ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದೆ. ರೇಷನ್ ಕಾರ್ಡ್ ಮರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನವೆಂಬರ್ 10, 2026 ಅಂತಿಮ ದಿನವಾಗಿದ್ದು, ಈ ಗಡುವನ್ನು ಮತ್ತೊಮ್ಮೆ ವಿಸ್ತರಿಸುವುದಿಲ್ಲ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ, ರಾಜ್ಯದಲ್ಲಿ ಇನ್ನೂ ಬರೋಬ್ಬರಿ 41.33 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಇ-ಕೆವೈಸಿ ಮಾಡಿಸುವುದು ಬಾಕಿ ಉಳಿದಿದೆ. ಯಾಕಂದ್ರೆ, ನಿಗದಿತ ದಿನಾಂಕದೊಳಗೆ ಪ್ರಕ್ರಿಯೆ ಮುಗಿಸದಿದ್ದರೆ ಅಂತಹ ಸದಸ್ಯರ ಹೆಸರುಗಳು ರದ್ದಾಗುವ ಅಥವಾ ಪಡಿತರ ಅಮಾನತಿನಲ್ಲಿಡುವ ಸಾಧ್ಯತೆಯಿದೆ. ಆ ಕುರಿತ ವರದಿ ಇಲ್ಲಿದೆ:
ಗೃಹಲಕ್ಷ್ಮಿ ಹಣ ಕಟ್!
ನವೆಂಬರ್ 10 ರೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಮುಗಿಸದಿದ್ದರೆ, ಅಂತಹ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ತಗೆದುಹಾಕಲಾಗುತ್ತದೆ ಅಥವಾ ಅಮಾನತುಗೊಳಿಸಲಾಗುತ್ತದೆ. ಇದರ ನೇರ ಪರಿಣಾಮವಾಗಿ ಉಚಿತ ಅಕ್ಕಿ (ಪಡಿತರ) ನಿಲ್ಲುವುದಲ್ಲದೆ, ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆ ಹಣವೂ ಕಡಿತಗೊಳ್ಳಲಿದೆ. ಏತನ್ಮಧ್ಯೆ, ಈಗಾಗಲೇ ಹಲವು ಬಾರಿ ಇ-ಕೆವೈಸಿ ಅವಧಿಯನ್ನು ವಿಸ್ತರಿಸಲಾಗಿದ್ದು, ನಕಲಿ ಮತ್ತು ಅರ್ಹರಲ್ಲದ ಕಾರ್ಡ್‌ಗಳನ್ನು ಪತ್ತೆ ಹಚ್ಚಲು ಈ ಬಾರಿ ನವೆಂಬರ್ 10 ರ ಗಡುವೇ ಅಂತಿಮ ಎಂದು ಇಲಾಖೆಯ ಅಧಿಕಾರಿಗಳು ಕಡಾಖಂಡಿತವಾಗಿ ತಿಳಿಸಿದ್ದಾರೆ.
ಹಾಗಾದ್ರೆ ಇ-ಕೆವೈಸಿ ಮಾಡಿಸುವುದು ಹೇಗೆ?
ವಿಧಾನ 1: 'ಅನ್ನ ಸೇವೆ' ಮೊಬೈಲ್ ಆ್ಯಪ್ ಮೂಲಕ (ಮನೆಯಲ್ಲೇ ಕುಳಿತು ಮಾಡಬಹುದು)
ನಿಮ್ಮ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ, ನೀವೇ ಸ್ವತಃ ಮುಖದ ಗುರುತು ನೀಡುವ ಮೂಲಕ ಇದನ್ನು ಮಾಡಬಹುದು.
ಗೂಗಲ್ ಪ್ಲೇ ಸ್ಟೋರ್‌ನಿಂದ Anna Seve ಮೊಬೈಲ್ ಆ್ಯಪ್ ಮತ್ತು Aadhaar Face RD ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಆ್ಯಪ್‌ನಲ್ಲಿ 'Self Citizen' (ಸ್ವಯಂ ನಾಗರಿಕ) ಆಯ್ಕೆಯನ್ನು ಆರಿಸಿಕೊಳ್ಳಿ.
ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಅನ್ನು ನಮೂದಿಸಿ.
ನಂತರ, ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ವಿವರ ನೀಡಿ, ಮೊಬೈಲ್ ಕ್ಯಾಮೆರಾ ಮೂಲಕ ಮುಖದ ಚಹರೆಯನ್ನು ಸ್ಕ್ಯಾನ್ (Live Face Scan) ಮಾಡುವ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿ.
ವಿಧಾನ 2: ರೇಷನ್ ಅಂಗಡಿಯಲ್ಲಿ (ನ್ಯಾಯಬೆಲೆ ಅಂಗಡಿ)
ಆನ್‌ಲೈನ್‌ನಲ್ಲಿ ತಾಂತ್ರಿಕ ತೊಂದರೆ ಎದುರಾದರೆ ಅಥವಾ ಮೊಬೈಲ್ ಸಂಖ್ಯೆ ಲಿಂಕ್ ಇಲ್ಲದಿದ್ದರೆ ನೇರವಾಗಿ ರೇಷನ್ ಅಂಗಡಿಗೆ ಹೋಗಬಹುದು.
ನಿಮ್ಮ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಸ್ಥಳೀಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ.
ಅಲ್ಲಿನ ಇಲಾಖೆಯ ಅಧಿಕೃತ 'AHARA' ತಂತ್ರಾಂಶದ ಯಂತ್ರದಲ್ಲಿ ಬಯೋಮೆಟ್ರಿಕ್ (ಬೆರಳು ಗುರುತು ಅಥವಾ ಕಣ್ಣಿನ ಸ್ಕ್ಯಾನ್) ನೀಡುವ ಮೂಲಕ ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.