ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯವರು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಹೊರಟಿರುವುದು ಅವರ ಪಕ್ಷದ ತೀರ್ಮಾನ. ಆದರೆ, ನಾನು ಶಾಸಕರಿಂದ ಆಣೆ ಪ್ರಮಾಣ ಮಾಡಿಸುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ಜೆಡಿಎಸ್ ಶಾಸಕರ ಸಭೆಯಲ್ಲಿ ಎಲ್ಲ 17 ಶಾಸಕರು ಹಾಜರಿದ್ದರು. ನಾವೆಲ್ಲರೂ ನಮ್ಮ ಅಭಿವೃದ್ಧಿಗೆ ಮತ ಹಾಕಿದ್ದೇವೆ ಎಂದು ಹೇಳಿದರು. ಹೀಗಾಗಿ ನಮ್ಮ ಪಕ್ಷದಲ್ಲಿ ಆಣೆ ಪ್ರಮಾಣದಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ನನ್ನ ನಂಬಿಕೆ, ಹಾಗಾಗಿ ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ ಎಂದು.ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರನ್ನು ಪತ್ತೆಹಚ್ಚಲು ಬಿಜೆಪಿ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲು ನಿರ್ಧರಿಸುವ ಬಗ್ಗೆ ಪ್ರಶ್ನಿಸಿದಾಗ ಕೇಂದ್ರ ಸಚಿವರು, ಅಡ್ಡ ಮತದಾನ ಎಂಬುದು ತುಂಬ ಬೇಸರದ ವಿಷಯ. ಯಾರು ಈ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬುದು ಧರ್ಮಸ್ಥಳದಲ್ಲಿ ಬಯಲಿಗೆ ಬರಬಹುದು. ಧರ್ಮಸ್ಥಳದಲ್ಲಿ ಸತ್ಯ ಹೊರಕ್ಕೆ ಬರುತ್ತದೆ ಎಂಬ ನಂಬಿಕೆ ಅವರಿಗೆ ಇದೆ ಎಂಬ ಉದ್ದೇಶದಿಂದ ಬಿಜೆಪಿ ನಾಯಕರು ಅಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿರಬಹುದು ಎಂದರು.
ಮಾಜಿ ಮಂತ್ರಿ ಜಮೀರ್ ಅಹ್ಮದ್ ಸೇರಿದಂತೆ ಇನ್ನು ಅನೇಕ ನಾಯಕರು ಜೆಡಿಎಸ್ ಪಕ್ಷಕ್ಕೆ ಸೇರುತ್ತಾರೆ ಎನ್ನುವ ಸುದ್ದಿ ಇದೆಯಲ್ಲ ಎನ್ನುವ ಪ್ರಶ್ನೆಗೆ, ಈ ಬಗ್ಗೆ ನಾನು ಏನೂ ಹೇಳಲಾರೆ. ಮುಂದೆ ಯಾರು ಮುಖ್ಯಮಂತ್ರಿ ಆಗಬೇಕು, ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನತೆ ತೀರ್ಮಾನಿಸುತ್ತಾರೆ. ತಮಿಳುನಾಡಿನಲ್ಲಿ ಚಿತ್ರನಟ ವಿಜಯ್ ಅವರು ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆಗುತ್ತಾರೆ ಎಂದು ಯಾರಾದರೂ ಪೂಜೆ ಮಾಡಿದ್ದರೆ? ಈ ಕೆಟ್ಟ ಸರ್ಕಾರದಿಂದ ರೋಸಿ ಹೋಗಿರುವ ರಾಜ್ಯದಲ್ಲಿ ಜನರು ಬದಲಾವಣೆ ತರುತ್ತಾರೆ ಎಂದು ನಂಬಿದ್ದೇನೆ ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದರು.