ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಡಿಕೆ.ಶಿವಕುಮಾರ್. 
ರಾಜ್ಯ

Mumbai ಮಾದರಿಯಲ್ಲಿ ಬೆಂಗಳೂರು ಕೊಳಗೇರಿ ಅಭಿವೃದ್ಧಿ; ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಿಎಂ ಡಿಕೆ. ಶಿವಕುಮಾರ್ ಸೂಚನೆ

ಪ್ರತಿ ಬಡ ಕುಟುಂಬಕ್ಕೂ ಸ್ವಂತ ಸೂರು ಸಿಗಬೇಕು. ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಮತ್ತು ನಿವೇಶನ ಹಂಚಿಕೆಗೆ ಮೊದಲ ಆದ್ಯತೆ ನೀಡಬೇಕು.

ಬೆಂಗಳೂರು: ರಾಜ್ಯದ ಕೊಳಗೇರಿಗಳ ಪುನರ್‌ಅಭಿವೃದ್ಧಿಗೆ ಮುಂಬೈ ಮಾದರಿಯನ್ನು ಅಳವಡಿಸಿಕೊಳ್ಳುವ ಕುರಿತು ಅಧ್ಯಯನ ನಡೆಸಿ, ಸಮಗ್ರ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಗ್ರಾಮೀಣ ವಸತಿ ನಿರ್ಮಾಣ ಹಾಗೂ ನಿವೇಶನ ಹಂಚಿಕೆ ಪ್ರಗತಿ ನಿಧಾನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬೈನ ಕೊಳಗೇರಿ ಪುನರ್‌ಅಭಿವೃದ್ಧಿ ಮಾದರಿಯನ್ನು ಅಧಿಕಾರಿಗಳು ಅಧ್ಯಯನ ಮಾಡಬೇಕು. ಅಲ್ಲದೆ, ಮುಂಬೈಯಲ್ಲಿ ನೀಡಲಾಗುತ್ತಿರುವ ಮನೆಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಮನೆಗಳನ್ನು ನಿರ್ಮಿಸುವ ಸಾಧ್ಯತೆಗಳ ಕುರಿತು ವರದಿ ಸಿದ್ಧಪಡಿಸಿ ಮುಂದಿನ ಸಚಿವ ಸಂಪುಟ ಸಭೆಗೆ ಸಲ್ಲಿಸಬೇಕು ಎಂದು ಸೂಚಿಸಿದರು.

“ಪ್ರತಿ ಬಡ ಕುಟುಂಬಕ್ಕೂ ಸ್ವಂತ ಸೂರು ಸಿಗಬೇಕು. ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಮತ್ತು ನಿವೇಶನ ಹಂಚಿಕೆಗೆ ಮೊದಲ ಆದ್ಯತೆ ನೀಡಬೇಕು” ಎಂದು ಹೇಳಿದರು.

ವಸತಿ ಹಂಚಿಕೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಹರಾಜು ಪದ್ಧತಿಯನ್ನು ರದ್ದುಗೊಳಿಸಿ, ಅದರ ಬದಲಿಗೆ ಪಾರದರ್ಶಕ ಸಾರ್ವಜನಿಕ ಲಾಟರಿ ವ್ಯವಸ್ಥೆ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

“ಹರಾಜು ಪದ್ಧತಿಯಿಂದ ನಿಜವಾದ ಅರ್ಹ ಫಲಾನುಭವಿಗಳಿಗೆ ಮನೆಗಳು ಸಿಗುತ್ತಿವೆಯೇ ಅಥವಾ ಹಣವಿರುವವರಿಗೆ ಮಾತ್ರ ಸಿಗುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಪಾರದರ್ಶಕ ಲಾಟರಿ ವ್ಯವಸ್ಥೆ ಉತ್ತಮ” ಎಂದು ಅಭಿಪ್ರಾಯಪಟ್ಟರು.

ಯಾವುದೇ ವಸತಿ ಯೋಜನೆಯನ್ನು ಆರಂಭಿಸುವ ಮೊದಲು ಸಮರ್ಪಕ ಯೋಜನೆ ರೂಪಿಸಬೇಕು. ಬೇಡಿಕೆಯೇ ಇಲ್ಲದ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಬಾರದು, ಮನೆಗಳ ಜೊತೆಗೆ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಬಳಿಕ ಕರ್ನಾಟಕ ಗೃಹ ಮಂಡಳಿಯ ಯೋಜನೆಗಳ ಪ್ರಗತಿ ಪರಿಶೀಲಿಸಿದ ಅವರು, ಒಟ್ಟು 568 ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಅವುಗಳಲ್ಲಿ 280 ಯೋಜನೆಗಳು ಪೂರ್ಣಗೊಂಡಿವೆ. ಉಳಿದ 288 ಯೋಜನೆಗಳು ವಿವಿಧ ಕಾರಣಗಳಿಂದ ಬಾಕಿ ಉಳಿದಿವೆ ಎಂದು ಮಾಹಿತಿ ಪಡೆದರು.

ಬಾಕಿ ಉಳಿದ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ, ಯಾವುದೇ ದುರುಪಯೋಗವಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದಲ್ಲದೆ, ಶಿವರಾಮ ಕಾರಂತ ಬಡಾವಣೆಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣದ ಹೊಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸುವಂತೆ ಸೂಚಿಸಿದರು.

ಬಹಳ ವರ್ಷಗಳ ಹಿಂದೆ ಮುಂಗಡ ಹಣ ಪಾವತಿಸಿ ಮನೆಗಾಗಿ ಅರ್ಜಿ ಸಲ್ಲಿಸಿರುವ ಅನೇಕ ಮಂದಿ ಇನ್ನೂ ಮನೆಗಾಗಿ ಕಾಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಬಾಕಿ ಉಳಿದ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

“ಸ್ವಂತ ಮನೆ ಎಂಬುದು ಪ್ರತಿಯೊಬ್ಬ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಕನಸು. ಅರ್ಜಿದಾರರನ್ನು ಅನಿರ್ದಿಷ್ಟವಾಗಿ ಕಾಯಿಸುವುದು ಸರಿಯಲ್ಲ. ಮನೆಗಳ ಹಂಚಿಕೆ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು” ಎಂದು ಹೇಳಿದರು.

ಅಲ್ಲದೆ, ಫಲಾನುಭವಿಗಳ ಪಟ್ಟಿಯನ್ನು ಶೀಘ್ರವಾಗಿ ಪಡೆಯಲು ಶಾಸಕರೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ವಂಚನೆ ಆರೋಪ: ಓಜೋನ್ ಅರ್ಬಾನಾ CMD ವಾಸುದೇವನ್ ಬಂಧನ!

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!