ಬೆಂಗಳೂರು: ಪರಾಭವ ನಾಮ ಸಂವತ್ಸರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ ರಾಜ್ಯದ ಜನತೆಯ ಆಶೋತ್ತರಕ್ಕೆ ಸ್ಪಂದಿಸುವಲ್ಲಿ ಪರಾಭವಗೊಂಡಿದೆ. ತಮ್ಮ ಹೆಗಲ ಮೇಲೆ ದುಬಾರಿ ಶಾಲು ಹಾಕಿಕೊಳ್ಳುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಜನರ ಹೆಗಲ ಮೇಲೆ ಸಾಲದ ಹೊರೆ ಹಾಕಿದ್ದಾರೆ ಎಂದು ಶಾಸಕ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸರ್ಕಾರ ರೈತರಲ್ಲಿ ಭರವಸೆ ಮೂಡಿಸುವಲ್ಲಿ, ಉದ್ಯೋಗಾಕಾಂಕ್ಷಿ ಯುವಕರ ನಿರೀಕ್ಷೆಯಲ್ಲಿ, ಮಹಿಳೆಯರ ಆಶೋತ್ತರ ಈಡೇರಿಸುವಲ್ಲಿ, ಶಾಸಕರ ವಿಶ್ವಾಸ ಗಳಿಸುವಲ್ಲಿ ಪರಾಭವಗೊಂಡಿದೆ. ಅಷ್ಟೇ ಅಲ್ಲ ಪಕ್ಕದಲ್ಲೇ ಇರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರೀತಿ ಗಳಿಸುವಲ್ಲಿಯೂ ಪರಾಭವಗೊಂಡಿದೆ ಎಂದು ಟೀಕಿಸಿದರು.
ಹಲವು ದಾಖಲೆ ಮಾಡಿರುವ ಸಿದ್ದರಾಮಯ್ಯ ಅವರು ಸಮಸ್ಯೆ ಸೃಷ್ಟಿಯಲ್ಲೂ ದಾಖಲೆ ಮಾಡಿದ್ದಾರೆ. ಅತೀ ಹೆಚ್ಚು ಸಾಲ ಮಾಡಿರುವುದು ಇದೇ ಸಿದ್ದರಾಮಯ್ಯ. ಈ ಬಾರಿಯ ಬಜೆಟ್‌ನಲ್ಲಿನ ಘೋಷಣೆಗಳು ಹಾಗೂ ಅಂಕಿ ಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸ ಕಾಣಿಸುತ್ತಿವೆ. ಯೋಜನೆ ಅನುದಾನ, ಅನುಷ್ಠಾನದಲ್ಲಿ ಬದ್ಧತೆ ಇಲ್ಲ ಎಂದು ಟೀಕಿಸಿದರು.
ರಾಜ್ಯ ಬಜೆಟ್‌ನ ಶೇಕಡ 14ರಷ್ಟು ಮೊತ್ತ ಸಹಾಯಧನ ಮತ್ತು ಗ್ಯಾರಂಟಿಗಳಿಗೆ ಬಳಕೆಯಾಗುತ್ತಿದೆ. ಈ ಹಣ ಬಡವರ ಕಣ್ಣೀರು ಒರೆಸಲು ಬಳಸಬೇಕೇ ಹೊರತು, ಚುನಾವಣೆ ಗೆಲ್ಲುವ ಸಾಧನವಾಗಬಾರದು. ಎಲ್ಲ ಪಕ್ಷಗಳೂ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು ವಿ.ಸುನಿಲ್‌ಕುಮಾರ್ ಮನವಿ ಮಾಡಿದರು. ಗ್ಯಾರಂಟಿ ಅಥವಾ ಸಹಾಯಧನಗಳಿಗೆ ನನ್ನ ವಿರೋಧವಿಲ್ಲ. ಆದರೆ, ಅವುಗಳನ್ನು ಯಾವುದಕ್ಕೆ ಬಳಸಲಾಗುತ್ತಿದೆ ಮತ್ತು ಯಾರಿಗೆ ತಲುಪುತ್ತಿವೆ ಎಂಬ ವಿವೇಕ, ವಿವೇಚನೆ ಇರಬೇಕು. ಇಲ್ಲವಾದರೆ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದರು.
ಕತ್ತಲಿನ ದಾರಿಯಲ್ಲಾದರೂ ನಡೆಯಬಹುದು. ಆದರೆ, ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ನಾಟಕಕಾರ ಗಿರೀಶ್ ಕಾರ್ನಾಡ್ ಅವರು ‘ಯಯಾತಿ’ ನಾಟಕದಲ್ಲಿ ಬರೆದಿದ್ದಾರೆ. ರಾಜ್ಯ ಸರ್ಕಾರ ಕನಸುಗಳಿಲ್ಲದ ದಾರಿಯಲ್ಲಿ ಜನರನ್ನು ಮುನ್ನಡೆಸುತ್ತಿದೆ. ಇದರಿಂದ ಭವಿಷ್ಯವೂ ಮಸುಕಾಗಿದೆ ಎಂದರು.
ರಾಜ್ಯದಲ್ಲಿ ನೀವು ಗ್ಯಾರಂಟಿ ಮತ್ತು ಸಹಾಯಧನ ಸಂಸ್ಕೃತಿಯನ್ನು ಬೆಳೆಸಲು ಹೊರಟಿದ್ದೀರಿ. ನಿಜಕ್ಕೂ ಸಮಾಜದ ಕಟ್ಟಕಡೆಯ ಮತ್ತು ನೈಜ ಫಲಾನುಭವಿಗಳಿಗೆ ಈ ಸೌಲಭ್ಯಗಳು ತಲುಪಬೇಕು. ಅದರೆ, ಬೇಕಾಬಿಟ್ಟಿ ಎಲ್ಲರಿಗೂ ಹಂಚಲಾಗುತ್ತಿದೆ. ಈ ರೀತಿ ಉಚಿತಗಳನ್ನು ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಆಕ್ಷೇಪ ವ್ಯಕ್ತಪಡಿಸಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜಾತಿ ಗಣತಿ ನಡೆಸಿದೆ. ಕೇಂದ್ರ ಸರ್ಕಾರ ಗಣತಿ ನಡೆಸುವಾಗ ಮತ್ಯಾಕೆ ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತೀರಿ ಎಂದು ಪ್ರಶ್ನಿಸಿದಾಗ ಸಮೀಕ್ಷೆ ನಡೆಸಿ ಎಷ್ಟೋ ವರ್ಷ ಆಗಿತ್ತು. ಹಿಂದುಳಿದ ಸಮುದಾಯಗಳ ವಸ್ತುಸ್ಥಿತಿ ಅಧ್ಯಯನ ಮಾಡಿ ಯೋಜನೆ ರೂಪಿಸುವುದಕ್ಕಾಗಿ ಈ ಸಮೀಕ್ಷೆ ಎಂದು ಹೇಳಿದ್ದರು. ಆದರೆ, ಈ ಬಜೆಟ್‌ನಲ್ಲಿ ಈ ವರದಿ ಅನುಷ್ಠಾನದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ ಎಂದು ದೂರಿದರು.
VB-G RAM G ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು. ಬಜೆಟ್‌ನಲ್ಲಿ ಗುತ್ತಿಗೆದಾರರ ಬಾಕಿ ರೂ. 38,000 ಕೋಟಿಗಳನ್ನು, 56,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುದಾನ ಅಥವಾ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ರೂ. 20,000 ಕೋಟಿಗಳನ್ನು ತೆರವುಗೊಳಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದಿದ್ದಾರೆ.
ಖಾಲಿ ಇರುವ 2.74 ಲಕ್ಷ ಹುದ್ದೆಗಳಲ್ಲಿ 56,000 ಹುದ್ದೆಗಳನ್ನು ಭರ್ತಿ ಮಾಡುವ ಘೋಷಣೆಯನ್ನು ಉಲ್ಲೇಖಿಸಿ, ಈ ಉದ್ದೇಶಕ್ಕಾಗಿ ಯಾವುದೇ ಹಣವನ್ನು ಬಜೆಟ್ ನಲ್ಲಿ ಏಕೆ ನಿಗದಿಪಡಿಸಲಾಗಿಲ್ಲ ಎಂದು ಪ್ರಶ್ನಿಸಿದರು. ಉತ್ತರ ಕರ್ನಾಟಕದ ಯುವಕರು ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದಾರೆ. ಅವರನ್ನು ದಾರಿ ತಪ್ಪಿಸಲು, ಸರ್ಕಾರವು ಯಾವುದೇ ಅನುದಾನವನ್ನು ನೀಡದೆ 56,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದೆ" ಎಂದು ಅವರು ಆರೋಪಿಸಿದರು.
MGNREGA ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಆರ್ಥಿಕ ಸಮೀಕ್ಷೆಯ ಪ್ರಕಾರ 8.93 ಲಕ್ಷ ಕಾಮಗಾರಿಗಳು ಜಾರಿಯಲ್ಲಿವೆ ಎಂದು ಉಲ್ಲೇಖಿಸಿದ್ದರೂ, ಬಜೆಟ್‌ನಲ್ಲಿ ಯಾವುದೇ ಹಂಚಿಕೆ ಮಾಡಲಾಗಿಲ್ಲ ಎಂದು ಹೇಳಿದರು, ಇದರಲ್ಲಿ 5.99 ಲಕ್ಷ ಯೋಜನೆಗಳು ಅನುಷ್ಠಾನದಲ್ಲಿವೆ. ಈ ಕಾಮಗಾರಿಗಳಿಗೆ ಹಣ ಹಂಚಿಕೆ ಮಾಡದೆ, ಈ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತದೆಯೇ? ಎಂದು ಪ್ರಶ್ನಿಸಿದರು.