ಶರಾವತಿ ಅಭಯಾರಣ್ಯ 
ರಾಜ್ಯ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಆರಂಭಕ್ಕೂ ಮುನ್ನವೇ 382 ಕೋಟಿ ರೂ. ನೀರು ಪಾಲು, ವೆಚ್ಚ 10,240 ಕೋಟಿ ರೂ.ಗೆ ಏರಿಕೆ..!

2021 ರಿಂದ 2026 ರ ಕೊನೆಯವರೆಗಿನ ಅವಧಿಯಲ್ಲಿ ಯಾವುದೇ ಕಾಮಗಾರಿ ನಡೆಯದಿದ್ದರೂ, ಸರ್ಕಾರ ಈಗಾಗಲೇ 382 ಕೋಟಿ ಹಣವನ್ನು ವ್ಯಯಿಸಿದೆ.

ಬೆಂಗಳೂರು/ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ಕಾಮಗಾರಿ ಆರಂಭವಾಗುವ ಮುನ್ನವೇ ಭಾರಿ ಆರ್ಥಿಕ ಹೊರೆ ತಂದೊಡ್ಡಿದೆ.

2021 ರಿಂದ 2026 ರ ಕೊನೆಯವರೆಗಿನ ಅವಧಿಯಲ್ಲಿ ಯಾವುದೇ ಕಾಮಗಾರಿ ನಡೆಯದಿದ್ದರೂ, ಸರ್ಕಾರ ಈಗಾಗಲೇ 382 ಕೋಟಿ ಹಣವನ್ನು ವ್ಯಯಿಸಿದೆ. ಈ ಪೈಕಿ ಎಂಜಿನಿಯರಿಂಗ್, ಖರೀದಿ ಮತ್ತು ಗುತ್ತಿಗೆ ಕಾಮಗಾರಿಗಳಿಗಾಗಿ ರೂ.360 ಕೋಟಿ ಹಾಗೂ 2021ರಿಂದ 2024ರ ಅವಧಿಯಲ್ಲಿ ಸಿದ್ಧಪಡಿಸಿದ ವಿವರವಾದ ಯೋಜನಾ ವರದಿಗಾಗಿ (ಡಿಪಿಆರ್) ರೂ.22 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಯೋಜನೆಯ ಅಂದಾಜು ವೆಚ್ಚ ಈ ಹಿಂದೆ ಇದ್ದ ರೂ.8,800 ಕೋಟಿಯಿಂದ ಈಗ ರೂ.10,240 ಕೋಟಿಗೆ ಏರಿಕೆಯಾಗಿದೆ.

ನವೆಂಬರ್ ಮೂರನೇ ವಾರದಲ್ಲಿ ನಡೆಯಲಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್‌ಬಿಡಬ್ಲ್ಯುಎಲ್) ಸಭೆಯಲ್ಲಿ ಯೋಜನೆಗೆ ಅನುಮೋದನೆ ದೊರೆಯಬಹುದು ಎಂಬ ನಿರೀಕ್ಷೆಯನ್ನು ಇಂಧನ ಇಲಾಖೆಯ ಕೆಲವು ಅಧಿಕಾರಿಗಳು ಹೊಂದಿದ್ದಾರೆ. ಆದರೆ, ಯೋಜನೆಯು ಈಗಾಗಲೇ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ ಎಂದು ಇಲಾಖೆಯ ಇತರ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (ಎನ್‌ಐಎಎಸ್) ಸಲ್ಲಿಸಿರುವ ಯೋಜನಾ ವರದಿಯನ್ನೂ ಈ ಸಭೆಯಲ್ಲಿ ಪರಿಶೀಲಿಸಲಾಗುತ್ತದೆ.

ಆದರೆ, ವಿಚಾರಣೆಗಳು ಪೂರ್ಣಗೊಂಡು ಯೋಜನೆಗೆ ಅಂತಿಮ ಅನುಮತಿಗಳು ದೊರೆಯುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯಗಳು ಆದೇಶಿಸಿವೆ. ಯೋಜನೆ ಅನುಷ್ಠಾನದಲ್ಲಿನ ವಿಳಂಬ ಮತ್ತು ಪದೇಪದೇ ನಡೆಸುತ್ತಿರುವ ಸಮೀಕ್ಷೆಗಳಿಂದ ವೆಚ್ಚ ಹೆಚ್ಚಳವಾಗಿದೆ. ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ಸರ್ಕಾರಕ್ಕೆ ಈ ಯೋಜನೆ ಬಿಳಿ ಆನೆಯಾಗಿ ಪರಿಣಮಿಸುವ ಆತಂಕವಿದೆ ಎಂದು ಯೋಜನೆ ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಯ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸದಂತೆ ತಿಳಿಸಿದರು.

ಪಶ್ಚಿಮ ಘಟ್ಟಗಳ ಸೂಕ್ಷ್ಮ ಮತ್ತು ಪರಿಸರ ಸಂವೇದಿ ಪ್ರದೇಶದಲ್ಲಿ ಇಂತಹ ಯೋಜನೆಯ ಅಗತ್ಯವೇನು ಎಂದು ತಜ್ಞರು ಪ್ರಶ್ನಿಸಿದ್ದಾರೆ. ವಿಳಂಬದಿಂದಾಗಿ ಯೋಜನೆಯ ಅಂದಾಜು ವೆಚ್ಚವನ್ನು ಪದೇಪದೇ ಪರಿಷ್ಕರಿಸುತ್ತಿರುವ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಿಂಗಳೀಕ ಸಂರಕ್ಷಿತ ಪ್ರದೇಶದಲ್ಲಿ 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಈ ಯೋಜನೆ ಅನುಷ್ಠಾನಗೊಂಡರೆ ಹೆಚ್ಚುವರಿ ವಿದ್ಯುತ್ ಭಾರವನ್ನು ನಿಭಾಯಿಸಲು ವಿದ್ಯುತ್ ಜಾಲವನ್ನು ಸಮರ್ಪಕವಾಗಿ ಮೇಲ್ದರ್ಜೆಗೇರಿಸಲಾಗಿದೆಯೇ ಎಂಬ ಬಗ್ಗೆಯೂ ತಜ್ಞರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ವಿದ್ಯುತ್ ಮತ್ತು ಹವಾಮಾನ ನೀತಿ ವಿಶ್ಲೇಷಕ ಶಂಕರ್ ಶರ್ಮಾ ಅವರು ಮಾತನಾಡಿ, ಈವರೆಗೆ ಮಾಡಿರುವ ವೆಚ್ಚದ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಗಮನ ಸೆಳೆಯಲು ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಯೋಜನೆ ಅನುಷ್ಠಾನಕ್ಕೂ ಮುನ್ನ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಮಾಡಿರುವ ವೆಚ್ಚದ ವಿವರಗಳನ್ನು ಒದಗಿಸುವಂತೆ ಹಾಗೂ ವಿದ್ಯುತ್ ವಲಯಕ್ಕೆ ಈ ಯೋಜನೆಯ ಅಗತ್ಯವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಪತ್ರದಲ್ಲಿ ಕೋರಲಾಗಿದೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಇದೂವರೆಗೆ ಮಾಡಿರುವ ವೆಚ್ಚದ ಬಗ್ಗೆ ಆರ್ಥಿಕ ಮತ್ತು ಆಡಳಿತಾತ್ಮಕ ತನಿಖೆ ನಡೆಸಿ, ಅದರ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಅಗತ್ಯವಿದೆ ಎಂದು ಶರ್ಮಾ ಒತ್ತಾಯಿಸಿದ್ದಾರೆ.

ಪರಿಸರ ಅನುಮತಿ, ವನ್ಯಜೀವಿ ಅನುಮತಿ ಮತ್ತು ಅರಣ್ಯ ಇಲಾಖೆಯ ಅನುಮತಿ ಸೇರಿದಂತೆ ಅಗತ್ಯ ಕಾನೂನುಬದ್ಧ ಒಪ್ಪಿಗೆಗಳನ್ನು ಪಡೆಯುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಂಧ್ರ ಕರಾವಳಿಗೆ ಅಪ್ಪಳಿಸಿದ ‘ಮುರಸು’ ಚಂಡಮಾರುತ; ಭಾರೀ ಮಳೆ, ಗಂಟೆಗೆ 120 ಕಿ.ಮೀ ವೇಗದಲ್ಲಿ ಬಿರುಗಾಳಿ; Video

Iran ಮೇಲೆ ಮತ್ತೆ ಮುಗಿಬಿದ್ದ ಅಮೆರಿಕ; Qeshm ದ್ವೀಪದ ಮೇಲೆ ವೈಮಾನಿಕ ದಾಳಿ, ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧದ ಆತಂಕ..!

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ HDK ಕೈವಾಡ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸ್ಕೆಚ್: ಸಚಿವ ಕೃಷ್ಣ ಬೈರೇಗೌಡ ಗಂಭೀರ ಆರೋಪ..!

ಹಳೇ ಬಿಲ್ ಪಾವತಿಸದಿದ್ದರೆ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲ್ಲ: 38 ಸಾವಿರ ಕೋಟಿ ರೂ. ಬಾಕಿ ಇತ್ಯರ್ಥಪಡಿಸಿ, ಸರ್ಕಾರಕ್ಕೆ ಗುತ್ತಿಗೆದಾರರ ಖಡಕ್ ಎಚ್ಚರಿಕೆ..!

Sting operation ವಿವಾದ: ಉದ್ದೇಶಪೂರ್ವಕವಾಗಿ ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ; HDK ಪರ ಬ್ಯಾಟ್ ಬೀಸಿದ ಕೇಂದ್ರ ಸಚಿವ ವಿ. ಸೋಮಣ್ಣ