ಬೆಂಗಳೂರು: ಡಬಲ್ ಡೆಕ್ಕರ್, ಪಾರ್ಕಿಂಗ್ ಕಟ್ಟಡ, ಮೇಲ್ಸೆತುವೆ, ಅಂಡರ್ ಪಾಸ್ ಎಲ್ಲವೂ ಬ್ರಾಂಡ್ ಬೆಂಗಳೂರು ನಿರ್ಮಿಸಲು ಸಹಕಾರಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಎಂ.ಜಿ. ರಸ್ತೆಯಲ್ಲಿ ಮೆಟ್ರೋ ಮಾರ್ಗದ ಕಂಬಗಳಿಗೆ ಡೈನಾಮಿಕ್ ಲೈಟಿಂಗ್ ವ್ಯವಸ್ಥೆ, ಕೆ.ಆರ್. ಮಾರುಕಟ್ಟೆಯಲ್ಲಿ ನೆಲಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆ, ಬನಶಂಕರಿ ಬಸ್ ನಿಲ್ದಾಣದ ಜಂಕ್ಷನ್ ನಲ್ಲಿ ಸ್ಕೈವಾಕ್ ನಿರ್ಮಾಣ ಕಾಮಗಾರಿಗೆ ಶಿವಕುಮಾರ್ ಅವರು ಶುಕ್ರವಾರ ಚಾಲನೆ ನೀಡಿದರು.
ಕೆ.ಆರ್ ಮಾರ್ಕೆಟ್ ಅಲ್ಲಿ ನೂತನ ಪಾರ್ಕಿಂಗ್ ಕಟ್ಟಡ ಲೋಕಾರ್ಪಣೆ ಮಾಡಿದ್ದು ಇದರ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ವಾಹನ ನಿಲುಗಡೆಗೆ ಹೆಚ್ಚು ಶುಲ್ಕ ವಿಧಿಸಿಲ್ಲ. ಸುತ್ತಮುತ್ತ 1 ಕಿ.ಮೀ ಯಾರೂ ವಾಹನ ನಿಲ್ಲಿಸಬಾರದು ಎಂದು ಪೊಲೀಸರು ತಿಳಿಸಬೇಕು. ಅಂಗಡಿ ಮಾಲೀಕರು ವಾಹನಗಳನ್ನು ಅಲ್ಲಿಯೇ ನಿಲ್ಲಿಸಬೇಕು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಟೋ ಮಾಡಲಾಗುವುದು" ಎಂದರು.
ಸಂಚಾರ ದಟ್ಟಣೆ ಇರುವ ಕಡೆ ವಾಹನ ನಿಲ್ಲಿಸಲು ಅವಕಾಶ ನೀಡಲಾಗುವುದಿಲ್ಲ. ಜನರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡವನ್ನು ಜನರು ಬಳಸಿಕೊಳ್ಳಬೇಕು. ವಾಹನ ಪಾರ್ಕಿಂಗ್ ವಿಚಾರದಲ್ಲಿ ಖಾಸಗಿಯವರಿಗೆ ಹೆಚ್ಚು ಉತ್ತೇಜನ ನೀಡಬೇಕು ಎಂದು ನಾವು ಹೊಸ ನಿಯಮಗಳನ್ನು ಮಾಡುತ್ತಿದ್ದೇವೆ. ಸರ್ಕಾರದ ಪಾರ್ಕಿಂಗ್ ಜೊತೆಗೆ ಖಾಸಗಿ ಪಾರ್ಕಿಂಗ್ ಸಹ ಮಾಡಲಾಗುವುದು. 10/12 ಅಳತೆಯ ಜಾಗದಲ್ಲಿ 20 ವಾಹನಗಳನ್ನು ನಿಲ್ಲಿಸುವ ತಂತ್ರಜ್ಞಾನ ನೋಡಿದ್ದೇನೆ. ಇದಕ್ಕೆ ಖಾಸಗಿಯವರಿಗೆ ಪ್ರೋತ್ಸಾಹ ನೀಡಬೇಕು ಆಲೋಚಿಸಲಾಗಿದೆ" ಎಂದರು.
"ಕೆ.ಆರ್ ಮಾರ್ಕೆಟ್ ನಲ್ಲಿ ಇದ್ದ ಕಟ್ಟಡಗಳನ್ನು ಸರಿಯಾಗಿ ಬಳಕೆ ಮಾಡುತ್ತಿರಲಿಲ್ಲ. ಹೂವಿನ ವರ್ತಕರು ಸೇರಿದಂತೆ ಅನೇಕರು ಅಲ್ಲಿಗೆ ಹೋಗಿರಲಿಲ್ಲ. ಈಗ ಒಂದಷ್ಟು ಯೋಜನೆಗಳ ಮೂಲಕ ದುರಸ್ತಿ ನಡೆಸಿ ವರ್ತಕರನ್ನು ಸ್ಥಳಾಂತರ ಮಾಡಲಾಗಿದೆ. ವರ್ತಕರು ಬರದಿದ್ದರೆ ಬಾಡಿಗೆ ನೀಡಬೇಕು. ಅಥವಾ ನಮ್ಮದೇ ಯಾವುದಾದರೂ ಕಚೇರಿಗಳನ್ನು ತೆರೆಯಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ" ಎಂದರು.
"ಕೆ.ಆರ್ ಮಾರ್ಕೆಟ್ ಐತಿಹಾಸಿಕ ಜಾಗ. ನಾನು ಚಿಕ್ಕವನಿದ್ದಾಗ ತಂದೆ ಜೊತೆ ಬಂದು ತರಕಾರಿ, ಬಟ್ಟೆ ಹಾಗೂ ದಿನನಿತ್ಯದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು" ಎಂದರು.
"ನಗರದಲ್ಲಿ ಸುಮಾರು 44 ಕಿ.ಮೀ ಉದ್ದದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಆಲೋಚನೆ ಹಾಕಿದ್ದೇವೆ. ಇದರ ಬಗ್ಗೆ ಈ ಹಿಂದೆಯೇ ಆಲೋಚನೆ ಮಾಡಿದಿದ್ದರೆ 336 ಕಿಮೀ ಉದ್ದದ ಮೆಟ್ರೋ ಯೋಜನೆಯಲ್ಲಿ ಸುಮಾರು 200 ಕಿಮೀ ಉದ್ದವಾದರೂ ಡಬಲ್ ಡೆಕ್ಕರ್ ಯೋಜನೆ ಮಾಡಬಹುದಿತ್ತು. ಆದರೂ ಈಗ ತಡವಾಗಿಲ್ಲ" ಎಂದು ಹೇಳಿದರು.
"ಎಲ್ಲಾ ಶಾಸಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರನ್ನೂ ಒಟ್ಟಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಬೆಂಗಳೂರನ್ನು ಅಭಿವೃದ್ಧಿ ಮಾಡಲಾಗುವುದು. ಬೆಂಗಳೂರು ಜನರ ನಿರೀಕ್ಷೆಗಳನ್ನು ಒಂದೊಂದಾಗಿ ಈಡೇರಿಸಲಾಗುತ್ತಿದೆ. ಅಭಿವೃದ್ಧಿ ಎಂದರೆ ಒಂದೇ ರಾತ್ರಿಯಲ್ಲಿ ಮಾಡುವ ಕೆಲಸಗಳಲ್ಲ. ಇದಕ್ಕೂ ಸಮಯ ಬೇಕಿದೆ" ಎಂದರು.
"ಎಂಜಿ ರಸ್ತೆಯಲ್ಲಿ ಹೊಸ ಮಾದರಿ ಡೈನಮಿಕ್ ದೀಪಗಳನ್ನು ಅಳವಡಿಸಲಾಗಿದೆ. ನಗರದ ಎಲ್ಲಾ ಕಡೆಯೂ ಬೀದಿ ದೀಪಗಳನ್ನು ಇನ್ನೂ ಹೆಚ್ಚು ಪ್ರಕರತೆ ಬೀರುವಂತೆ ಮಾಡಲಾಗುವುದು. ಜಿಬಿಎ ಹಾಗೂ ಬಿಎಂಆರ್ ಸಿಎಲ್ ವತಿಯಿಂದಲೂ ಈ ಕೆಲಸ ಮಾಡಲಾಗುವುದು" ಎಂದರು.
"ಗಾಂಧಿ ಬಜಾರ್ ಹಾಗೂ ಕೆ.ಆರ್ ಮಾರ್ಕೆಟ್ ಗಳನ್ನು ಸ್ವಚ್ಚವಾಗಿ ಇಡಬೇಕು ಎಂದು ನಾವು ತೀರ್ಮಾನ ಮಾಡಿದ್ದೇವೆ. ಇಲ್ಲಿ ವಾಹನ ನಿಲ್ದಾಣಗಳನ್ನು ಮಾಡಿದ್ದೇವೆ. ಪಿಇಎಸ್ ಕಾಲೇಜು ಬಳಿಯ ಮೇಲ್ಸೆತುವೆಯನ್ನೂ ಲೋಕಾರ್ಪಣೆ ಮಾಡಲಾಗಿದೆ. ಎಲಿವೇಟೆಡ್ ಕಾರಿಡಾರ್ ವಿಚಾರದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದಷ್ಟು ತೀರ್ಮಾನ ಮಾಡಲಾಗಿದೆ. 138 ಕಿಮೀಟರ್ ನಷ್ಟು ಮೇಲ್ಸೆತುವೆ, ಅಂಡರ್ ಪಾಸ್ ನಿರ್ಮಾಣ ಯೋಜನೆಗಳನ್ನು ತೆಗೆದುಕೊಳ್ಳಲಾಗಿದೆ" ಎಂದರು.
"ರಾಮಲಿಂಗ ರೆಡ್ಡಿ ಅವರು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾಗ 6 ಕಿಲೋ ಮೀಟರ್ ಉದ್ದದಷ್ಟು ಡಬಲ್ ಡೆಕ್ಕರ್ ಬಗ್ಗೆ ಆಲೋಚನೆ ಮಾಡಿದ್ದರು. ನಾನು ನಾಗ್ಪುರ, ಚೆನ್ನೈ ಸೇರಿದಂತೆ ಇತರೆ ಡಬಲ್ ಡೆಕ್ಕರ್ ಯೋಜನೆಯ ಬಗ್ಗೆ ಅಧ್ಯಯನ ನಡೆಸಿದ್ದೆ. ನಿತಿನ್ ಗಡ್ಕರಿ ಅವರು ಈ ಯೋಜನೆ ಬಗ್ಗೆ ತಿಳಿಸಿದ್ದರು" ಎಂದರು.
"ಬನಶಂಕರಿ ಜಂಕ್ಷನ್ ಸ್ಕೈವಾಕ್ ಬಗ್ಗೆ ಈ ಹಿಂದೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು, ಸಂಸದ ತೇಜಸ್ವಿ ಸೂರ್ಯ ಅವರು ಪ್ರಸ್ತಾವನೆ ಮಾಡಿದ್ದರು. ಇದರ ಬಗ್ಗೆ ಕ್ಯಾಬಿನೆಟ್ ಅಲ್ಲೂ ಚರ್ಚೆಯಾಯಿತು. ಸರ್ಕಲ್ ಹೊರತು ಪಡಿಸಿ ಮೇಲ್ಸೆತುವೆ ಬಗ್ಗೆ ರಾಮಲಿಂಗಾರೆಡ್ಡಿ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಭವಿಷ್ಯದಲ್ಲಿ ಕನಕಪುರದ ಕಡೆಗೆ ಹೋಗಬೇಕಾದರೆ ಇದು ಜಂಕ್ಷನ್ ಆಗಲಿದೆ. ಮುಂದಕ್ಕೆ ಇಲ್ಲಿ ಸಂಚಾರ ದಟ್ಟಣೆ ಆಗಬಾರದು. ಅತಿಹೆಚ್ಚು ವಾಹನಗಳು ಸಂಚರಿಸುವ ಜಾಗವಿದು. ಸುಮಾರು 30-40 ಸಾವಿರ ಜನರ ಓಡಾಟ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದೇ ಜಂಕ್ಷನ್ ಬಳಿ ದಕ್ಷಿಣ ಪಾಲಿಕೆ ಕಚೇರಿ ಮಾಡಬೇಕು ಎನ್ನುವ ಪ್ರಸ್ತಾವನೆ ಮಾಡಲಾಗಿದೆ"ಎಂದರು.
"ಬನಶಂಕರಿ ವೃತ್ತ ಪ್ರಮುಖವಾದುದು. ಇಲ್ಲಿ ಬನಶಂಕರಿ ದೇವಸ್ಥಾನವಿದೆ, ಬಸ್ ನಿಲ್ದಾಣವಿದೆ. ಇಲ್ಲಿ ಪಾದಚಾರಿಗಳಿಗೆ ತೊಂದರೆ ಆಗಬಾರದು ಎಂದು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಸ್ಕೈವಾಕ್ ಗೆ ಅಡಿಪಾಯ ಹಾಕಲಾಗಿದೆ. ಇದನ್ನು ಇನ್ನೂ ವಿಸ್ತರಿಸಬೇಕು ಎಂದು ಆಲೋಚನೆ ಮಾಡಲಾಗಿದೆ. ಇದರ ಬಗ್ಗೆ ತಾಂತ್ರಿಕ ಸಾಧ್ಯತೆಗಳ ಅಧ್ಯಯನ ಮಾಡಿ ವರದಿ ನೀಡಿ ಎಂದು ಹೇಳಿದ್ದೇನೆ" ಎಂದರು.
ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆಯಿದ್ದು, ಅಷ್ಟೇ ಸಂಖ್ಯೆಯ ವಾಹನಗಳಿವೆ. ಪರಿಹಾರದ ಮೊತ್ತ ಹೆಚ್ಚಳವಾಗಿರುವ ಕಾರಣಕ್ಕೆ ಕಟ್ಟಡಗಳನ್ನು ನೆಲಸಮ ಮಾಡದೇ ಬೇರೆ ಪರಿಹಾರ ಮಾಡಬೇಕು ಎಂದು ಮೇಲ್ಸೆತುವೆಗಳ ನಿರ್ಮಾಣ ಮಾಡಲಾಗುತ್ತಿದೆ. ನಾಯಂಡಹಳ್ಳಿ- ವಿಜಯನಗರ ಬಳಿ ನೈಸ್ ರಸ್ತೆ ಪ್ರವೇಶ ಕಲ್ಪಿಸಲಾಗಿದೆ. 1.5 ಕಿಮೀ ಉದ್ದವಿದ್ದು. ಇದರಿಂದ ಜನರ ಸಮಯ ಉಳಿತಾಯವಾಗಲಿದೆ" ಎಂದರು.
"ರಾಜಕಾರಣಿಗಳಿಗೆ, ಪೊಲೀಸರಿಗೆ, ಅಧಿಕಾರಿಗಳಿಗೆ ರಜೆ ಎಂಬುದು ಇರುವುದಿಲ್ಲ. ಕಾರ್ಮಿಕರ ದಿನದಂದೇ ಬೆಂಗಳೂರಿನ ಅಭಿವೃದ್ಧಿಯ ಪ್ರಮುಖ ಯೋಜನೆಗಳನ್ನು ಅನಾವರಣ ಮಾಡಿದ್ದೇವೆ" ಎಂದು ಹೇಳಿದರು.