ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಿಎಂ ಡಿ.ಕೆ. ಶಿವಕುಮಾರ್. 
ರಾಜ್ಯ

ತೆರಿಗೆ ವಂಚನೆಗೆ ಬ್ರೇಕ್ ಹಾಕಿ, GST ಸಂಗ್ರಹ ಹೆಚ್ಚಿಸಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಇಲಾಖೆಯ ಕಾರ್ಯವೈಖರಿಯನ್ನು ನಾನು ಸ್ವತಃ ಗಮನಿಸುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ನಿರಂತರ ಮಾಹಿತಿ ಪಡೆಯುತ್ತಿದ್ದೇನೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ.

ಬೆಂಗಳೂರು: ತೆರಿಗೆ ವಂಚನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ನಕಲಿ ಜಿಎಸ್‌ಟಿ ಬಿಲ್‌ಗಳು, ಬೋಗಸ್ ಕಂಪನಿಗಳು ಹಾಗೂ ತೆರಿಗೆ ವಂಚನೆ ವಿರುದ್ಧ ಶೂನ್ಯ ಸಹಿಷ್ಣುತೆ (Zero Tolerance) ನೀತಿ ಅನುಸರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, "ವಾಣಿಜ್ಯ ತೆರಿಗೆ ಅಧಿಕಾರಿಗಳೇ ಸರ್ಕಾರದ ಶಕ್ತಿ. ಈ ಹಣಕಾಸು ವರ್ಷದಲ್ಲಿ ನಿಗದಿಪಡಿಸಿರುವ ತೆರಿಗೆ ಸಂಗ್ರಹ ಗುರಿಯನ್ನು ಇಲಾಖೆ ಖಂಡಿತ ಮೀರಲಿದೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.

"ಇಲಾಖೆಯ ಕಾರ್ಯವೈಖರಿಯನ್ನು ನಾನು ಸ್ವತಃ ಗಮನಿಸುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ನಿರಂತರ ಮಾಹಿತಿ ಪಡೆಯುತ್ತಿದ್ದೇನೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ" ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಗಡಿಗಳು ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ಮಾನ್ಯ ದಾಖಲೆಗಳಿಲ್ಲದೆ ಯಾವುದೇ ಸರಕು ಸಾಗಣೆ ವಾಹನಗಳು ಪ್ರವೇಶಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ತೆರಿಗೆ ವಂಚನೆ ತಡೆಯಲು ನೆರೆಯ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದರು.

ಇದೇ ವೇಳೆ ಸುಮಾರು 12 ಲಕ್ಷ ತೆರಿಗೆದಾರರನ್ನು 360 ಡಿಗ್ರಿ ವಿಶ್ಲೇಷಣೆಯ ಮೂಲಕ ತಂತ್ರಜ್ಞಾನ ಹಾಗೂ ಡೇಟಾ ಅನಾಲಿಟಿಕ್ಸ್ ಬಳಸಿ ಮೇಲ್ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ, "ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು. ಅವರೊಂದಿಗೆ ಗೌರವಯುತವಾಗಿ ವರ್ತಿಸಬೇಕು. ಆದರೆ ತೆರಿಗೆ ವಂಚನೆ ಮಾಡುವವರ ವಿರುದ್ಧ ಯಾವುದೇ ರಾಜಿ ಇರಬಾರದು" ಎಂದು ಸ್ಪಷ್ಟಪಡಿಸಿದರು.

ಅಲ್ಲದೆ, ಪ್ರತಿ ಜಂಟಿ ಆಯುಕ್ತರು ತಮ್ಮ ತೆರಿಗೆ ಸಂಗ್ರಹ ಗುರಿ ಸಾಧಿಸಬೇಕು. ಜಿಎಸ್‌ಟಿ ರಿಟರ್ನ್‌ಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ನೋಡಿಕೊಳ್ಳಬೇಕು. ರಿಟರ್ನ್ ಸಲ್ಲಿಸದವರನ್ನು ಗುರುತಿಸಿ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಕಾನೂನು ಉಲ್ಲಂಘಿಸದೆ ಹಾಗೂ ತೆರಿಗೆದಾರರಿಗೆ ಕಿರುಕುಳ ನೀಡದೆ ಇಂದಿನ ತೆರಿಗೆ ಸಂಗ್ರಹವನ್ನು ದ್ವಿಗುಣಗೊಳಿಸುವ ಸಾಮರ್ಥ್ಯ ಇಲಾಖೆಯ ಅಧಿಕಾರಿಗಳಿಗೆ ಇದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಜಿಎಸ್‌ಟಿ ಸಂಗ್ರಹದ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಜಿಎಸ್‌ಟಿ ಸಂಗ್ರಹ ಶೇ.9ರಷ್ಟು ಹೆಚ್ಚಳವಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಗುಜರಾತ್, ತಮಿಳುನಾಡು ಹಾಗೂ ಹರಿಯಾಣಕ್ಕಿಂತ ಕರ್ನಾಟಕ ಉತ್ತಮ ಸಾಧನೆ ಮಾಡಿದ್ದು, ಶೇ.10ರಷ್ಟು ಬೆಳವಣಿಗೆ ದಾಖಲಿಸಿರುವ ತೆಲಂಗಾಣದ ನಂತರ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೇರಲು ಅಧಿಕಾರಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.

ಐಐಟಿ ಹೈದರಾಬಾದ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಜಿಎಸ್‌ಟಿ ಅನಾಲಿಟಿಕಲ್ ಪೋರ್ಟಲ್ ಮೂಲಕ ಡೇಟಾ ವಿಶ್ಲೇಷಣೆ ನಡೆಸಿ ತೆರಿಗೆ ವಂಚನೆ ಪತ್ತೆ ಹಚ್ಚಲಾಗುತ್ತಿದೆ. ತೆರಿಗೆ ಮೇಲ್ಮನವಿ ಪ್ರಕರಣಗಳ ವಿಲೇವಾರಿಯನ್ನು ವೇಗಗೊಳಿಸಿ, ತೆರಿಗೆ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಸರಳ ಹಾಗೂ ತೆರಿಗೆದಾರ ಸ್ನೇಹಿಯನ್ನಾಗಿ ಮಾಡಬೇಕು ಎಂದು ಹೇಳಿದರು.

ತೆರಿಗೆದಾರರು ಸರ್ಕಾರಿ ಕಚೇರಿಗಳಿಗೆ ಅಲೆದಾಡದಂತೆ ಮಾಡಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ತೆರಿಗೆಗೆ ಸಂಬಂಧಿಸಿದ ಮಾರ್ಗದರ್ಶನ, ಸಹಾಯ ಹಾಗೂ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು, ನಕಲಿ ಕಂಪನಿಗಳು ಹಾಗೂ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪ್ರಕರಣಗಳಲ್ಲಿ ಇದುವರೆಗೆ 166 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಿಎಂ, ಬೋಗಸ್ ಕಂಪನಿಗಳನ್ನು ಸ್ಥಾಪಿಸುವವರ ವಿರುದ್ಧ ಕಾನೂನು ಕ್ರಮವನ್ನು ಮತ್ತಷ್ಟು ತೀವ್ರಗೊಳಿಸಬೇಕು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಬಂಧನಗಳ ಸಂಖ್ಯೆ ಕಡಿಮೆಯಾಗಿತ್ತು. ಈಗ ಬಂಧನ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!

ನೀಟ್ ಪ್ರತಿಭಟನೆ: ಪೊಲೀಸರ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಉನ್ನತಾಧಿಕಾರ ಸಮಿತಿ

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು

ಪಬ್‌ನಲ್ಲಿ ಶಾಕಿಂಗ್ ಘಟನೆ: ಬಾರ್‌ಟೆಂಡರ್ ಯುವತಿಗೆ ಚಾಕುವಿನಿಂದ ಇರಿದು ಕೊಂದ ಸಹೋದ್ಯೋಗಿ; ಭಯಾನಕ ಕೃತ್ಯ CCTVಯಲ್ಲಿ ಸೆರೆ! Video