ಬೆಂಗಳೂರು: ಪಶ್ಚಿಮ ಘಟ್ಟಗಳಾದ್ಯಂತ ಮಳೆಯ ಮಾದರಿಯಲ್ಲಿ ಉಂಟಾಗಿರುವ ಬದಲಾವಣೆಗಳಿಂದ ಕರ್ನಾಟಕದ ಒಳನಾಡು ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಕೃಷಿ ಮತ್ತು ತೋಟಗಾರಿಕೆಗೆ ಅನುಕೂಲವಾಗಿದೆ.
ಆದರೆ ಕರಾವಳಿ ಪ್ರದೇಶಗಳು ಹಾಗೂ ಪಶ್ಚಿಮ ಘಟ್ಟಗಳ ಪಶ್ಚಿಮ ಇಳಿಜಾರುಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ ಎಂದು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (UAE) ಅಧ್ಯಯನ ತಿಳಿಸಿದೆ.
ಕೃಷಿ ಹವಾಮಾನಶಾಸ್ತ್ರ ವಿಜ್ಞಾನಿ ಡಾ. ಎಂ.ಬಿ. ರಾಜೇಗೌಡ ಅವರು ಮಂಡಿಸಿದ ಈ ಅಧ್ಯಯನವು ರಾಜ್ಯದ ಹವಾಮಾನ ಮತ್ತು ಮಳೆಯ ಹಂಚಿಕೆಯಲ್ಲಿ ಆಗಿರುವ ಬದಲಾವಣೆಗಳು ಹಾಗೂ ಅವು ಕೃಷಿಯ ಮೇಲೆ ಬೀರಿರುವ ಪರಿಣಾಮಗಳನ್ನು ಪರಿಶೀಲಿಸಿದೆ.
1900ರಿಂದ 2020ರ ಅವಧಿಯಲ್ಲಿ ಕರ್ನಾಟಕದ ಸರಾಸರಿ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿದೆ ಎಂದು ಅಧ್ಯಯನ ತಿಳಿಸಿದೆ. ರಾಜ್ಯದ ಸರಾಸರಿ ವಾರ್ಷಿಕ ಮಳೆಯ ಪ್ರಮಾಣವೂ 1901–1950ರ ಅವಧಿಯಲ್ಲಿ 1,140 ಮಿ.ಮೀ. ಇದ್ದದ್ದು, 1950–2008ರ ಅವಧಿಯಲ್ಲಿ 1,208 ಮಿ.ಮೀ.ಗೆ ಏರಿಕೆಯಾಗಿದೆ.
ಆದರೆ, ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣದ ಬದಲಾವಣೆ ವಿಭಿನ್ನವಾಗಿದೆ. ಕರಾವಳಿ ಪ್ರದೇಶದಲ್ಲಿ ವಾರ್ಷಿಕ ಮಳೆಯ ಪ್ರಮಾಣ 4,500 ಮಿ.ಮೀ.ನಿಂದ 4,000 ಮಿ.ಮೀ.ಗೆ ಇಳಿಕೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ 4,010 ಮಿ.ಮೀ.ನಿಂದ 3,680 ಮಿ.ಮೀ.ಗೆ ಕಡಿಮೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಉತ್ತರ ಒಳನಾಡು ಕರ್ನಾಟಕದಲ್ಲಿ ಮಳೆಯ ಪ್ರಮಾಣ 640 ಮಿ.ಮೀ.ನಿಂದ 740 ಮಿ.ಮೀ.ಗೆ ಹಾಗೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿ 685 ಮಿ.ಮೀ.ನಿಂದ 836 ಮಿ.ಮೀ.ಗೆ ಹೆಚ್ಚಾಗಿದೆ.
ಮಳೆಯ ಹಂಚಿಕೆಯಲ್ಲಿನ ವ್ಯತ್ಯಾಸಕ್ಕೆ ಭೂಸ್ವರೂಪದ ಪ್ರಭಾವವೂ (ಓರೋಗ್ರಾಫಿಕ್ ಎಫೆಕ್ಟ್) ಒಂದು ಕಾರಣ ಎಂದು ತಿಳಿಸಿದೆ. ಹಿಂದೂ ಮಹಾಸಾಗರದ ಮೇಲೆ ರೂಪುಗೊಳ್ಳುವ ಮುಂಗಾರು ಮೋಡಗಳು ಅರಬ್ಬಿ ಸಮುದ್ರದ ಮೂಲಕ ಪಶ್ಚಿಮ ಕರಾವಳಿಯನ್ನು ಪ್ರವೇಶಿಸುತ್ತವೆ.
ಈ ಮೋಡಗಳ ಪೈಕಿ ಸುಮಾರು ಶೇ.75ರಷ್ಟು ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಪ್ರದೇಶದಲ್ಲೇ ಮಳೆ ಸುರಿಸಿದರೆ, ಉಳಿದ ಶೇ.25ರಷ್ಟು ಮೋಡಗಳು ಪರ್ವತ ಶ್ರೇಣಿಯನ್ನು ದಾಟಿ ಕರ್ನಾಟಕದ ಒಳನಾಡು ಪ್ರದೇಶಗಳತ್ತ ಸಾಗುತ್ತವೆ.
ಭೂಮಿ ಮತ್ತು ವಾತಾವರಣದ ತಾಪಮಾನ ಏರಿಕೆಯು ಮೋಡಗಳ ಸಾಂದ್ರತೆ ಹಾಗೂ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೋಡಗಳು ಪಶ್ಚಿಮ ಘಟ್ಟಗಳ ಪೂರ್ವ ಭಾಗದತ್ತ ಚಲಿಸಿ, ಒಳನಾಡು ಪ್ರದೇಶಗಳಲ್ಲಿ ಮಳೆ ಸುರಿಸಲು ಕಾರಣವಾಗುತ್ತವೆ ಎಂದು ಅಧ್ಯಯನ ತಿಳಿಸಿದೆ.
ಕೈಗಾರಿಕೀಕರಣ, ನಗರೀಕರಣ, ಕೃಷಿ ಚಟುವಟಿಕೆಗಳ ವಿಸ್ತರಣೆ, ರಸ್ತೆ ನಿರ್ಮಾಣ, ಸಣ್ಣ ಜಲವಿದ್ಯುತ್ ಯೋಜನೆಗಳು ಮತ್ತು ಪ್ರವಾಸೋದ್ಯಮ ಚಟುವಟಿಕೆಗಳು ಪಶ್ಚಿಮ ಘಟ್ಟಗಳ ಅರಣ್ಯ ಸಾಂದ್ರತೆಯ ಮೇಲೆ ಬೀರಿರುವ ಪರಿಣಾಮವನ್ನೂ ಅಧ್ಯಯನವು ಪ್ರಸ್ತಾಪಿಸಿದೆ.
ಕೇಂದ್ರ ಸರ್ಕಾರ ರಚಿಸಿದ್ದ ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ಸಮಿತಿಗಳು ಈ ಪ್ರದೇಶದ ಜೀವವೈವಿಧ್ಯ, ಪರಿಸರ ಸ್ಥಿತಿ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಪರಿಶೀಲಿಸಿದ್ದವು. ಆದರೆ, ಹವಾಮಾನ ಬದಲಾವಣೆ ಮತ್ತು ಅದು ಕರ್ನಾಟಕದ ಕೃಷಿಯ ಮೇಲೆ ಬೀರುವ ಪರಿಣಾಮಗಳ ಸಮಗ್ರ ಅಧ್ಯಯನ ಈ ಸಮಿತಿಗಳ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ ಎಂದು ತಿಳಿಸಿದೆ.
ಮಳೆ ಮಾದರಿಯಲ್ಲಿನ ಈ ಬದಲಾವಣೆ ಜತೆಗೆ ಕೃಷಿ ಭೂಮಿಯ ವಿಸ್ತರಣೆಯೂ ಹೆಚ್ಚಾಗಿದೆ. 1950ರ ದಶಕದಲ್ಲಿ ಸುಮಾರು 50–60 ಲಕ್ಷ ಹೆಕ್ಟೇರ್ಗಳಷ್ಟಿದ್ದ ಕೃಷಿ ಭೂಮಿ 2020ರ ವೇಳೆಗೆ 100–105 ಲಕ್ಷ ಹೆಕ್ಟೇರ್ಗೆ ಏರಿಕೆಯಾಗಿದೆ.
ಕೃಷಿ ಉತ್ಪಾದನೆಯು 4–5 ಕೋಟಿ ಟನ್ಗಳಿಂದ 13–13.5 ಕೋಟಿ ಟನ್ಗಳಿಗೆ ಹೆಚ್ಚಾಗಿದೆ. ತೋಟಗಾರಿಕೆ ಬೆಳೆಗಳ ಸಾಗುವಳಿ ಪ್ರದೇಶ 22–24 ಲಕ್ಷ ಹೆಕ್ಟೇರ್ಗೆ ವಿಸ್ತರಿಸಿದ್ದು, ಉತ್ಪಾದನೆ 18–18.5 ಕೋಟಿ ಟನ್ಗಳಿಗೆ ತಲುಪಿದೆ.
2020–2035ರ ಅವಧಿಯಲ್ಲಿ ಕರ್ನಾಟಕದ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ 1,235 ಮಿ.ಮೀ.ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ಅಂದಾಜಿಸಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಮಳೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದ್ದರೆ, ಒಳನಾಡು ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.
ವಿಶೇಷವಾಗಿ ಒಳನಾಡು ಪ್ರದೇಶಗಳಲ್ಲಿ ಬದಲಾಗುತ್ತಿರುವ ಮಳೆಯ ಲಭ್ಯತೆಯನ್ನು ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆಗೆ ಸಮರ್ಥವಾಗಿ ಬಳಸಿಕೊಳ್ಳಲು ದೀರ್ಘಕಾಲೀನ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಅಧ್ಯಯನ ಒತ್ತಿಹೇಳಿದೆ.