ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ಲಭಿಸಲಿದೆ. ರಾಜ್ಯಕ್ಕೆ ಹೆಚ್ಚುವರಿ 1,122 ಸೀಟುಗಳು ದೊರೆಯಲಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ನಮ್ಮ ರಾಜ್ಯ ವೈದ್ಯಕೀಯ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ರಾಜ್ಯಕ್ಕೆ ದೊರೆತಿರುವ ಹೆಚ್ಚುವರಿ ಸೀಟುಗಳು ಕೊಪ್ಪಳ, ಗದಗ, ಚಾಮರಾಜನಗರ, ಕಾರವಾರ, ಹಾವೇರಿ ಸೇರಿ ಇತರೆ ಜಿಲ್ಲೆಗಳಿಗೆ ದೊರೆಯಲಿದೆ ಎಂದು ತಿಳಿಸಿದರು.
ಪದವಿಪೂರ್ವ ಸೀಟುಗಳಿಗೆ ಕೇಂದ್ರ ಸರ್ಕಾರದಿಂದ 495 ಕೋಟಿ ರೂ. ಅನುದಾನ ಸಿಗಲಿದೆ. ಅದೇ ರೀತಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗೆ 541 ಕೋಟಿ ರೂಪಾಯಿ ಅನುದಾನ ಸಿಗಲಿದೆ ಎಂದರು.
ಕೇಂದ್ರ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮೇ 15ರಂದು ಅಂತಿಮ ಮುದ್ರೆ ಹಾಕಿದೆ. ಒಟ್ಟಾರೆಯಾಗಿ ರಾಜ್ಯಕ್ಕೆ 1,090 ಕೋಟಿ ರೂ. ದೊರೆಯಲಿದೆ ಎಂದು ಹೇಳಿದರು.
ಒಂದು ಸಾವಿರ ಮೆಡಿಕಲ್ ಸೀಟ್ ಒಂದು ರಾಜ್ಯಕ್ಕೆ ಸಿಕ್ಕಿರುವುದು ದಾಖಲೆಯಾಗಿದೆ. ಕರ್ನಾಟಕದ ಸಾಧನೆಗೆ ಇದು ಪೂರಕವಾದ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಅತಿ ಹೆಚ್ಚು ಸಾಧನೆ ಮಾಡಲು ಕರ್ನಾಟಕದಲ್ಲಿ ಈಗ ವಿಫುಲ ಅವಕಾಶಗಳು ದೊರೆತಂತಾಗುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು