ಬೆಂಗಳೂರು: ಪತ್ನಿಯೊಂದಿಗಿನ ವೈಮನಸ್ಸಿನ ಹಿನ್ನೆಲೆಯಲ್ಲಿ 45 ವರ್ಷದ ಕ್ಯಾಬ್ ಚಾಲಕ ತನ್ನ ಪತ್ನಿಯ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿ ಶೇಖರ್ ಅಲಿಯಾಸ್ ಇಂದುಶೇಖರ್, ಬೆಂಗಳೂರಿನ ರಾಜಾಜಿನಗರದ ಬಸವಂ ವೃತ್ತದ ಸಮೀಪವಿರುವ ತನ್ನ ಮನೆಯಲ್ಲಿ ಎರಡು ದಿನಗಳ ಅವಧಿಯಲ್ಲಿ ಈ ಕೊಲೆಗಳನ್ನು ಎಸಗಿದ್ದಾನೆ ಎನ್ನಲಾಗಿದೆ. ಬಳಿಕ ಕೆಲವು ಮೃತದೇಹಗಳನ್ನು ಚಿಕ್ಕಬಳ್ಳಾಪುರದ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ ಎಂದು ತಿಳಿದುಬಂದಿದೆ.
ರಾಜಾಜಿನಗರ ಪೊಲೀಸರು ಶೇಖರ್‌ನನ್ನು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು ಆರೋಪಿಯ ಪತ್ನಿ ಸುನೀತಾ, ಅತ್ತೆ ರೂಪವತಿ, ಭಾವಮೈದುನರಾದ ಶಿವಕುಮಾರ್ ಮತ್ತು ಶಂಕರ್, ರೂಪವತಿ ಅವರ ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ ಶಿವಕುಮಾರ್ ಅವರ ಏಳು ವರ್ಷದ ಪುತ್ರ ಪುನೀತ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ಶೇಖರ್ 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ. ಆದರೆ, ಕಳೆದ ಕೆಲ ಸಮಯದಿಂದ ದಂಪತಿ ನಡುವೆ ವೈವಾಹಿಕ ಕಲಹ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸುನೀತಾ ಕುಟುಂಬದವರು ಹಲವು ಬಾರಿ ಮಧ್ಯ ಪ್ರವೇಶಿಸಿ ಆಕೆಯ ಬೆಂಬಲಕ್ಕೆ ನಿಂತಿದ್ದರು ಎನ್ನಲಾಗಿದೆ.
ತಮ್ಮ ವೈವಾಹಿಕ ಜೀವನದಲ್ಲಿ ಪತ್ನಿಯ ಕುಟುಂಬದವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಶಂಕಿಸಿದ್ದ ಶೇಖರ್, ಅವರನ್ನು ಹತ್ಯೆ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಸಂತ್ರಸ್ತರನ್ನು ಒಬ್ಬೊಬ್ಬರನ್ನಾಗಿ ತನ್ನ ಮನೆಗೆ ಆಹ್ವಾನಿಸಿ, ಒರಳುಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಮೊದಲು ಪತ್ನಿ ಸುನೀತಾಳನ್ನು ಹತ್ಯೆ ಮಾಡಿ, ಬಳಿಕ ಅತ್ತೆ ಹಾಗೂ ಕುಟುಂಬದ ಇತರ ಸದಸ್ಯರನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ತನ್ನ ಮನೆಯಲ್ಲಿ ಪಾರ್ಟಿ ಏರ್ಪಡಿಸಿ, ಬಳಿಕ ಅವರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ರೂಪವತಿ ಅವರ ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿಯನ್ನೂ ಆತ ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ನಳಿನಿ ನಾಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು.
ತನಿಖೆಯ ವೇಳೆ ಪೊಲೀಸರಿಗೆ ಶೇಖರ್ ಮೇಲೆ ಅನುಮಾನ ಮೂಡಿದ್ದು, ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆದಿದ್ದರು. ಬಳಿಕ ಸರಣಿ ಕೊಲೆಗಳಲ್ಲಿ ಆತನ ಪಾತ್ರ ಇರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಏಳು ವರ್ಷದ ಪುನೀತ್‌ನ ಮೃತದೇಹ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸಮೀಪ ಪತ್ತೆಯಾಗಿದೆ. ಉಳಿದ ಮೃತದೇಹಗಳನ್ನು ಆರೋಪಿ ಎಲ್ಲಿ ಎಸೆದಿದ್ದಾನೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.