ಬಿಎಲ್‌ಒಗಳಿಗೆ ಹಸ್ತಾಂತರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಜೂನ್ 18ರ ತನಕದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದ ಶೇ.91.5ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಶೇ.75ರಷ್ಟು ಜನಸಂಖ್ಯೆಯ ಮ್ಯಾಪಿಂಗ್ ಕಾರ್ಯ ನಡೆದಿದೆ.
ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವವರೆಗೆ ಈ ಮ್ಯಾಪಿಂಗ್ ಕಾರ್ಯ ಮುಂದುವರಿಯಲಿದೆ. ಮುದ್ರಣಗೊಂಡ ನಮೂನೆಗಳನ್ನು ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ERO) ಹಾಗೂ ಅಲ್ಲಿಂದ ಬಿಎಲ್‌ಒಗಳಿಗೆ ತಲುಪಿಸಿ ಮನೆ ಮನೆಗೆ ವಿತರಿಸುವ ಪ್ರಕ್ರಿಯೆಗೆ ಸುಮಾರು ಒಂಬತ್ತು ದಿನಗಳು ಬೇಕಾಗುತ್ತದೆ.
ರಾಜ್ಯದಲ್ಲಿ ಎಸ್‌ಐಆರ್ ಕಾರ್ಯಾಚರಣೆಗಾಗಿ ಒಂದು ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟು 59,050 ಬಿಎಲ್‌ಒಗಳು ಹಾಗೂ 6,000 ಬಿಎಲ್‌ಒ ಮೇಲ್ವಿಚಾರಕರು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳುವುದರೊಂದಿಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಮೇ 14ರಂದು ಎಸ್‌ಐಆರ್ ಘೋಷಣೆಯಾದ ಸಂದರ್ಭದಲ್ಲಿ ರಾಜ್ಯದಲ್ಲಿ 25,284 ಬೂತ್ ಮಟ್ಟದ ಏಜೆಂಟರು (BLA) ಇದ್ದರು. ಆದರೆ, ಜೂನ್ 18ರ ವೇಳೆಗೆ ಈ ಸಂಖ್ಯೆ 72,058ಕ್ಕೆ ಏರಿಕೆಯಾಗಿದೆ. ಇದರಲ್ಲಿ ಕಾಂಗ್ರೆಸ್ 37,026, ಬಿಜೆಪಿ 32,009 ಹಾಗೂ ಜೆಡಿಎಸ್ 3,023 ಬಿಎಲ್‌ಎಗಳನ್ನು ನಿಯೋಜಿಸಿದೆ.
ಎಸ್‌ಐಆರ್ ಪ್ರಕ್ರಿಯೆಗಾಗಿ ಚುನಾವಣಾ ಅಧಿಕಾರಿಗಳು 2002 ಮತ್ತು 2025ರ ಮತದಾರರ ಪಟ್ಟಿಗಳನ್ನು ಆಧಾರವಾಗಿ ಬಳಸುತ್ತಿದ್ದಾರೆ. ಈ ಅವಧಿಯಲ್ಲಿ ವಿಶೇಷ ಸಾರಾಂಶ ಪರಿಷ್ಕರಣೆ (Special Summary Revision) ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಆದರೆ, ಹೊಸ ಮತದಾರರ ನೋಂದಣಿಗಾಗಿ ಬಿಎಲ್‌ಒಗಳು ಫಾರ್ಮ್-6 ಅನ್ನು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ.
ಮತದಾರರಿಗೆ ನೆರವು ನೀಡಲು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಜೂನ್ ಅಂತ್ಯದ ವೇಳೆಗೆ ಆನ್‌ಲೈನ್ ಮೂಲಕವೂ ಎಸ್‌ಐಆರ್ ನಮೂನೆಗಳನ್ನು ಸಲ್ಲಿಸುವ ವ್ಯವಸ್ಥೆ ಆರಂಭವಾಗಲಿದೆ.
ನಮೂನೆಗಳ ಸುರಕ್ಷತೆ ಹಾಗೂ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳಿಂದ ವ್ಯಕ್ತವಾಗುತ್ತಿರುವ ಆತಂಕಗಳ ಕುರಿತು ಪ್ರತಿಕ್ರಿಯಿಸಿದ ಅನ್ಬುಕುಮಾರ್, ಈವರೆಗೆ ತಮ್ಮ ಕಚೇರಿಗೆ ಯಾವುದೇ ಅಧಿಕೃತ ಆಕ್ಷೇಪಣೆ ಬಂದಿಲ್ಲ ಎಂದು ಹೇಳಿದರು. ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿರುವುದರಿಂದ ಹೆಚ್ಚುವರಿ ಭದ್ರತಾ ಕ್ರಮಗಳ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.