ಕಲಬುರಗಿ: ಕನ್ನಡವು ಕೇವಲ ಒಂದು ಭಾಷೆಯಲ್ಲ, ಬದಲಾಗಿ ಅದು ಭಾವನೆ, ಇತಿಹಾಸ, ಆಲೋಚನೆ ಮತ್ತು ಸಂಸ್ಕೃತಿಯ ಸಮ್ಮಿಲನವಾಗಿದೆ ಎಂದು ಕರ್ನಾಟಕದ ಗೃಹ, ಐಟಿ-ಬಿಟಿ, ಇ-ಆಡಳಿತ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಭಾನುವಾರ ಹೇಳಿದರು.
ರಾಜ್ಯದ ಶ್ರೀಮಂತ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ, ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಪ್ರಯತ್ನಗಳು ನಡೆಯಬೇಕೆಂದು ಅವರು ಕರೆ ನೀಡಿದರು.
71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಲಬುರಗಿಯನ್ನು ಸ್ಮಾರ್ಟ್ ನಗರದ ಜೊತೆಗೆ ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿ ಹೊಂದಿದ ನಗರವನ್ನಾಗಿ ರೂಪಿಸುವ ಸಂಕಲ್ಪ ಮಾಡಲಾಗಿದೆ. ನಗರದ ಅಭಿವೃದ್ಧಿಗಾಗಿ ನೂತನ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ವಿದೇಶಿ ಬಂಡವಾಳ ಆಕರ್ಷಣೆ, ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರದ ವತಿಯಿಂದ ದಸರಾ ಮಹೋತ್ಸವಕ್ಕೆ 40ಕ್ಕೂ ಹೆಚ್ಚು ವಿದೇಶಿ ರಾಯಭಾರಿಗಳನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಅವರೊಂದಿಗೆ ಸಂವಾದ ನಡೆಸುವ ಅವಕಾಶ ದೊರೆತಿತ್ತು. ಕರ್ನಾಟಕದ ಕಲೆ, ಸಾಹಿತ್ಯ, ಆಹಾರ ಮತ್ತು ಸಂಸ್ಕೃತಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂಬುದನ್ನು ತಿಳಿದು ವಿದೇಶಿ ಪ್ರತಿನಿಧಿಗಳು ಅಚ್ಚರಿ ವ್ಯಕ್ತಪಡಿಸಿದರು. ಕನ್ನಡದ ಸಾಹಿತ್ಯ ಪರಂಪರೆ, ರಾಜ್ಯದ ಇತಿಹಾಸ ಹಾಗೂ ವೈವಿಧ್ಯತೆಯ ಬಗ್ಗೆ ತಿಳಿದುಕೊಂಡು ಸಂತಸಪಟ್ಟರು ಎಂದು ಹೇಳಿದರು.
ಕನ್ನಡ ಕೇವಲ ಭಾಷೆಯಲ್ಲ, ಅದು ಭಾವನೆ, ಇತಿಹಾಸ, ವಿಚಾರ ಮತ್ತು ಆಚಾರಗಳ ಸಂಗಮವಾಗಿದೆ. ಜನಪದ, ದಾಸ, ಜೈನ, ನವೋದಯ, ನವ್ಯ ಹಾಗೂ ಬಂಡಾಯ ಸಾಹಿತ್ಯ ಸೇರಿದಂತೆ ವೈವಿಧ್ಯಮಯ ಸಾಹಿತ್ಯ ಪರಂಪರೆಯನ್ನು ಕನ್ನಡ ಹೊಂದಿದೆ. ಇಂತಹ ಶ್ರೀಮಂತ ಮತ್ತು ವೈವಿಧ್ಯಮಯ ಸಾಹಿತ್ಯ ಪರಂಪರೆ ಮತ್ತೊಂದು ಭಾಷೆಯಲ್ಲಿ ಕಾಣುವುದು ಅಪರೂಪ ಎಂದರು.
ಕರ್ನಾಟಕದ ವೈವಿಧ್ಯತೆಯನ್ನು ವಿವರಿಸಿದ ಅವರು, ಮಲೆನಾಡಿನ ಜನರಿಗೆ ಇದು ಹಸಿರಿನ ಸಿರಿ, ಕಲ್ಯಾಣ ಕರ್ನಾಟಕದ ಜನರಿಗೆ ತೊಗರಿಯ ಕಣಜ ಹಾಗೂ ಸೂಫಿ ಸಂತರ ನಾಡು, ಮಂಡ್ಯ ಭಾಗದವರಿಗೆ ರೇಷ್ಮೆ ಮತ್ತು ಹಾಲಿನ ನಾಡು, ಕರಾವಳಿ ಭಾಗದವರಿಗೆ ವಿಭಿನ್ನ ಸಂಸ್ಕೃತಿಯ ನೆಲೆ. ಸಾಹಿತಿಗಳಿಗೆ ಕಲೆ ಮತ್ತು ಸಾಂಸ್ಕೃತಿಕ ನಾಡು, ಬಸವಣ್ಣನವರ ಅನುಯಾಯಿಗಳಿಗೆ ಸಮಾನತೆಯ ಸಂದೇಶ ಸಾರಿದ ನೆಲ, ವಿಶ್ವದ ಜನರಿಗೆ ಜ್ಞಾನದ ನಾಡು, ಯುವಜನರಿಗೆ ಅವಕಾಶಗಳ ನಾಡು ಹಾಗೂ ವಿದೇಶಿಯರಿಗೆ ಮಾನವ ಸಂಪನ್ಮೂಲದ ಕೇಂದ್ರವಾಗಿದೆ. ಹೀಗಾಗಿ ಕರ್ನಾಟಕವು ರಾಷ್ಟ್ರದ ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಯುವಜನರಿಗೆ ಅಗತ್ಯವಿರುವ ನೀತಿ-ನಿಯಮಗಳನ್ನು ರೂಪಿಸಿ, ಅವರ ಭವಿಷ್ಯಕ್ಕೆ ಅವಕಾಶಗಳನ್ನು ಕಲ್ಪಿಸುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಯುವಜನರೇ ನಾಡಿನ ನಿಜವಾದ ಆಸ್ತಿ. ಕಲಬುರಗಿಯ ಅಭಿವೃದ್ಧಿಯಾಗಬೇಕಾದರೆ ಯುವಕರಿಗೆ ಗುಣಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಕಲಬುರಗಿಯ ಸಮಗ್ರ ಅಭಿವೃದ್ಧಿಗಾಗಿ ಕಳೆದ ವರ್ಷವೇ ನೂತನ ನೀಲನಕ್ಷೆ ರೂಪಿಸುವುದಾಗಿ ಘೋಷಿಸಿದ್ದೆ. ಇದೀಗ ನಗರಕ್ಕೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿದ್ದು, ಸ್ಮಾರ್ಟ್ ಸಿಟಿ ಮಾದರಿಯಲ್ಲಿ ವಿದೇಶಿ ಬಂಡವಾಳ ಆಕರ್ಷಿಸುವುದು, ಉದ್ಯೋಗ ಸೃಷ್ಟಿಸುವುದು ಹಾಗೂ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಅಭಿವೃದ್ಧಿ ಯೋಜನೆಗಳ ಫಲಿತಾಂಶ ಕಣ್ಣಿಗೆ ಕಾಣುವಂತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಯುವಕರಿಗೆ ನೆರವಾಗುವ ಉದ್ದೇಶದಿಂದ ಈಗಾಗಲೇ ಪ್ರಬುದ್ಧ ಅಕಾಡೆಮಿ ಸ್ಥಾಪಿಸಲಾಗಿದೆ. ಇದರ ಜೊತೆಗೆ ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಸ್ಥಾಪಿಸಲಾಗಿದೆ. ಖಾಸಗಿ ಸಹಭಾಗಿತ್ವದ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎಂಬುದಕ್ಕೆ ಈ ಸಂಸ್ಥೆ ಮಾದರಿಯಾಗಲಿದೆ ಎಂದರು.