ಬೆಂಗಳೂರು: ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಕಾಂಗ್ರೆಸ್ ನಾಯಕರೇ ಎಂಬುದು ಸಾಬೀತಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಜನರೇ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಸ್ಟಿಂಗ್ ಆಪರೇಷನ್ ವಿವಾದದ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರೂ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಸಿದ್ದರಾಮಯ್ಯ ಅವರ ಬೆಂಬಲಿಗರು ಮತ್ತು ಮತದಾರರು ಕೂಡ ಕಾಂಗ್ರೆಸ್ ವಿರುದ್ಧ ನಿಂತಿದ್ದಾರೆ. ಇದರ ಪರಿಣಾಮ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಣಿಸಿಕೊಳ್ಳಲಿದೆ ಎಂದು ಅಶೋಕ್ ಹೇಳಿದ್ದಾರೆ.
ಸಿಎಂ ಡಿ. ಕೆ ಶಿವಕುಮಾರ್ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಅಶೋಕ್, ಆಂತರಿಕ ಕಚ್ಚಾಟ, ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಪಿಂಚಣಿ ಸಮಸ್ಯೆ ಹಾಗೂ ಇಲಾಖೆಗಳ ಅನುದಾನದ ಕೊರತೆಯನ್ನು ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಎಲ್ಲೆ ಮೀರಿ ಹೋಗಿದೆ. ಈಗ ಸಚಿವ ಬಾಲಕೃಷ್ಣ ನೇರವಾಗಿ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಮಾಡಿದ್ದಾರೆ. "ರಾಜಣ್ಣ ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ" ಎಂದು ಸವಾಲು ಹಾಕಿದ್ದಾರೆ. ಸ್ಟಿಂಗ್ ಆಪರೇಶನ್, ವಿಧಾನಪರಿಷತ್ ಚುನಾವಣೆಯಲ್ಲಿ ಹೀನಾಯ ಸೋಲು, ಬಣ ರಾಜಕೀಯ, ಎಸ್ ಐಆರ್ ಹೋರಾಟಕ್ಕಾಗಿ ದೆಹಲಿಗೆ ಓಟ - ಇವೆಲ್ಲದರಿಂದಾಗಿ ಇಡೀ ಆಡಳಿತ ಮಕಾಡೆ ಮಲಗಿದೆ.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ರೈತರಿಗೆ ಬರ ಪರಿಹಾರ ಸಿಗುತ್ತಿಲ್ಲ, ಕಬ್ಬು ಬೆಳೆಗಾರರ ಸಂಕಷ್ಟ ಆಲಿಸುತ್ತಿಲ್ಲ, ಶಾಲೆಗಳ ಅಭಿವೃದ್ಧಿ ನಡೆಯುತ್ತಿಲ್ಲ, ವಿಕಲಚೇತನರಿಗೆ ಪಿಂಚಣಿ ಸಿಗುತ್ತಿಲ್ಲ, ಗುತ್ತಿಗೆದಾರರಿಗೆ ಬಾಕಿ ಬಿಲ್ ಸಿಕ್ಕಿಲ್ಲ. ಹೀಗೆ ಎಲ್ಲದರಲ್ಲೂ 'ಇಲ್ಲ' ಎಂಬುದನ್ನು ನಿಮ್ಮ ಕಾಂಗ್ರೆಸ್ ಆಡಳಿತ ತೋರಿಸಿಕೊಟ್ಟಿದೆ. ಈ ಸರ್ಕಾರದಲ್ಲಿ ಸ್ಥಳೀಯ ಮುಖಂಡರಿಂದ ಆರಂಭವಾಗಿ, ಶಾಸಕರು, ಸಚಿವರು ಪರಸ್ಪರ ಕಿತ್ತಾಡಿಕೊಂಡು ಜನರ ಸಂಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ. ಇನ್ನು ಎಲ್ಲರೂ ಬೀದಿಗೆ ಬಂದು ಹೊಡೆದಾಟ ಮಾಡುವುದೊಂದು ಬಾಕಿ ಇದೆ. ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಯಾವುದೇ ತಾಳಮೇಳ ಇಲ್ಲ. ಈ ಕಿತ್ತುಹೋದ ನಿಮ್ಮ ಆಡಳಿತಕ್ಕೆ ತೇಪೆ ಹಾಕುವ ಬದಲು ರಾಜೀನಾಮೆ ನೀಡಿ ಅಧಿಕಾರದಿಂದ ತೊಲಗಿ.