ಬೆಂಗಳೂರು: ಸಿದ್ದರಾಮಯ್ಯ ಅವರು ನಾಳೆ ಅಂದರೆ ಮೇ 28ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ ಎಂದು ಹೇಳುತ್ತಿರುವಾಗಲೇ ಕಾಂಗ್ರೆಸ್ ಗೆ ಮೊದಲ ಬಿಸಿ ತಟ್ಟಿದ್ದು, ಪರಿಣಾಮ ಎದುರಿಸಬೇಕಾಗುತ್ತದೆ ಎಂದು 'ಅಹಿಂದ' ಸಂಘಟನೆ ಎಚ್ಚರಿಕೆ ನೀಡಿದೆ.
ಹೌದು.. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ವ್ಯಾಪಕ ಸುದ್ದಿಗಳು ಹಬ್ಬಿರುವಂತೆಯೇ ಇತ್ತ ಸಿದ್ದರಾಮಯ್ಯನವರ ಅಭಿಮಾನಿಗಳು ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ. ಇನ್ನೂ ಎರಡು ವರ್ಷ ಆಡಳಿತ ಬಾಕಿ ಇರುವಾಗಲೇ ನಾಯಕತ್ವ ಬದಲಾವಣೆ ಮಾಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ನಡೆಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ ರಾಜ್ಯ ಶೋಷಿತ ವರ್ಗಗಳ ಒಕ್ಕೂಟ ಸಹ ಸಿಡಿದೆದ್ದಿದ್ದು, ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸಿದ್ರೆ ಹೋರಾಟ ಮಾಡುವುದಾಗಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಸಮುದಾಯಗಳ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಕಾಂಗ್ರೆಸ್ ಪಕ್ಷ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬುಧವಾರ ಹೇಳಿದೆ.
ಹಿಂದುಳಿದ ವರ್ಗಗಳು ಹಾಗೂ ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಸಮುದಾಯಗಳ ಬೆಂಬಲದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರ ಮಟ್ಟದ ಮತ್ತೊಬ್ಬ ನಾಯಕ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಂದು ಒಕ್ಕೂಟದ ನಾಯಕರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಹಿಂದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, “ನಾವು ಇನ್ನೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ಅವರು ರಾಜೀನಾಮೆ ಕೇಳಿದೆ ಎಂಬ ಮಾಹಿತಿ ನಮಗೆ ಬಂದಿದೆ. ಮುಖ್ಯಮಂತ್ರಿಗಳು ಸಚಿವರು ಮತ್ತು ನಾಯಕರ ಸಭೆಯಲ್ಲಿ ನಿರತರಾಗಿರುವುದರಿಂದ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲಾಗಿದೆ ಎಂಬ ವರದಿಗಳು ನಿಜವಾದರೆ, ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ನಮ್ಮ 70 ಶೇಕಡಾ ಸಮುದಾಯದ ಬೆಂಬಲ ಶೂನ್ಯಕ್ಕೆ ಇಳಿಯುತ್ತದೆ. ಮುಂದಿನ ದಿನಗಳಲ್ಲಿ ಅದನ್ನು ನಾವು ತೋರಿಸುತ್ತೇವೆ ಎಂದು ಹೇಳಿದರು.
ರಾಜಿನಾಮೆಗೆ ಕಾರಣ ಹೇಳಿ
ಇದೇ ವೇಳೆ “ಯಾವುದೇ ಕಾರಣವಿಲ್ಲದೆ, ಯಾವುದೇ ಆರೋಪಗಳಿಲ್ಲದ ಸಿದ್ದರಾಮಯ್ಯ ಅವರಂತಹ ಹಿರಿಯ ನಾಯಕರನ್ನು ಬದಲಾಯಿಸಿದರೆ ನಾವು ಮೌನವಾಗಿರಲು ಸಾಧ್ಯವಿಲ್ಲ. ನಾವು ಪ್ರತಿಭಟನೆಗೆ ಯೋಜನೆ ರೂಪಿಸುತ್ತಿದ್ದೇವೆ ಮತ್ತು ನಾಳೆಯಿಂದಲೇ ಅದನ್ನು ಆರಂಭಿಸಬಹುದು,” ಎಂದರು.
ಈ ಎಚ್ಚರಿಕೆ ನೇರವಾಗಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಹೈಕಮಾಂಡ್‌ಗೆ ನೀಡಲಾಗಿದೆ. ಈ ಸರ್ಕಾರವನ್ನು ಮತ ಹಾಕಿ ಆಯ್ಕೆ ಮಾಡಿದ್ದು ನಾವು. ಹಿಂದುಳಿದ ವರ್ಗಗಳು ಮತ್ತು ಅಹಿಂದ ಸಮುದಾಯಗಳ ಮತಗಳಿಂದಲೇ ಈ ಸರ್ಕಾರ ನಡೆಯುತ್ತಿದೆ. ಯಾವುದೇ ಬದಲಾವಣೆ ಮಾಡಬಾರದು ಎಂಬುದೇ ನಮ್ಮ ಬೇಡಿಕೆ. ಸಿದ್ದರಾಮಯ್ಯ ಅವರ ಮಟ್ಟದ ಮತ್ತೊಬ್ಬ ನಾಯಕ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎಂದು ರಾಮಚಂದ್ರಪ್ಪ ಹೇಳಿದರು.
ಸಮುದಾಯದ ನಾಯಕರೇ ಸಿಎಂ ಆಗ್ಬೇಕು
ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಅವರು, “ಈ ಸರ್ಕಾರ ಅಹಿಂದ ಸಮುದಾಯಗಳ ಕಾರಣದಿಂದ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಮುಖ್ಯಮಂತ್ರಿ ಕೂಡ ಆ ಸಮುದಾಯಗಳಿಂದಲೇ ಆಯ್ಕೆಯಾಗಬೇಕು. ಈ ಸಮುದಾಯಗಳಿಗೆ ಸೇರಿದ ಕಾಂಗ್ರೆಸ್ ಶಾಸಕರು ತಮ್ಮ ಸಮುದಾಯದ ನಾಯಕರ ನಿರ್ಧಾರಕ್ಕೆ ಬೆಂಬಲವಾಗಿ ನಿಲ್ಲಬೇಕು” ಎಂದು ಉತ್ತರಿಸಿದರು.
ಗುರುವಾರ ರಾಜಿನಾಮೆ ಸಾಧ್ಯತೆ
ಇನ್ನು ಸಿದ್ದರಾಮಯ್ಯ ಅವರು ಮುಂದಿನ ಎರಡು ದಿನಗಳಲ್ಲಿ, ಬಹುಶಃ ಗುರುವಾರವೇ ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ತಮ್ಮ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅವಕಾಶ ಕಲ್ಪಿಸಬಹುದು ಎಂಬ ತೀವ್ರ ಊಹಾಪೋಹಗಳು ಹರಿದಾಡುತ್ತಿವೆ.
ಇದಕ್ಕೆ ಇಂಬು ನೀಡುವಂತೆ ಸಿದ್ದರಾಮಯ್ಯ ಅವರೂ ಕೂಡ ರಾಜ್ಯಪಾಲರಿಂದ ಸಮಯ ಕೋರಿದ್ದು, ರಾಜ್ಯಪಾಲರ ಭೇಟಿ ಮಾಡಿ ರಾಜಿನಾಮೆ ಸಲ್ಲಿಸುವ ಸಾಧ್ಯತೆ ಇದೆ ಹೇಳಲಾಗಿದೆ. ಇದಕ್ಕೂ ಮೊದಲು ಗುರುವಾರ ತಮ್ಮ ಅಧಿಕೃತ ನಿವಾಸದಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಹಾರ ಸಭೆ ಆಯೋಜಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದೆ ಎಂಬ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ. ಅವರಿಗೆ ಪಕ್ಷದಲ್ಲಿ ಕೇಂದ್ರ ಮಟ್ಟದ ಜವಾಬ್ದಾರಿ ಹಾಗೂ ರಾಜ್ಯಸಭಾ ಸ್ಥಾನ ನೀಡುವ ಪ್ರಸ್ತಾವನೆ ಕೂಡ ಮಾಡಲಾಗಿದೆ ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಅವರು ಆ ಪ್ರಸ್ತಾವನೆಯನ್ನು ತಕ್ಷಣವೇ ಒಪ್ಪಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.