ಬ್ರಹ್ಮಾವರ (ಉಡುಪಿ): ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ ಶತಶತಮಾನಗಳ ಇತಿಹಾಸಪ್ರಸಿದ್ಧ ಬಾಳೆಕುದ್ರು ಮಠದ ಪುರಾತನ ವಿಗ್ರಹಗಳ ಕಳ್ಳತನ ಮತ್ತು ಮಾರಾಟದ ಹಗರಣ ಈಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ, ಮಠದ ಪೀಠಾಧಿಪತಿ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅವರು ಮಠಕ್ಕೆ ಬೀಗ ಜಡಿದು ತಲೆಮರೆಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ಬಾಳೆಕುದ್ರು ಮಠಕ್ಕೆ ವಿಜಯನಗರ ಅರಸರ ಕಾಲದ ಅಂದರೆ ಸುಮಾರು ಒಂದೂವರೆ ಸಾವಿರ ವರ್ಷಗಳಷ್ಟು ಸುದೀರ್ಘ ಇತಿಹಾಸವಿದೆ. ಈ ಮಠದಲ್ಲಿ ಶತ-ಶತಮಾನಗಳಿಂದಲೂ ನರಸಿಂಹದೇವರು, ವಿನಾಯಕ, ಶಕ್ತಿ ಗಣಪತಿ, ವಲ್ಲಭ ಗಣಪತಿ ಹಾಗೂ ಮಹಿಷಮರ್ದಿನಿ ಸೇರಿದಂತೆ ಅತ್ಯಂತ ಅಪರೂಪದ ಆರು ಪುರಾತನ ವಿಗ್ರಹಗಳನ್ನು ಅನಾದಿಕಾಲದಿಂದ ಪೂಜಿಸಿಕೊಂಡು ಬರಲಾಗುತ್ತಿತ್ತು. ಆದರೆ, ಇತ್ತೀಚೆಗೆ ಈ ಅಮೂಲ್ಯ ವಿಗ್ರಹಗಳು ಮಠದಿಂದ ನಾಪತ್ತೆಯಾಗಿದ್ದವು.
ಮುಂದುವರೆದು, ಮಠದ ಪುರಾತನ ವಿಗ್ರಹಗಳು ಕಾಣೆಯಾಗಿರುವ ಬಗ್ಗೆ ಭಕ್ತರು ಹಾಗೂ ಶಿಷ್ಯ ವರ್ಗದವರು ಸ್ವಾಮೀಜಿಯನ್ನು ಪ್ರಶ್ನಿಸಿದಾಗ, ಅವರು "ಹಳೆಯ ಮೂರ್ತಿಗಳನ್ನು ವಿಸರ್ಜನೆ ಮಾಡಿ, ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ" ಎಂದು ಹಾರಿಕೆ ಉತ್ತರ ನೀಡಿದ್ದರು. ಆದರೆ, ನಾಪತ್ತೆಯಾಗಿದ್ದ ಅದೇ ವಿಗ್ರಹಗಳ ಫೋಟೋಗಳನ್ನು ವೆಬ್‌ಸೈಟ್ ಒಂದರಲ್ಲಿ ಆನ್‌ಲೈನ್ ಮಾರಾಟಕ್ಕಿಟ್ಟಿರುವುದು ಕಂಡುಬಂದಾಗ ಭಕ್ತರ ಅನುಮಾನ ನಿಜವಾಯಿತು. ಸ್ವಾಮೀಜಿ ಹಾಗೂ ಮಠದ ಸಿಬ್ಬಂದಿಯೇ ಸೇರಿ ಈ ಅಪರೂಪದ ಮೂರ್ತಿಗಳನ್ನು ಬೆಂಗಳೂರಿನ ಕಂಪನಿಯೊಂದಕ್ಕೆ ರಹಸ್ಯವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂತು. ಈ ಹಿನ್ನೆಲೆಯಲ್ಲಿ ಮಠದ ಶಿಷ್ಯರಾದ ಜಗದೀಶ್ ಐತಾಳ್ ಎಂಬುವವರು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ, ಸ್ವಾಮೀಜಿ ಮಠಕ್ಕೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ. ಅವರು ಮಠದಿಂದ ಎಸ್ಕೇಪ್ ಆಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿವೆ.
ಯಾರ್ಯಾರ ವಿರುದ್ಧ ಕೇಸ್?
ಬೆಂಗಳೂರು ಪೊಲೀಸರು ಈ ಪ್ರಕರಣದಲ್ಲಿ, ಪರಾರಿಯಾಗಿರುವ ಮಠದ ಪೀಠಾಧಿಪತಿ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ, ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್, ಅಕೌಂಟೆಂಟ್ ಜಯಲಕ್ಷ್ಮಿ, ಪರಿಚಾರಕ ಶ್ರೇಯಸ್ ಹಾಗೂ ವಿಗ್ರಹಗಳನ್ನು ಖರೀದಿ ಮಾಡಿದ್ದ ಬೆಂಗಳೂರಿನ ಪ್ರಸಿದ್ಧ್ ಐಡಲ್ಸ್ ಸಂಸ್ಥೆಯ ಮಾಲೀಕನಾದ ನಾಗೇಂದ್ರ ಪ್ರಸಾದ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಏತನ್ಮಧ್ಯೆ, ಬೆಂಗಳೂರು ಪೊಲೀಸರು ಈಗಾಗಲೇ ಮೂರ್ತಿಗಳನ್ನು ಖರೀದಿಸಿದ್ದ ಕಂಪನಿಯ ಮಾಲೀಕ ನಾಗೇಂದ್ರ ಪ್ರಸಾದ್‌ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ, ತಲೆಮರೆಸಿಕೊಂಡಿರುವ ಬಾಳೆಕುದ್ರು ಶ್ರೀಗಳ ಪತ್ತೆಗಾಗಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ಮುಂದುವರಿಸಿದ್ದಾರೆ.