ಪ್ರಿಯಾಂಕ್ ಖರ್ಗೆ ಸಾಂದರ್ಭಿಕ ಚಿತ್ರ 
ರಾಜ್ಯ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ: ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ!

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ ಈ ಮಸೂದೆಯ ಉದ್ದೇಶವಾಗಿದೆ.

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆಗೆ ಅವಕಾಶ ಕಲ್ಪಿಸುವ 2026ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ ಈ ಮಸೂದೆಯ ಉದ್ದೇಶವಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿರುವುದಾಗಿ ಸರ್ಕಾರ ಹೇಳಿದೆ.

ವಿಧೇಯಕದ ಪರ್ಯಾಲೋಚನ ಪ್ರಸ್ತಾವವನ್ನು ಮಂಡಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಭಾರತ ಸಂವಿಧಾನದ 326ನೇ ಅನುಚ್ಛೇದಡಿ ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಪ್ರತಿ ಬಿಂಬಿಸುವ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸುವುದನ್ನು ಖಚಿತಪಡಿಸಿಕೊಳ್ಳಲು, ಮತದಾರರ ಮತಪತ್ರದ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ, ಬೆದರಿಕೆ ಮತ್ತು ಅನಗತ್ಯ ಪ್ರಭಾವದಿಂದ ರಕ್ಷಿಸಿ, ಆ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸಬೇಕಿದೆ ಎಂದು ಹೇಳಿದರು.

ಇವಿಎಂ ಮೇಲೆ ಜನರ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ರಾಜಕೀಯ ಪಕ್ಷಗಳು, ತಜ್ಞರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಚುನಾವಣಾ ಆಯೋಗವನ್ನು ಪ್ರಶ್ನಿಸುತ್ತಿವೆ. ಆದರೆ ಚುನಾವಣಾ ಆಯೋಗ ಯಾವುದೇ ಉತ್ತರ ನೀಡುತ್ತಿಲ್ಲ. ಅಲ್ಲದೇ ಅನೇಕ ರಾಜ್ಯಗಳು ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಿವೆ ಎಂದು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಇದೊಂದು ತುಘಲಕ್ ದರ್ಬಾರ್ ಆಗಿದೆ. ಇವಿಎಂನ್ನು ಪರಿಚಿಸಿದ್ದ ಕಾಂಗ್ರೆಸ್ ನವರೇ ಇದೀಗ ಅದನ್ನು ಹಿಂಪಡೆಯುತ್ತಿದ್ದಾರೆ. ವಿದ್ಯುನ್ಮಾನ ಮತಯಂತ್ರ ಸರಿಯಿಲ್ಲ ಎಂಬ ಇವರ ವಾದ ಹಾಸ್ಯಾಸ್ಪದ ಎಂದು ಹೇಳಿದರು.

ಬಿಜೆಪಿ ಸದಸ್ಯ ವಿ. ಸುನೀಲ್ ಕುಮಾರ್ ಮಾತನಾಡಿ, ಈ ವಿಧೇಯಕದಲ್ಲಿ ಜನಸಾಮಾನ್ಯರಿಗೆ ಯಾವುದೇ ಲಾಭ ಇಲ್ಲ. ಇದರಿಂದ ಕಾಂಗ್ರೆಸ್ ಮಾತ್ರ ಲಾಭ. ಇದರ ಹಿಂದೆ ದೊಡ್ಡ ಹುನ್ನಾರ ಇದ್ದಂತಿದೆ. ಸರ್ಕಾರ ಆಡಳಿತ ವ್ಯವಸ್ಥೆಯನ್ನು ದುರುಪಯೋಗ ಮಾಡಲು ಮುಂದಾಗಿರುವಂತೆ ಕಂಡುಬರುತ್ತಿದೆ ಎಂದು ಆರೋಪಿಸಿದರು. ವಿಧೇಯಕ ಬೆಂಬಲಿಸಿದ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಷದ್, ಹೆಚ್ಚು ಮುಂದುವರಿದ ದೇಶಗಳು ಇವಿಎಂಗಳನ್ನು ಬಳಸುವುದಿಲ್ಲ, ಅವರು ಮತಪತ್ರಗಳನ್ನು ಬಳಸುತ್ತಾರೆ ಎಂದು ಹೇಳಿದರು.

ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ನಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ, ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಅನುಮಾನ ಬೇಡ, ವಿಜ್ಞಾನದ ವಿದ್ಯಾರ್ಥಿಗಳಾಗಿದ್ದರೆ ಎಲ್ಲವನ್ನೂ ಅನುಮಾನಿಸಬೇಕು, ನಾವು ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ತರುತ್ತಿದ್ದೇವೆ. ಆರ್ಥಿಕ ಪರಿಣಾಮಗಳ ಕುರಿತು, ಹೆಚ್ಚುವರಿ ಇದ್ದರೆ ಪೂರಕ ಬಜೆಟ್‌ನೊಂದಿಗೆ ಸದನಕ್ಕೆ ಬರುತ್ತೇವೆ, ನಾವು ಏನನ್ನೂ ಮುಚ್ಚಿಡುವುದಿಲ್ಲ ಎಂದು ಹೇಳಿದರು.

ಚರ್ಚೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ವಿಪಕ್ಷ ನಾಯಕ ಆರ್. ಅಶೋಕ್ ವಿಧೇಯಕವನ್ನು ಹರಿದು ಹಾಕಿದರು. ನಂತರ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಐದು ದಿನ ಇರಾನ್ Power Plant ಗಳ ಮೇಲೆ ದಾಳಿ ಮಾಡಲ್ಲ..': Trump ತಾತ್ಕಾಲಿಕ ಕದನ ವಿರಾಮ ಘೋಷಣೆ! ಮಾತುಕತೆ ನಿರಾಕರಿಸಿದ ಇರಾನ್

West Asia Crisis: ಮುಳುಗಿದ D-Street; 13.5 ಲಕ್ಷ ಕೋಟಿ ನಿರ್ನಾಮ!

ಭಾರತ vs ಪಾಕಿಸ್ತಾನ ಅಲ್ಲ, ಇನ್ಮುಂದೆ Afghanistan vs Pakistan: ನೆರೆ ರಾಷ್ಟ್ರದ Rivalry ಬಿಚ್ಚಿಟ್ಟ ಆಫ್ಘನ್ ಆಟಗಾರ!

ಕೆಟ್ಟ ಮೇಲೆ ಬುದ್ದಿ: ಭಾರತದ ಜೊತೆ ಉತ್ತಮ ಸಂಬಂಧ ಬಯಸುತ್ತೇವೆ: ಬಾಂಗ್ಲಾದೇಶ ಯೂಟರ್ನ್, IPL ಪ್ರಸಾರಕ್ಕೆ ಚಿಂತನೆ

ಇರಾನ್ ಮೇಲಿನ ದಾಳಿ ಐದು ದಿನ ತಾತ್ಕಾಲಿಕ ಸ್ಥಗಿತ: ಶಾಂತಿ ಸ್ಥಾಪನೆಗಾಗಿ ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಮಧ್ಯಸ್ಥಿಕೆ!

SCROLL FOR NEXT