ಲಡಾಖ್ ತಲುಪಿರುವ ಮಂಗಳೂರಿನ ಮೂವರು ಯುವಕರು. 
ರಾಜ್ಯ

AC ಇಲ್ಲ, GPS ಇಲ್ಲ, ಆದರೂ ಛಲ ಬಿಡಲಿಲ್ಲ; -14°C ಚಳಿಯಲ್ಲೂ 2001ರ ಮಾರುತಿ 800 ಓಡಾಟ; 11 ರಾಜ್ಯಗಳ ದಾಟಿ ಲಡಾಖ್ ತಲುಪಿದ ಕರಾವಳಿ ಯುವಕರು..!

ಮಂಗಳೂರಿನ ಹರೀಶ್ ಭಟ್, ಕೃಷ್ಣ ಪ್ರಸಾದ್ ಭಟ್ ಮತ್ತು ರಾಕೇಶ್ ಬೋಳಾರ್ ಅವರು ಅಕ್ಟೋಬರ್ 19ರಂದು ತಮ್ಮ ಸಾಹಸಮಯ ಪ್ರಯಾಣ ಆರಂಭಿಸಿದ್ದರು.

ಮಂಗಳೂರು: ದೃಢ ಸಂಕಲ್ಪ ಮತ್ತು ಅಚಲ ವಿಶ್ವಾಸವಿದ್ದರೆ ಎಂತಹ ಕಠಿಣ ಗುರಿಯನ್ನೂ ತಲುಪಬಹುದು ಎಂಬುದನ್ನು ಮಂಗಳೂರಿನ ಈ ಮೂವರು ಯುವಕರು ಸಾಬೀತುಪಡಿಸಿದ್ದಾರೆ.

ಹಿಮಾಲಯದ ಕಡಿದಾದ ಹಾಗೂ ಅಪಾಯಕಾರಿ ರಸ್ತೆಗಳಲ್ಲಿ ಸಂಚರಿಸಲು ಇಂದು ಜನರು ಕೋಟ್ಯಂತರ ರೂಪಾಯಿ ಮೌಲ್ಯದ ಆಧುನಿಕ ಎಸ್‌ಯುವಿ (SUV) ಕಾರುಗಳನ್ನು ಬಳಕೆ ಮಾಡುತ್ತಾರೆ. ಆದರೆ, ಮಂಗಳೂರಿನ ಈ ಮೂವರು ಸ್ನೇಹಿತರು ತಮ್ಮ 25 ವರ್ಷ ಹಳೆಯ, 2001ರ ಮಾಡೆಲ್‌ನ ಪುಟ್ಟ ಮಾರುತಿ 800 ಕಾರಿನಲ್ಲೇ ಲಡಾಖ್ ಪ್ರವಾಸ ಕೈಗೊಂಡು ಗಮನ ಸೆಳೆದಿದ್ದಾರೆ.

ಮಂಗಳೂರಿನ ಹರೀಶ್ ಭಟ್, ಕೃಷ್ಣ ಪ್ರಸಾದ್ ಭಟ್ ಮತ್ತು ರಾಕೇಶ್ ಬೋಳಾರ್ ಅವರು ಅಕ್ಟೋಬರ್ 19ರಂದು ತಮ್ಮ ಸಾಹಸಮಯ ಪ್ರಯಾಣ ಆರಂಭಿಸಿದ್ದರು.

'ಅರಣ್ಯ ಉಳಿಸಿ' ಎಂಬ ಸಂದೇಶದೊಂದಿಗೆ ಹೊರಟಿದ್ದ ಈ ಮೂವರು, ಶುದ್ಧ ಗಾಳಿ, ಶುದ್ಧ ನೀರು, ವನ್ಯಜೀವಿಗಳ ಸಂರಕ್ಷಣೆ ಹಾಗೂ ಹಸಿರು ಪರಿಸರದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದರು. ಮೂವರು ಸ್ನೇಹಿತರು ನವೆಂಬರ್ 2ರಂದು ಯಶಸ್ವಿಯಾಗಿ ಮಂಗಳೂರಿಗೆ ಮರಳಿದ್ದಾರೆ.

ಕೇವಲ ಸಾಹಸಕ್ಕೆ ಸೀಮಿತವಾಗದೆ, ಪ್ರಯಾಣದ ಮಾರ್ಗದಲ್ಲಿ ಸ್ಥಳೀಯ ಸಮುದಾಯಗಳೊಂದಿಗೆ ಬೆರೆತು ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕುರಿತು ಜಾಗೃತಿ ಮೂಡಿಸಿದ್ದಾರೆ.

ಪ್ರಯಾಣದ ವೇಳೆ ಎದುರಿಸಿದ ಸವಾಲುಗಳ ಕುರಿತು ಮಾತನಾಡಿದ ರಾಕೇಶ್ ಬೋಳಾರ್, 2001ರ ಮಾಡೆಲ್‌ನ ಮಾರುತಿ 800 ಕಾರಿನಲ್ಲಿ ಲಡಾಖ್‌ವರೆಗೆ ಪ್ರಯಾಣಿಸುವುದೇ ದೊಡ್ಡ ಸವಾಲಾಗಿತ್ತು ಎಂದು ಹೇಳಿದ್ದಾರೆ.

ಕಾರಿನಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇರಲಿಲ್ಲ. ಜಿಪಿಎಸ್ ಸೌಲಭ್ಯವೂ ಇರಲಿಲ್ಲ. ವೇಗ ಪಡೆದುಕೊಳ್ಳುವ ಸಾಮರ್ಥ್ಯವೂ ಸೀಮಿತವಾಗಿತ್ತು. ನಾವು ಪ್ರವಾಸದ ಅವಧಿಯನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಹವಾಮಾನ ಮತ್ತಷ್ಟು ಸವಾಲಾಗಿತ್ತು. ಮೈನಸ್ 14 ಡಿಗ್ರಿ ಸೆಲ್ಸಿಯಸ್‌ನಷ್ಟು ತೀವ್ರ ಚಳಿಯಲ್ಲೂ ಕಾರು ಚಾಲನೆ ಮಾಡಬೇಕಾಯಿತು. ಮುನ್ನೆಚ್ಚರಿಕೆಯ ಕ್ರಮವಾಗಿ ಆಮ್ಲಜನಕದ ಸಿಲಿಂಡರ್‌ನ್ನೂ ನಮ್ಮೊಂದಿಗೆ ಕೊಂಡೊಯ್ದಿದ್ದೆವು ಎಂದು ವಿವರಿಸಿದ್ದಾರೆ.

ಇದೇ ವೇಳೆ ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ನಿಜವಾಗಿಯೂ ಅನುಭವಿಸಬೇಕಾದರೆ ರಸ್ತೆ ಪ್ರಯಾಣ ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಪ್ರಯಾಣದಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು, ಮಾರ್ಗಮಧ್ಯೆ ಸಿಗುವ ಹಳ್ಳಿಗಳನ್ನು ನೋಡಬಹುದು. ಅಲ್ಲಿನ ಜನರನ್ನು ಭೇಟಿಯಾಗಿ ಅವರ ಆತಿಥ್ಯವನ್ನು ಅನುಭವಿಸಬಹುದು ಎಂದು ತಿಳಿಸಿದ್ದಾರೆ.

ಪ್ರಯಾಣದ ಕುರಿತು ಹರೀಶ್ ಮಾತನಾಡಿ, ಮಾರುತಿ 800 ಕಾರಿನಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಿರಲಿಲ್ಲ. ಪ್ರಯಾಣದ ನಡುವೆ ತಾಂತ್ರಿಕ ತೊಂದರೆ ಎದುರಾದರೆ ಸರಿಪಡಿಸಿಕೊಳ್ಳಲು ಅಗತ್ಯವಾದ ಹೆಚ್ಚುವರಿ ಬಿಡಿಭಾಗಗಳನ್ನು ಮಾತ್ರ ಕೊಂಡೊಯ್ಯಲಾಗಿತ್ತು.

ಪ್ರಯಾಣದ ವೇಳೆ ಅಪರಿಚಿತ ರಸ್ತೆ ಪರಿಸ್ಥಿತಿಗಳನ್ನೂ ಎದುರಿಸಬೇಕಾಯಿತು. ಅದರಲ್ಲೂ ರಸ್ತೆ ಮೇಲಿನ ಕಪ್ಪು ಮಂಜುಗಡ್ಡೆ (ಬ್ಲ್ಯಾಕ್ ಐಸ್) ವಾಹನಗಳ ಚಕ್ರಗಳು ಜಾರುವಂತೆ ಮಾಡಿ ಅಪಾಯಕಾರಿ ಪರಿಸ್ಥಿತಿ ಎದುರಾಗಿತ್ತು ಎಂದು ತಿಳಿಸಿದ್ದಾರೆ.

ಇಂತಹ ಹಲವು ಸವಾಲುಗಳನ್ನು ಮೆಟ್ಟಿ ನಿಂತ ಮೂವರು ಸ್ನೇಹಿತರು, ಲಡಾಖ್‌ನ ಖಾರ್ದುಂಗ್ ಲಾ ಪಾಸ್ ತಲುಪಿ ತಮ್ಮ ಸಾಹಸಮಯ ಯಾತ್ರೆಯನ್ನು ಯಶಸ್ವಿಗೊಳಿಸಿ, ಮಂಗಳೂರಿಗೆ ವಾಪಸ್ಸಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ: ಡೆಮೋಕ್ರಾಟ್ ಪಕ್ಷ ಮುನ್ನಡೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹಿನ್ನಡೆ

ಸೋತ ಅಭ್ಯರ್ಥಿಗಳಿಗೆ ಸಾರ್ವಜನಿಕ ಹುದ್ದೆ 'ಸಾಂತ್ವನ ಬಹುಮಾನ'ವಲ್ಲ; ಸರ್ಕಾರದ ಹಿಂಬಾಗಿಲ ನೇಮಕಕ್ಕೆ ಹೈಕೋರ್ಟ್ ತಡೆ..!

ಜನರಿಗಲ್ಲ, ಹೈಕಮಾಂಡ್ ಮೆಚ್ಚಿಸಲು ಡಿಕೆಶಿ ಕೆಲಸ ಮಾಡ್ತಿದ್ದಾರೆ, 2028ರಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತ: ಲಹರ್ ಸಿಂಗ್ ಸಿರೋಯಾ

ಜೀವನಾಂಶ ಸ್ವಯಂಚಾಲಿತ ಹಕ್ಕಲ್ಲ: ಪತ್ನಿ ಆರ್ಥಿಕವಾಗಿ ಸ್ವತಂತ್ರಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು

ಇಸ್ರೇಲ್‌ಗೆ ವಾರ್ಷಿಕ 3.8 ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತ: ಅಮೆರಿಕ ಮಧ್ಯಂತರ ಚುನಾವಣೆ ನಡುವೆ ಟ್ರಂಪ್ ಘೋಷಣೆ