ಬಾಗಲಕೋಟೆ: ಪಂಚರಾಜ್ಯಗಳ ಚುನಾವಣೆಯ ಮತ ಎಣಿಕೆ ಜೊತೆಗೆ ರಾಜ್ಯದಲ್ಲಿ ಬಾಗಲಕೋಟೆ ಹಾಗೂ ದಾವಣಗೆರೆ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆಯೂ ಮುಂದುವರೆದಿದೆ.
ಬಾಗಲಕೋಟೆಯಲ್ಲಿ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಬಿಜೆಪಿಯ ತಮ್ಮ ಪ್ರತಿಸ್ಪರ್ಧಿ ವಿರುದ್ಧ 22,332 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದು ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಬಿಜೆಪಿ ಅಭ್ಯರ್ಥಿಯಾಗಿದ್ದ ವೀರಣ್ಣ ಚರಂತಿಮಠ ಪ್ರಬಲ ಪೈಪೋಟಿ ನೀಡಿದ್ದರೂ ಅಂತಿಮವಾಗಿ ಸೋಲುಂಡಿದ್ದಾರೆ. ಹೆಚ್.ವೈ. ಮೇಟಿ ನಿಧನದ ಹಿನ್ನೆಲೆ ಅವರ ಕುಟುಂಬಕ್ಕೇ ಟಿಕೆಟ್ ನೀಡಲು ನಿರ್ಧರಿಸಿದ್ದ ಕಾಂಗ್ರೆಸ್, ಮೇಟಿ ಪುತ್ರ ಉಮೇಶ್ಅವರನ್ನು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಉಮೇಶ್ ಮೇಟಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು.
ಎಚ್ ವೈ ಮೇಟಿ ಅವರ ಪುತ್ರ ಉಮೇಶ್ ಮೇಟಿ 98,919 ಮತಗಳನ್ನು ಪಡೆದರೆ, ಮಾಜಿ ಶಾಸಕ ಮತ್ತು 2023 ರಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ಬಿಜೆಪಿಯ ವೀರಭದ್ರಯ್ಯ ಚರಂತಿಮಠ 76,587 ಮತಗಳನ್ನು ಪಡೆದರು.
2023 ರ ವಿಧಾನಸಭಾ ಚುನಾವಣೆಯಲ್ಲಿ, ಬಾಗಲಕೋಟೆಯಲ್ಲಿ ಎಚ್ ವೈ ಮೇಟಿ ಬಿಜೆಪಿಯ ಚರಂತಿಮಠ ಅವರನ್ನು 5,878 ಮತಗಳ ಅಂತರದಿಂದ ಸೋಲಿಸಿದರೆ, ದಾವಣಗೆರೆ ದಕ್ಷಿಣದಲ್ಲಿ ಶಿವಶಂಕರಪ್ಪ ಬಿಜೆಪಿಯ ಬಿ ಜಿ ಅಜಯ್ ಕುಮಾರ್ ಅವರನ್ನು 27,888 ಮತಗಳಿಂದ ಸೋಲಿಸಿದ್ದರು.