ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಹವಾಮಾನ ವೈಪರೀತ್ಯ ಮತ್ತು ಪರಿಸರ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಪ್ರಮುಖ ಹೆಜ್ಜೆಯನ್ನಿಟ್ಟಿದೆ.
ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಅವರನ್ನು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಹವಾಮಾನ ಬದಲಾವಣೆ ಸಲಹೆಗಾರರನ್ನಾಗಿ ಹಾಗೂ ಕರ್ನಾಟಕದ ಹವಾಮಾನ ರಾಯಭಾರಿಯನ್ನಾಗಿ ಅಧಿಕೃತವಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
1980ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಉಪೇಂದ್ರ ತ್ರಿಪಾಠಿ ಅವರನ್ನು ಗೌರವಾಧಾರಿತ (Honorary) ಹುದ್ದೆಗೆ ನೇಮಕ ಮಾಡಲಾಗಿದ್ದು, ಅವರಿಗೆ ರಾಜ್ಯ ಸಚಿವರ ದರ್ಜೆ ಮತ್ತು ಸ್ಥಾನಮಾನ ನೀಡಲಾಗಿದೆ.
ನವೀಕರಿಸಬಹುದಾದ ಇಂಧನ (Renewable Energy) ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಉಪೇಂದ್ರ ತ್ರಿಪಾಠಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಸಾರ್ವಜನಿಕ ಆಡಳಿತದಲ್ಲಿ ಅತ್ಯುತ್ತಮ ಸೇವೆಗಾಗಿ ಅವರಿಗೆ ಪ್ರಧಾನಮಂತ್ರಿಗಳ ಅತ್ಯುತ್ತಮ ಸಾರ್ವಜನಿಕ ಆಡಳಿತ ಪ್ರಶಸ್ತಿ (Prime Minister’s Award for Excellence in Public Administration) ಲಭಿಸಿದೆ.
2017ರಿಂದ 2021ರವರೆಗೆ ಅವರು ಅಂತರರಾಷ್ಟ್ರೀಯ ಸೌರ ಒಕ್ಕೂಟ (International Solar Alliance - ISA) ಸಂಸ್ಥೆಯ ಮೊದಲ ಮಹಾನಿರ್ದೇಶಕರಾಗಿ (Founding Director General) ಕಾರ್ಯನಿರ್ವಹಿಸಿದ್ದರು. ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮೊದಲ ಒಪ್ಪಂದ ಆಧಾರಿತ ಬಹುಪಕ್ಷೀಯ ಅಂತರರಾಷ್ಟ್ರೀಯ ಸಂಸ್ಥೆಯಾದ ISA, ಅವರ ಅವಧಿಯಲ್ಲಿ ಗಮನಾರ್ಹ ಸಾಧನೆ ಮಾಡಿತ್ತು.
ಇದಕ್ಕೂ ಮುನ್ನ 2014ರಿಂದ 2016ರವರೆಗೆ ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (Ministry of New and Renewable Energy) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಇದರ ಜೊತೆಗೆ ರಾಷ್ಟ್ರೀಯ ಸೌರ ಇಂಧನ ಸಂಸ್ಥೆ (National Institute of Solar Energy), ರಾಷ್ಟ್ರೀಯ ಗಾಳಿ ಇಂಧನ ಸಂಸ್ಥೆ (National Institute of Wind Energy), ರಾಷ್ಟ್ರೀಯ ಜೈವಿಕ ಇಂಧನ ಸಂಸ್ಥೆ (National Institute of Bio Energy) ಹಾಗೂ ಅಸೋಸಿಯೇಷನ್ ಆಫ್ ರಿನ್ಯೂಯಬಲ್ ಎನರ್ಜಿ ಏಜೆನ್ಸೀಸ್ ಸಂಸ್ಥೆಗಳ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.
ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನ ಹಾಗೂ ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಅವರ ಪರಿಣತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಮಹತ್ವದ ಜವಾಬ್ದಾರಿಯನ್ನು ನೀಡಿದೆ.