ಮೈಸೂರು: ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿರುವ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದ ಸಚಿವ ಎಚ್‌ಸಿ ಮಹಾದೇವಪ್ಪ ಅವರು, ಈ ಬಗ್ಗೆ ಬಿಜೆಪಿ "ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ" ಎಂದು ಆರೋಪಿಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ರೇಷ್ಮೆ ಮಾರುಕಟ್ಟೆಗೆ ಬಳಸಲಾಗುತ್ತಿದ್ದ ಒಂದೂವರೆ ಎಕರೆ ಭೂಮಿಯನ್ನು ಉದ್ಯಾನವನದ ಅಭಿವೃದ್ಧಿಗಾಗಿ ಹಂಚಿಕೆ ಮಾಡಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. ಆದರೆ ಈಗ ಆ ಆದೇಶವನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಆ ಭೂಮಿಯಲ್ಲಿ ಕ್ರೀಡಾಂಗಣವನ್ನೂ ನಿರ್ಮಿಸುವುದಿಲ್ಲ. ನಮಗೆ ರೇಷ್ಮೆ ಕಾರ್ಖಾನೆ ಪ್ರಮುಖ ಆದ್ಯತೆಯಾಗಿದೆ. ಈ ವಿಷಯದಲ್ಲಿ ಸರ್ಕಾರಕ್ಕೆ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಇಲ್ಲ. ಹೀಗಾಗಿ ಕಾರ್ಮಿಕರು ಮತ್ತು ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ರೇಷ್ಮೆ ಕಾರ್ಖಾನೆಯ ಬೆಳವಣಿಗೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಮತ್ತು ಈ ಘಟಕಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
"ಇದರಲ್ಲಿ ಯಾವುದೇ ಸಂದೇಹ ಬೇಡ. ಬಿಜೆಪಿ ರಾಜಕೀಯ ಕಾರಣಗಳಿಗಾಗಿ ಗೊಂದಲ ಸೃಷ್ಟಿಸಿದೆ" ಎಂದು ಸಚಿವರು ತಿಳಿಸಿದರು.
ಈ ಸಂಬಂಧ ಕ್ರೀಡಾ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ತೀರಾ ಅಗತ್ಯವೆಂದು ಕಂಡುಬಂದರೆ, ಆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾಪವನ್ನು ಕೈಬಿಡಲಾಗುವುದು ಎಂದು ಅವರು ಹೇಳಿದರು.