ಸೋಲಾರ್ ಬೆಳಕಲ್ಲಿ ಝಗಮಗಿಸಲಿದೆ ವಿಧಾನಸೌಧ: ಪಾರ್ಕಿಂಗ್ ಪ್ರದೇಶದಲ್ಲಿ 'Solar panels' ಅಳವಡಿಕೆ, ವರ್ಷಕ್ಕೆ ಲಕ್ಷಾಂತರ ರೂ. ವಿದ್ಯುತ್ ಉಳಿತಾಯ
ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧ ಇನ್ನು ಮುಂದೆ ಸೌರಶಕ್ತಿ ಬೆಳಕಲ್ಲಿ ಝಗಮಗಿಸಲಿದೆ.
ಸ್ವಚ್ಛ ಹಾಗೂ ನವೀಕರಿಸಬಹುದಾದ ಇಂಧನ ಬಳಕೆಗೆ ಉತ್ತೇಜನ ನೀಡುವ ಮಹತ್ವದ ಕ್ರಮವಾಗಿ ವಿಧಾನಸೌಧ ಮತ್ತು ವಿಕಾಸಸೌಧ ಆವರಣದಲ್ಲಿ ಸೌರ ವಿದ್ಯುತ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದ್ದು, ಈ ಕ್ರಮವು ಇತರ ಸರ್ಕಾರಿ ಕಟ್ಟಡಗಳಿಗೂ ಮಾದರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸೌಧವು ಐತಿಹಾಸಿಕ ಕಟ್ಟಡವಾಗಿದ್ದು, ಮೇಲ್ಚಾವಣಿಯಲ್ಲಿ ಸ್ಥಳಾಭಾವ ಇರುವ ಕಾರಣ ಮೇಲ್ಚಾವಣಿಯಲ್ಲಿ ಪ್ಯಾನೆಲ್ ಅಳವಡಿಸುವುದಕ್ಕೆ ಅವಕಾಶ ಇಲ್ಲ. ಹೀಗಾಗಿ ಕಟ್ಟಡದ ಆವರಣದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಸೌರ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಸುಸ್ಥಿರ ಇಂಧನಕ್ಕಾಗಿ ದೀರ್ಘಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ SELCO ಫೌಂಡೇಶನ್‌ನೊಂದಿಗೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಅಡಿಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಪ್ರಸ್ತುತ ಸಂಸ್ಥೆಯು ವಿಧಾನಸೌಧ ಮತ್ತು ವಿಕಾಸಸೌಧ ಆವರಣದ ವಿವಿಧ ಸ್ಥಳಗಳಲ್ಲಿ ಪಾರಂಪರಿಕ ರಚನೆಗೆ ಧಕ್ಕೆಯಾಗದಂತೆ ಸೌರ ಫಲಕಗಳನ್ನು ಸ್ಥಾಪಿಸುತ್ತಿದ್ದಾರೆ. ಇದರಿಂದ ಸುಮಾರು 300 ಕಿಲೋವಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದ್ದು, ಕಟ್ಟಡದ ಒಟ್ಟು ವಿದ್ಯುತ್ ಅವಶ್ಯಕತೆಯ ಪೈಕಿ ಶೇ.12ರಷ್ಟು ಮಾತ್ರ ಇದು ಪೂರೈಸಲಿದೆ.
ವಿಧಾನಸೌಧ ಮತ್ತು ವಿಕಾಸಸೌಧಗಳಲ್ಲಿ ಸುಮಾರು 1,000ಕ್ಕೂ ಹೆಚ್ಚು ಕೊಠಡಿಗಳು ಇದ್ದು, ತಿಂಗಳಿಗೆ ರೂ.12 ಲಕ್ಷದಿಂದ ರೂ.15 ಲಕ್ಷದವರೆಗೆ ವಿದ್ಯುತ್ ಬಿಲ್ ಬರುತ್ತಿದೆ. 300 ಕಿಲೋವಾಟ್ ಸೌರ ವ್ಯವಸ್ಥೆಯಿಂದ ವಾರ್ಷಿಕ ಸುಮಾರು ರೂ.20 ಲಕ್ಷ ಉಳಿತಾಯ ಸಾಧ್ಯವಾಗಲಿದೆ. ಎರಡು ವರ್ಷಗಳ ಬಳಿಕ ಹೂಡಿಕೆಯಿಂದ ಲಾಭ (ರಿಟರ್ನ್) ನಿರೀಕ್ಷಿಸಬಹುದು. ಪಂಚಾಯತ್ ಕಚೇರಿ ಕಟ್ಟಡಗಳು ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಕಟ್ಟಡಗಳಲ್ಲಿ ಇದೇ ರೀತಿಯ ಅಳವಡಿಕೆಯನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಮಾತನಾಡಿ, ವಿದ್ಯುತ್ ಮೇಲಿನ ಹೊರೆ ಕಡಿಮೆ ಮಾಡುವುದು ಅತ್ಯಂತ ಅಗತ್ಯ. ಸರ್ಕಾರವು ಸೌರಶಕ್ತಿ ಅಳವಡಿಕೆಯ ಕುರಿತು ಆದೇಶಗಳನ್ನು ನೀಡುತ್ತಲೇ ಇರುತ್ತದೆ. ಆದರೆ, ಆದೇಶ ಹೊರಡಿಸುವ ಸ್ಥಳವಾಗಿರುವ ವಿಧಾನಸೌಧದಲ್ಲೇ ಸೌರಶಕ್ತಿ ಅಳವಡಿಸಿಕೊಳ್ಳದಿದ್ದರೆ, ಆದೇಶ ಉತ್ತವಾಗಿ ಕಾಣುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಒಂದು ಪ್ರಮುಖ ಹೆಜ್ಜೆಯನ್ನಿಟ್ಟಿದೆ. ಎಲ್ಲಾ ಶಾಸಕಾಂಗ ಸದನಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

