ಬೆಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಮರುಪರಿಷ್ಕರಣೆಯ ಬೆನ್ನಲ್ಲೇ, ಈಗ 'ಅನ್ನಭಾಗ್ಯ' ಯೋಜನೆಗೂ ಕತ್ತರಿ ಬೀಳುವ ಲಕ್ಷಣಗಳು ದಟ್ಟವಾಗಿವೆ.
ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಅನ್ನಭಾಗ್ಯ ಯೋಜನೆಯಲ್ಲಿ ಆಗಲಿರುವ ಮಹತ್ವದ ಬದಲಾವಣೆಗಳ ಕುರಿತು ಸುಳಿವು ನೀಡಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, 'ಅನ್ನಭಾಗ್ಯ ಯೋಜನೆಯನ್ನು ನಿಜವಾದ ಬಡವರಿಗೆ ತಲುಪಿಸುವುದು ನಮ್ಮ ಗುರಿ.
ಆದರೆ, ಪ್ರಸ್ತುತ ಸುಮಾರು 13 ರಿಂದ 14 ಲಕ್ಷ ಜನರು ಅನರ್ಹರಾಗಿದ್ದರೂ ಬಿಪಿಎಲ್ (BPL) ಕಾರ್ಡ್‌ಗಳನ್ನು ಹೊಂದಿದ್ದಾರೆ. ಅಂತಹ ಅನರ್ಹರನ್ನು ಪತ್ತೆ ಹಚ್ಚಿ ಅವರನ್ನು ಪಟ್ಟಿಯಿಂದ ಕೈಬಿಡುವ ಕೆಲಸವನ್ನು ನಾವು ಶೀಘ್ರದಲ್ಲೇ ಮಾಡಲಿದ್ದೇವೆ' ಎಂದು ತಿಳಿಸಿದರು.
ಅನರ್ಹರು ಸ್ವಯಂಪ್ರೇರಿತರಾಗಿ ತಮ್ಮ ಕಾರ್ಡ್‌ಗಳನ್ನು ಎಪಿಎಲ್ (APL) ಗೆ ವರ್ಗಾಯಿಸಿಕೊಳ್ಳಬೇಕು ಎಂದು ಈ ಹಿಂದೆಯೇ ಮನವಿ ಮಾಡಲಾಗಿತ್ತು. ಈಗ ಸರ್ಕಾರವು ಈಗಾಗಲೇ ಅನರ್ಹರ ಪಟ್ಟಿಯ ವರದಿಯನ್ನು ತರಿಸಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ.