ಬೀದರ್: ಮಹಿಳೆಯೊಬ್ಬರು ತಾನು ಪ್ರೀತಿಸುತ್ತಿದ್ದ ಯುವಕನ ಮಾತು ನಂಬಿ, ತಾಳಿ ಕಟ್ಟಿದ್ದ ಗಂಡನಿಗೇ ವಿಚ್ಛೇದನ ನೀಡಿ ಬಂದಿದ್ದಾಳೆ. ಆದರೆ ಮಹಿಳೆ ಮನೆ ಬಿಟ್ಟು ಬಂದ ನಂತರ ಪ್ರಿಯಕರ ನಾಪತ್ತೆಯಾಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನೆಲವಾಡ ಗ್ರಾಮದಲ್ಲಿ ನಡೆದಿದೆ.
ಈಗ ಅತ್ತ ಗಂಡನೂ ಇಲ್ಲ, ಇತ್ತ ಪ್ರಿಯಕರನೂ ಇಲ್ಲದೆ ಮಹಿಳೆಯ ಬದುಕು ಬೀದಿಪಾಲಾಗಿದೆ. ತನಗೆ ವಂಚಿಸಿ ನಾಪತ್ತೆಯಾಗಿರುವ ಯುವಕನ ಮನೆ ಬಳಿ ಬ್ಯಾಗ್ ಸಮೇತ ಬಂದಿರುವ ಮಹಿಳೆ, ಕಳೆದ 10 ದಿನಗಳಿಂದ ಪ್ರಿಯತಮನ ಮನೆ ಮುಂದೆ ಧರಣಿ ನಡೆಸುತ್ತಿದ್ದಾಳೆ.
ಮನೆ ಬಿಟ್ಟು ಬಂದಿರುವ ಮಹಿಳೆ ಸಂಗೀತಾಗೆ ಈಗಾಗಲೇ ಮದುವೆಯಾಗಿದ್ದು, ಯುವಕ ದತ್ತು ಎಂಬಾತನೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ರಿಲೇಷನ್ಶಿಪ್ನಲ್ಲಿದ್ದರು.
ನಿನ್ನ ಗಂಡನಿಗೆ ವಿಚ್ಛೇದನ ನೀಡಿದರೆ ಮದುವೆಯಾಗುವುದಾಗಿ ಯುವಕ ತನಗೆ ಹೇಳಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಆತನ ಮಾತು ನಂಬಿ ಗಂಡನಿಗೆ ಸಂಗೀತಾ ಡಿವೋರ್ಸ್ ನೀಡಿದ್ದಾಳೆ. ಆದರೆ ಆ ಬಳಿಕ ಮದುವೆಗೆ ಯುವಕ ದತ್ತು ನಿರಾಕರಿಸಿದ್ದಾನೆ.
ಮಹಿಳೆ ತನ್ನ ಮನೆಗೆ ಬರುತ್ತಿದ್ದಂತೆ ದತ್ತು ಪರಾರಿಯಾಗಿದ್ದು, ಪತಿಗೆ ವಿಚ್ಛೇದನ ನೀಡಿ ಬಂದರೂ ಮನೆಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಈಗ ಅನ್ಯಾಯ ಮಾಡಿದ್ದಾನೆಂದು ಮಹಿಳೆ ಕಣ್ಣೀರು ಹಾಕಿದ್ದಾರೆ. ಇವರೂ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಹೀಗಾಗಿ ನನ್ನ ಜೀವಕ್ಕೆ ಏನಾದರೂ ಆದರೆ ಪ್ರಿಯತಮನ ಮನೆಯವರೇ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ.