ಬೆಳಗಾವಿ: ಕಬ್ಬಿಗೆ ಪ್ರತಿ ಟನ್‌ಗೆ 3,600 ರೂ. ದರ ನಿಗದಿಪಡಿಸಿದ ಬೆನ್ನಲ್ಲೇ, ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದು ರೈತ ಮುಖಂಡಾ ಚೂನಪ್ಪ ಪೂಜಾರಿ ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳು ನಾಳೆಯಿಂದ ಆರಂಭ ಆಗುತ್ತವೆ. ಎಂಎಸ್‌ಪಿ ಮತ್ತು ಎಸ್‌ಎಪಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಗಡುವು ನೀಡಿ, ಹೋರಾಟ ಮುಂದುವರೆಸುತ್ತೇವೆ. ಗುರ್ಲಾಪುರದಲ್ಲಿ ಕೂಡ ಹೋರಾಟ ಹಿಂಪಡೆದಿದ್ದೇವೆ. ರೈತರು ಯಾವುದೇ ರೀತಿ ಗೊಂದಲಕ್ಕೆ ಒಳಗಾಗಬಾರದು. ಕಬ್ಬು ನುರಿಸಲು ಕಾರ್ಖಾನೆಗಳಿಗೆ ಸಹಕರಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ ಕರೆ ನೀಡಿದ್ದಾರೆ.
ಬೆಳಗಾವಿ ನಗರದಲ್ಲಿ ಗುರುವಾರ ಸಂಜೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೆ ನ.20ರವರೆಗೆ ಗಡುವು ನೀಡಿದ್ದೇವೆ. ಅಷ್ಟರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ನ.26ರಂದು ಬೃಹತ್ ಹೋರಾಟ ನಡೆಸಲಾಗುವುದು. ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದೊಳಗೆ ಟನ್‌ಗೆ 1,000 ರೂ. ಎಸ್‌ಎಪಿ ಘೋಷಿಸಬೇಕು. ಇಲ್ಲವಾದರೆ ಮತ್ತೆ ದೊಡ್ಡ ಮಟ್ಟದ ಹೋರಾಟ ಮಾಡುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಖಾನೆಗಳು ಮೊದಲ ಕಂತಿನಲ್ಲಿ ಟನ್‌ಗೆ 3,600 ರೂ. ನೀಡಲು ಒಪ್ಪಿವೆ. ನೀರಿಲ್ಲದೇ, ಕಬ್ಬು ಒಣಗುತ್ತಿರುವುದರಿಂದ ರೈತರ ಸಂಕಷ್ಟ ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ಈ ದರಕ್ಕೆ ಒಪ್ಪಿಗೆ ನೀಡಲಾಗಿದೆ. ಆದರೆ, ಇದರಿಂದ ಹೋರಾಟ ಮುಗಿದಿಲ್ಲ. ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದೇವೆ. ರೈತರ ಪ್ರಮುಖ ಬೇಡಿಕೆಗಳು ಇನ್ನೂ ಬಾಕಿ ಇವೆ ಎಂದು ಚೂನಪ್ಪ ಪೂಜಾರಿ ಹೇಳಿದರು.