ಸಿದ್ದರಾಮಯ್ಯ 
ರಾಜ್ಯ

ಕೇಂದ್ರ ಸರ್ಕಾರವೇ ಸಾಲ ಮಾಡುತ್ತೆ; ಆರ್ಥಿಕ ಶಿಸ್ತು, ಜನರ ಕಲ್ಯಾಣ, ಅಭಿವೃದ್ಧಿಯತ್ತ ಗಮನ ಹರಿಸಿದೆ: ಬಜೆಟ್ ಕುರಿತು ಸಿಎಂ ಸಿದ್ದರಾಮಯ್ಯ

ರಾಜ್ಯದ ಈ ವರ್ಷದ ಬಜೆಟ್ ಗಾತ್ರ 4,48,004 ಕೋಟಿ ರೂ.ಗಳಷ್ಟಾಗಲಿದೆ. 2025-26ರಲ್ಲಿ ನಮ್ಮ ಬಜೆಟ್ ಗಾತ್ರ 4,09,549 ರೂಗಳಷ್ಟಿತ್ತು. ಕಳೆದ ವರ್ಷದ ಆಯವ್ಯಯಕ್ಕೆ ಹೋಲಿಸಿದರೆ ಈ ಆಯವ್ಯಯವು 38,455 ಕೋಟಿ ರೂಗಳಷ್ಟು ಹೆಚ್ಚಾಗಿದ್ದು ಶೇ.9.4ರಷ್ಟು ಬೆಳವಣಿಗೆಯಾಗಿದೆ.

ಬೆಂಗಳೂರು: ರಾಜ್ಯದ ಈ ವರ್ಷದ ಬಜೆಟ್ ಗಾತ್ರ 4,48,004 ಕೋಟಿ ರೂ.ಗಳಷ್ಟಾಗಲಿದೆ. 2025-26ರಲ್ಲಿ ನಮ್ಮ ಬಜೆಟ್ ಗಾತ್ರ 4,09,549 ರೂಗಳಷ್ಟಿತ್ತು. ಕಳೆದ ವರ್ಷದ ಆಯವ್ಯಯಕ್ಕೆ ಹೋಲಿಸಿದರೆ ಈ ಆಯವ್ಯಯವು 38,455 ಕೋಟಿ ರೂಗಳಷ್ಟು ಹೆಚ್ಚಾಗಿದ್ದು ಶೇ.9.4ರಷ್ಟು ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6 ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಕುರಿತು ಮಾತನಾಡಿದ ಸಿಎಂ, 2025-26 ರಲ್ಲಿ ದೇಶದ ಜಿಡಿಪಿಯು ಸ್ಥಿರ ಬೆಲೆಗಳಲ್ಲಿ ಶೇ.7.4ರಷ್ಟು ಬೆಳವಣಿಗೆ ದಾಖಲಿಸಿದರೆ, ರಾಜ್ಯದ GSDP ಶೇ.8.1ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್‌ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿರುವುದು ನಮ್ಮ ಸರ್ಕಾರ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತಿರುವುದನ್ನು ಹೇಳುತ್ತದೆ. ಈ ಮೂಲಕ ರಾಜ್ಯದ ಆರ್ಥಿಕತೆಯನ್ನು ದೇಶದಲ್ಲಿಯೇ ನಂ.1 ಮಾಡುವತ್ತ ಹೆಜ್ಜೆಯಿಟ್ಟಿದ್ದೇವೆ ಎಂದರು.

ಸಾಲದ ಮೇಲೆ ಸರ್ಕಾರ ನಡೆಯುತ್ತಿದೆ ಎಂಬ ಟೀಕೆ ಬಂದಿದೆ. ಆದರೆ ನಮ್ಮ ಸರ್ಕಾರ 1.32 ಲಕ್ಷ ಕೋಟಿ ಸಾಲ ಮಾಡಿದ್ದು, ಬಜೆಟ್ ಗಾತ್ರ 4,48,0004 ಕೋಟಿ ಇದ್ದಾಗ ಸಾಲದ ಬಜೆಟ್ ಹೇಗೆ ಆಗಲು ಸಾಧ್ಯ. ಸಾಲ ಮೇಲೆ ಸರ್ಕಾರ ನಡೆಯುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಸಿದ್ದರಾಮಯ್ಯ ಹೇಳಿದರು. ಯಾವುದೇ ರಾಜ್ಯ ಅಥವಾ ದೇಶವಾಗಲಿ ಸಾಲ ಮಾಡದಿರಲು ಸಾಧ್ಯವಿಲ್ಲ, ಸಮಾಜ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಸಾಲ ಮಾಡಬೇಕು. ಸರ್ಕಾರ ಸಾಲವನ್ನು ನಿಯಮದ ಮಿತಿಯೊಳಗೆ ಮಾಡಲಾಗಿದೆ. ರಾಜ್ಯದ ಸಾಲದ ಮೊತ್ತ 8,24,000 ಕೋಟಿ ರೂ.ಗಳಷ್ಟಿದೆ.

2008 ರಿಂದ 2013 ರವರೆಗೆ ಇದ್ದ ಬಿಜೆಪಿಯೂ ಸಾಲ ಮಾಡಿದೆ. ಐದು ವರ್ಷಕ್ಕೊಮ್ಮೆ ಸಾಲ ದುಪ್ಪಟ್ಟು ಆಗುತ್ತದೆ. ಮೋದಿಯವರು ಪ್ರಧಾನಿಯಾದ ನಂತರ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜಿಡಿಪಿ ಬೆಳವಣಿಗೆಯಲ್ಲಿ ರಾಜ್ಯಕ್ಕಿಂತ ದೇಶ ಕಡಿಮೆ ಇದೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿನ ವರದಿಯಲ್ಲಿ, ದಕ್ಷಿಣ ಭಾರತದ ರಾಜ್ಯಗಳು, ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದು, ಅದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದರು.

ಗ್ಯಾರಂಟಿಗಳಿಂದ ಸಾಲ ಹೆಚ್ಚಿದೆ ಎಂದು ಟೀಕಿಸಲಾಗಿದೆ. ಇದುವರೆಗೆ 1.31 ಲಕ್ಷ ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ, ಜನಕಲ್ಯಾಣ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆ ಮಾಡಿದೆ. ಆದರೆ ನಮ್ಮ ಸರ್ಕಾರ ಗ್ಯಾರಂಟಿಗಳಿಗೆ ಪ್ರತಿ ವರ್ಷ ಒಂದೇ ರೀತಿಯಲ್ಲಿ ಅನುದಾನ ನೀಡಿದ್ದೇವೆ. ಯುವನಿಧಿಯಡಿ 600 ಕೋಟಿ ರೂ. ಮೀಸಲಿಡಲಾಗಿದ್ದು, ಈ ಯೋಜನೆಯನ್ನು ಖಂಡಿತವಾಗಿಯೂ ಸ್ಥಗಿತಗೊಳಿಸಿಲ್ಲ ಎಂದರು.

ಇಷ್ಟೆಲ್ಲದರ ನಡುವೆ ನಮ್ಮ ವಿತ್ತೀಯ ಶಿಸ್ತನ್ನು ಹಾಳು ಮಾಡಿಲ್ಲ. ನಮ್ಮ ವಿತ್ತೀಯ ಕೊರತೆ 2026-27ನೇ ಸಾಲಿನಲ್ಲೂ ಶೇ.2.95 ರಷ್ಟಿರಲಿದೆ. ನಮ್ಮ GSDP ಈ ವರ್ಷ 33,05,500 ಕೋಟಿ ರೂ. ಗಳಷ್ಟಿರಲಿದೆ ಎಂದು ಅಂದಾಜು ಮಾಡಲಾಗಿದೆ. ನಮ್ಮ ಒಟ್ಟು ಹೊಣೆಗಾರಿಕೆಗಳು ಜಿ.ಎಸ್.ಡಿ.ಪಿ.ಗೆ ಎದುರಾಗಿ ಶೇ.24.94 ರಷ್ಟಿರಲಿದೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ಆದರೆ ಕೇಂದ್ರ ಸರ್ಕಾರದ ಹೊಣೆಗಾರಿಕೆಗಳು ಜಿ.ಡಿ.ಪಿ.ಗೆ ಎದುರಾಗಿ ಶೇ.55.6 ರಷ್ಟಿದೆ ಎಂದರು.

ನಮ್ಮ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.3 ರ ಒಳಗೆ ಇದೆ. ಮುಂದಿನ ವರ್ಷಕ್ಕೆ ಶೇ.2.95 ರಷ್ಟು ಇರಲಿದೆ ಎಂಬುದು ನಮ್ಮ ಅಂದಾಜಿಸಲಾಗಿದೆ. ಆದರೆ 2026-27ನೇ ಸಾಲಿಗೆ ಕೇಂದ್ರದ ವಿತ್ತೀಯ ಕೊರತೆ ಜಿ.ಡಿ.ಪಿ.ಯ ಶೇ.4.3 ರಷ್ಟು ಇರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 16ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಅನುಸಾರ ರಾಜ್ಯಗಳು ಶೇ.3 ರೊಳಗೆ ಹಾಗೂ ಕೇಂದ್ರ ಸರ್ಕಾರ ಶೇ.4.2 ರೊಳಗೆ ವಿತ್ತೀಯ ಕೊರತೆ ಹೊಂದಿರಬೇಕು. ಇದನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡಿಲ್ಲ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ.

ನಮ್ಮ ಬಜೆಟ್ ರಿವಿನ್ಯೂ ಡಿಫಿಸಿಟ್ ಆಗಿದೆ. 2026-27ರ ಬಜೆಟ್ ನ್ನು ರೆವಿನ್ಯೂ ಸರ್ಪ್ಲಸ್ ಮಾಡಬೇಕೆಂಬ ಇಚ್ಛೆಯಿದ್ದರೂ, ಕೇಂದ್ರಸರ್ಕಾರದ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ. ರಾಜ್ಯದ ಜಿಎಸ್ ಟಿ ಯಲ್ಲಿ 10% ಬೆಳವಣಿಗೆಯಿತ್ತು, ಆದರೆ ಕೇಂದ್ರಸರ್ಕಾರ, ಜಿಎಸ್ಟಿ ದರವನ್ನು ಕಡಿತಗೊಳಿಸಿದ್ದರಿಂದ , ಜಿಎಸ್ ಟಿ ಬೆಳವಣಿಗೆ 4% ಗೆ ಕುಸಿಯಿತು. ದೇಶದ ಏಳು ರಾಜ್ಯಗಳು ಕೇಂದ್ರದ ಈ ನೀತಿಯನ್ನು ವಿರೋಧಿಸಿ, ಪರಿಹಾರ ಕೇಳಿದ್ದೇವೆ.

ಜಿಎಸ್ ಟಿ ಜಾರಿಯಾದ ನಂತರದಿಂದ 2023-24ರವೆಗೆ ಕೇಂದ್ರ , ಪರಿಹಾರವನ್ನು ನೀಡಿದ್ದು, ನಂತರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ, ಈ ಪರಿಹಾರ ನೀಡಲಾಗಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ 10 ಸಾವಿರ ಕಡಿಮೆಯಾಗಿ, 2026-27 ರಲ್ಲಿ 15 ಸಾವಿರ ಕೋಟಿ ನಷ್ಟವಾಗಲಿದೆ. ಕೇಂದ್ರ ಈ ಧೋರಣೆಯಿಂದ ರಾಜ್ಯಕ್ಕೆ ನಷ್ಟವುಂಟಾಗಿದೆ.

ಬಿಜೆಪಿಯವರ ಕಾಲಾವಧಿಯಲ್ಲಿ ಬಿಬಿಎಂಪಿಗೆ ನಾಲ್ಕು ವರ್ಷದಲ್ಲಿ 10435 ಕೋಟಿ ನೀಡಿದೆ. ನಮ್ಮ ಸರ್ಕಾರ ನಾಲ್ಕು ವರ್ಷದಲ್ಲಿ ಒಟ್ಟು 20200 ಕೋಟಿ ನೀಡಿದೆ. ಶಿಕ್ಷಣಕ್ಕೆ 65000 ಕೋಟಿ ಖರ್ಚು ಮಾಡಲಾಗಿದ್ದು, 2026-27 ರಲ್ಲಿ 72,386 ಕೋಟಿ ಇಡಲಾಗಿದೆ. ಆದ್ದರಿಂದ ನಮ್ಮ ಸರ್ಕಾರ ಗ್ಯಾರಂಟಿ ಮತ್ತು ಅಭಿವೃದ್ದಿಗೆ ವೆಚ್ಚ ಮಾಡುತ್ತಿದ್ದು, ಬಿಜೆಪಿಯವರು ಈ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು.

ಸಾಮಾಜಿಕ ಭದ್ರತೆಯ ಯೋಜನೆಗಳಿಗೆ 10600 ಕೋಟಿಗೆ ಮೀಸಲಿಟ್ಟಿದ್ದೇವೆ. ಸಮಾಜದ ಎಲ್ಲ ಅಶಕ್ತರಿಗೆ ಶಕ್ತಿ ತುಂಬಲಾಗುತ್ತಿದೆ. ಬಿಜೆಪಿಯು ಟಿಕಲ್ ಡೌನ್ ಎಕಾನಮಿನಲ್ಲಿ ನಂಬಿಕೆಯಿರಿಸಿದೆ, ನಮ್ಮದು ಯೂನಿವರ್ಸಲ್ ಬೇಸಿಕ್ ಇನ್ಕಂ ಹಾಗೂ ಬೇಡಿಕೆಯ ಆರ್ಥಿಕ ತತ್ವ ಆಧರಿಸಿದೆ. ಬುದ್ಧನ ಕರುಣೆ, ಅಂಬೇಡ್ಕರ್ ಸಾಮಾಜಿಕ ನ್ಯಾಯವನ್ನು ನಮ್ಮ ಬಜೆಟ್ ಆಧರಿಸಿದೆ. ಆದ್ದರಿಂದ ಈ ಬಾರಿಯ ಬಜೆಟ್ ಅಭಿವೃದ್ಧಿಪರ ಹಾಗೂ ಅಭಿವೃದ್ಧಿಪರ ಹಾಗೂ ಜನಪರ ಬಜೆಟ್ ಆಗಿದೆ. ವಿರೋಧಪಕ್ಷದವರು ಕೇವಲ ರಾಜಕೀಯಕ್ಕಾಗಿ ವಿರೋಧ ಮಾಡಬಾರದು ಎಂದರು.

ದಕ್ಷಿಣ ಭಾರತದ ನಮ್ಮ ಸುತ್ತ ಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗಧಿತ ಮಟ್ಟದ ಒಳಗೇ ಇದೆ. 2025-26 ಪರಿಷ್ಕೃತ ಅಂದಾಜಿನಲ್ಲೂ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟು ಇರಲಿದೆ. ಮಹಾರಾಷ್ಟದಲ್ಲಿ ಶೇ.3.0 ರಷ್ಟು, ಆಂಧ್ರಪ್ರದೇಶ ಶೇ.4.5, ಕೇರಳ ಶೇ.3.8, ತಮಿಳುನಾಡು ಶೇ.3.5 ರಷ್ಟು ಇದೆ. ಎಲ್ಲಾ ರಾಜ್ಯಗಳು ವಿತ್ತೀಯ ಕೊರತೆಯಿದೆ. ನಮ್ಮ ರಾಜ್ಯದ ವಿತ್ತೀಯ ಕೊರತೆ 0.7 ಇದೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 1.5 ರಷ್ಟಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

2024ರಿಂದ 20 ಬಾರಿ Namma Metro ಸೇವೆಯಲ್ಲಿ ಅಡಚಣೆ: ಸಚಿವ ಕೃಷ್ಣಬೈರೇಗೌಡಗೆ ತೇಜಸ್ವಿ ಸೂರ್ಯ ಪತ್ರ!

Bengaluru: ಬೈಕ್ ಚಾಲಕನ ತಲೆ ಮೇಲೆ ಬಿದ್ದ ರೆಂಬೆ, ಗಂಭೀರ ಗಾಯ ಆಸ್ಪತ್ರೆಗೆ ದಾಖಲು, ಹೆಲ್ಮೆಟ್ ಇದ್ದಿದ್ರೆ!

ಮುಂಬೈ: ನಿಲ್ಲಿಸಿದ್ದ ಕಾರಿನಲ್ಲಿ ಏರ್‌ಬ್ಯಾಗ್ ಓಪನ್! 25 ವರ್ಷದ ವ್ಯಕ್ತಿ ರಕ್ತಸ್ರಾವದಿಂದ ಸಾವು

ರಾಮ ಮಂದಿರ ದೇಣಿಗೆ ಲೂಟಿ: ಚಂಪತ್ ರಾಯ್ ಆಪ್ತ ಟಿನ್ನು ಯಾದವ್ ಸೇರಿ 8 ಮಂದಿ ಬಂಧನ