

ಜಬಲ್ಪುರ: ಮಧ್ಯ ಪ್ರದೇಶದ ಜಬಲ್ಪುರದ ಪಬ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕೆಲಸದ ಸ್ಥಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ 20 ವರ್ಷದ ಯುವತಿ ಬಾರ್‌ಟೆಂಡರ್ ಕೊಲೆಯಲ್ಲಿ ಅಂತ್ಯವಾಗಿದೆ. ಭಯಾನಕ ಕೃತ್ಯ ಪಬ್ ನ ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಜಬಲ್‌ಪುರದ ಗೋಹಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೀನ್‌ದಯಾಳ್ ಚೌಕ್ ಬಳಿಯ ಪಬ್ ನಲ್ಲಿ ಈ ಘಟನೆ ವರದಿಯಾಗಿದೆ. ಮೃತ ಬಾರ್‌ಟೆಂಡರ್, ಮುಸ್ಕಾನ್ ಚೌಧರಿ ಎಂದು ಗುರುತಿಸಲಾಗಿದ್ದು, ಆರೋಪಿ ಪವನ್ ವರ್ಮಾ ಬಾರ್‌ನಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಸಂಜೆ 4.30 ರ ಸುಮಾರಿಗೆ ಕೆಲಸಕ್ಕೆ ಸಂಬಂಧಿಸಿದ ವಿಷಯಕ್ಕೆ ಇಬ್ಬರ ನಡುವೆ ಜಗಳ ಆರಭವಾಗಿದೆ. ಜಗಳ ವಿಕೋಪಕ್ಕೆ ಹೋಗಿ, ಪವನ್ ವರ್ಮಾ, ಮುಸ್ಕಾನ್ ಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದ ಮುಸ್ಕಾನ್ ಅವರನ್ನು ಆಕೆ, ಸಹೋದ್ಯೋಗಿಗಳು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವೈದ್ಯರು ಆಕೆ ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆಂದು ಘೋಷಿಸಿದ್ದಾರೆ.
ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಆಯುಷ್ ಜಾಖರ್ ಹೇಳಿದ್ದಾರೆ.