ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜನರು ಈಗಾಗಲೇ ನಿರ್ಧರಿಸಿದ್ದಾರೆ. ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಇದಕ್ಕಾಗಿ ಉತ್ತಮ ಹಾಗೂ ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಸಾಕು ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯೊಂದಿಗೆ ಮಾತನಾಡಿದ ಅವರು, 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರು ಮತ ಹಾಕುವುದಿಲ್ಲ. ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ನಡೆಯುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸುತ್ತಿಲ್ಲ. ಬದಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಪಕ್ಷದ ಹೈಕಮಾಂಡ್ ಹಾಗೂ ಗಾಂಧಿ ಕುಟುಂಬವನ್ನು ಮೆಚ್ಚಿಸಲು ಮುಂದಾಗಿದ್ದಾರೆ. ಪಕ್ಷದ ವರಿಷ್ಠರಿಗೆ ಹಣ ಸಂಗ್ರಹಿಸಲು ಅನುಕೂಲವಾಗುವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅವರು ರಾಜ್ಯದ ಜನರಿಗಾಗಿ ಕೆಲಸ ಮಾಡುತ್ತಿಲ್ಲ, ಪಕ್ಷದ ಹೈಕಮಾಂಡ್‌ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಟಿಂಗ್ ಆಪರೇಷನ್ ವಿವಾದದ ಕುರಿತು ಪ್ರತಿಕ್ರಿಯಿಸಿ, ಈ ಬೆಳವಣಿಗೆಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧವೇ ತಿರುಗಿಬೀಳುವ ಸಾಧ್ಯತೆಯಿದೆ ಎಂದರು.
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿದ್ದರೆ, ಜೆಡಿಎಸ್ ಒಂದು ಸ್ಥಾನವನ್ನು ಗೆದ್ದಿದೆ .ಈ ಫಲಿತಾಂಶ, ಅದರಲ್ಲೂ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು, ಡಿ.ಕೆ. ಶಿವಕುಮಾರ್ ವಿರುದ್ಧ ಪಕ್ಷದೊಳಗೇ ಅಸಮಾಧಾನವಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಇವಿಎಂ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳನ್ನು ಅವರು ತಳ್ಳಿಹಾಕಿದರು.
ಇವಿಎಂಗಳು ಈಗಾಗಲೇ ಹಲವು ಚುನಾವಣೆಗಳಲ್ಲಿ ತಮ್ಮ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿವೆ. ಚುನಾವಣೆಗಳು ಶಾಂತಿಯುತವಾಗಿ ನಡೆಯುತ್ತಿವೆ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷೆಗಿಂತ ಕಡಿಮೆ ಸ್ಥಾನಗಳನ್ನು ಪಡೆದ ಸಂದರ್ಭಗಳಿದ್ದರೂ, ಪಕ್ಷ ಸೋಲನ್ನು ಒಪ್ಪಿಕೊಂಡಿದೆಯೇ ಹೊರತು ಇವಿಎಂಗಳ ಮೇಲೆ ಆರೋಪ ಮಾಡಿಲ್ಲ.
ತನ್ನ ಸೋಲಿನ ಕಾರಣಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಕಾಂಗ್ರೆಸ್ ಇವಿಎಂಗಳ ಮೇಲೆ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಈಗ ಗಾಂಧಿ ಕುಟುಂಬದ ಗುಲಾಮನಾಗಿ ಬದಲಾಗಿದೆ. ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್‌ನಲ್ಲಿ ಈಗ ಬಣ ರಾಜಕೀಯ ಮತ್ತಷ್ಟು ಹೆಚ್ಚಾಗಿದೆ. ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಪ್ರತ್ಯೇಕ ಗುಂಪುಗಳಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಕೇಳಿದ ಪ್ರಶ್ನೆಗೆ, ಪಕ್ಷದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.
ಬಳಿಕ ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು 2028ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ನೆರವಾಗುವುದಿಲ್ಲ ಎಂದು ಸಿರೋಯಾ ಅವರು ಅಭಿಪ್ರಾಯಪಟ್ಟರು.
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಚುನಾವಣೆಯಲ್ಲಿ ಸೋಲು ಕಂಡಿರುವುದನ್ನು ಉಲ್ಲೇಖಿಸಿದ ಅವರು, ಇಂತಹ ಯೋಜನೆಗಳು ಎಲ್ಲರಿಗೂ ವಿಸ್ತರಿಸುವ ಬದಲು ಬಡವರಿಗೆ ಹೆಚ್ಚು ಪ್ರಯೋಜನವಾಗುವಂತೆ ರೂಪಿಸಬೇಕು ಎಂದರು.
ಕರ್ನಾಟಕದ ಬರಪೀಡಿತ ತಾಲ್ಲೂಕುಗಳ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿರುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ ಮಾಡುತ್ತಿರುವ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ಹಣವನ್ನು ನೆರೆಯ ರಾಜ್ಯಗಳ ಚುನಾವಣೆಗಳಿಗೆ ಬಳಸಲಾಗಿದೆ ಎಂಬ ವರದಿಗಳಿವೆ ಎಂದು ದೂರಿದರು.
ವಿಶ್ವದ ಹಲವು ಭಾಗಗಳಲ್ಲಿ ಸಂಘರ್ಷಗಳು ನಡೆಯುತ್ತಿದ್ದರೂ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಭಾರತ ಮತ್ತು ದೇಶದ ಆರ್ಥಿಕತೆ ಸುರಕ್ಷಿತವಾಗಿವೆ ಎಂದು ಹೇಳಿದರು.
ಜೆನ್ ಝೀ ಪ್ರತಿಭಟನೆಗಳನ್ನು ತಳ್ಳಿಹಾಕಿದ ಅವರು, ಸುಮಾರು 2,000 ಜನರು ಸೇರುವುದರಿಂದ 150 ಕೋಟಿ ಜನಸಂಖ್ಯೆಯ ದೇಶದ ಅಭಿಪ್ರಾಯವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದರು.
ಈ ಪ್ರತಿಭಟನೆಗಳಿಗೂ ಮುನ್ನವೇ ಪ್ರಧಾನಿ ಮೋದಿ ಅವರು ಪಂಚಾಯಿತಿಯಿಂದ ಸಂಸತ್ತಿನವರೆಗೆ ವಿವಿಧ ಹಂತಗಳಲ್ಲಿ ಒಂದು ಲಕ್ಷ ಯುವ ನಾಯಕರನ್ನು ರಾಜಕೀಯಕ್ಕೆ ಕರೆತರುವ ಆಶಯ ವ್ಯಕ್ತಪಡಿಸಿದ್ದರು.
ಇದರಲ್ಲಿ ಪಕ್ಷದ ಯಾವುದೇ ಭೇದಭಾವ ಇರಬಾರದು ಎಂದು ಹೇಳಿದ್ದರು. ಕರ್ನಾಟಕದ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಯುವ ನಾಯಕರಿಗೆ ಟಿಕೆಟ್ ನೀಡಬೇಕು ಎಂದು ಸಿರೋಯಾ ಅಭಿಪ್ರಾಯಪಟ್ಟರು.
ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂಬ ಆರೋಪ ಹಾಗೂ ಮೊದಲ ಬಾರಿಗೆ ಶಾಸಕರಾಗಿರುವ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ವಿಜಯೇಂದ್ರ ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಟಿಬಿ ಮುಕ್ತ ಭಾರತ ಅಭಿಯಾನ
ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದ ಭಾಗವಾಗಿ ಲಹರ್ ಸಿಂಗ್ ಸಿರೋಯಾ ಅವರು 1,000 ಕ್ಷಯರೋಗ (ಟಿಬಿ) ರೋಗಿಗಳನ್ನು ದತ್ತು ಪಡೆದಿದ್ದಾರೆ. ಇದು ದೇಶದಲ್ಲೇ ಅತಿ ಹೆಚ್ಚು ಸಂಖ್ಯೆಯಾಗಿದೆ. ಈ ಯೋಜನೆಯಡಿ ರೋಗಿಗಳಿಗೆ ಆರರಿಂದ ಎಂಟು ತಿಂಗಳವರೆಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಗುತ್ತದೆ. ಪ್ರತಿ ಕಿಟ್‌ಗೆ ಅಂದಾಜು 1,000 ರೂಪಾಯಿ ವೆಚ್ಚವಾಗಲಿದೆ.
ಕೇಂದ್ರ ಸರ್ಕಾರದ ಈ ಅಭಿಯಾನದಡಿ ಚುನಾಯಿತ ಜನಪ್ರತಿನಿಧಿಗಳು ಟಿಬಿ ರೋಗಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಲಾಗಿತ್ತು. ಅದರಂತೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಒಟ್ಟು 1,000 ರೋಗಿಗಳನ್ನು ದತ್ತು ಪಡೆದಿದ್ದೇನೆ. ಅಲ್ಲದೆ, ರಾಜಕೀಯೇತರ ಸ್ನೇಹಿತರಿಗೂ ರೋಗಿಗಳನ್ನು ದತ್ತು ಪಡೆಯುವಂತೆ ಪ್ರೋತ್ಸಾಹಿಸಿದ್ದು, ಅವರ ಮೂಲಕ ಹೆಚ್ಚುವರಿಯಾಗಿ 1,500 ರೋಗಿಗಳನ್ನು ದತ್ತು ಪಡೆಯಲಾಗಿದೆ ಎಂದು ಸಿರೋಯಾ ತಿಳಿಸಿದರು.