ಬೆಂಗಳೂರು: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (SHDP)2ನೇ ಹಂತದಡಿ 2026-27ರ ಅವಧಿಯಲ್ಲಿ 1,846 ಕಿಮೀ ಉದ್ದದ ರಸ್ತೆಗಳನ್ನು 5,000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಯೋಜಿಸಿದೆ. ರಾಜ್ಯ ಬಜೆಟ್‌ನಲ್ಲಿ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಇದನ್ನು ಘೋಷಿಸಲಾಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ-5, ಹಂತ-1 ರ ಅಡಿಯಲ್ಲಿ 4,000 ಕೋಟಿ ರೂ. ವೆಚ್ಚದಲ್ಲಿ 1,512 ಕಿಮೀ ರಸ್ತೆಗಳ ಕಾಮಗಾರಿಗಳು ಈಗಾಗಲೇ ಅನುಷ್ಠಾನ ಹಂತದಲ್ಲಿವೆ. 2026–27ರಲ್ಲಿ ರಾಜ್ಯ ಬಜೆಟ್ ಪ್ರಸ್ತಾವನೆಗಳ ಪ್ರಕಾರ 5,000 ಕೋಟಿ ರೂ. ವೆಚ್ಚದಲ್ಲಿ 2ನೇ ಹಂತದಲ್ಲಿ ಹೆಚ್ಚುವರಿ 1,846 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಇದಲ್ಲದೆ, ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) 2026–27ರ ಅವಧಿಯಲ್ಲಿ 5,776 ಕೋಟಿ ಅಂದಾಜು ಮೊತ್ತದ ವಿವಿಧ ಯೋಜನೆಗಳಡಿ 2,200 ಕಿಮೀ ರಾಜ್ಯ ಹೆದ್ದಾರಿಗಳು ಮತ್ತು 3,500 ಕಿಮೀ ಪ್ರಮುಖ ಜಿಲ್ಲಾ ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಿದೆ.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನೆರವಿನ ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ-IV (KSHIP-IV) ಗಾಗಿ ಸರ್ಕಾರ ಸಿದ್ಧತೆ ಪ್ರಾರಂಭಿಸುತ್ತಿದ್ದೆ. 5,736 ಕೋಟಿ ರೂ. ಯೋಜನಾ ವೆಚ್ಚದಲ್ಲಿ ರಾಜ್ಯದಾದ್ಯಂತ ಸುಮಾರು 875 ಕಿ.ಮೀ ಉದ್ದದ ರಸ್ತೆ ಕಾಮಗಾರಿಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಅನುಮೋದನೆ ಪಡೆದು ಟೆಂಡರ್ ಆಹ್ವಾನಿಸಲಾಗುತ್ತಿದೆ.
ಇನ್ನೂ ಸೇತುವೆ ನಿರ್ಮಾಣ ವಿಚಾರಕ್ಕೆ ಬಂದರೆ, 2025-26ರಲ್ಲಿ 2,000 ಕೋಟಿ ರೂ. ವೆಚ್ಚದಲ್ಲಿ 216 ಸೇತುವೆಗಳನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. 288 ಸೇತುವೆಗಳ ದುರಸ್ತಿ ಮತ್ತು 386 ಕಾಲು ಸೇತುವೆಗಳ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಇದಾದ ನಂತರ ಮುಂದಿನ ಎರಡು ವರ್ಷಗಳಲ್ಲಿ 2,000 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಸೇತುವೆಗಳನ್ನು ನಿರ್ಮಿಸಲು ಸರ್ಕಾರ ಯೋಜಿಸಿದೆ.
ದೂರದ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಸುಧಾರಿಸಲು ನಿವಾಸಿಗಳು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸುರಕ್ಷಿತ ಸಂಚಾರವನ್ನು ಖಾತ್ರಿಪಡಿಸುವ ಉದ್ದೇಶದಿಂದ ಮಲೆನಾಡು ಮತ್ತು ಕರಾವಳಿ ಪ್ರದೇಶದ ಸಂಪರ್ಕವಿಲ್ಲದ ವಾಸಸ್ಥಳಗಳಲ್ಲಿ 300 ಕಾಲು ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಬಜೆಟ್ ನಲ್ಲಿ ಹೇಳಲಾಗಿದೆ.