ಬೆಂಗಳೂರು: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು ಹೊಸ ವರ್ಷದ ಭರ್ಜರಿ ಕೊಡುಗೆ ನೀಡಿದ್ದು, 2027ರ ಜನವರಿ 1 ರಿಂದ ಜಾರಿಗೆ ಬರುವಂತೆ ದೇಶದ 47 ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳ ಟಿಕೆಟ್ ದರವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಅದರಲ್ಲೂ, ನಿಗದಿಪಡಿಸಿದ ಮಾರ್ಗಗಳಲ್ಲಿ ಕನಿಷ್ಠ ವೇಗವನ್ನು ಕಾಯ್ದುಕೊಳ್ಳಲು ವಿಫಲವಾದ ಕಾರಣಕ್ಕಾಗಿ ಈ ರೈಲುಗಳ 'ಸೂಪರ್ಫಾಸ್ಟ್' ಸ್ಥಾನಮಾನವನ್ನು ರದ್ದುಗೊಳಿಸಿ, ಸಾಮಾನ್ಯ ಎಕ್ಸ್ಪ್ರೆಸ್ ರೈಲುಗಳಾಗಿ ಪರಿವರ್ತಿಸುತ್ತಿರುವುದರಿಂದ ಟಿಕೆಟ್ ದರ ಇಳಿಕೆಯಾಗಲಿದೆ. ಈ ಪಟ್ಟಿಯಲ್ಲಿ ವಿಶ್ವಮಾನವ ಎಕ್ಸ್ಪ್ರೆಸ್ ಸೂಪರ್ಫಾಸ್ಟ್ ಟ್ಯಾಗ್ ರದ್ದು ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಟಿಕೆಟ್ ದರ ಇಳಿಕೆಗೆ ಕಾರಣವೇನು?
ರೈಲ್ವೆ ನಿಯಮಗಳ ಪ್ರಕಾರ, ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳು ಎರಡೂ ದಿಕ್ಕುಗಳಲ್ಲಿ ಕನಿಷ್ಠ ಗಂಟೆಗೆ 55 ಕಿಲೋಮೀಟರ್ ವೇಗದಲ್ಲಿ ಚಲಿಸಬೇಕಾಗುತ್ತದೆ. ಇತ್ತೀಚೆಗೆ ನಡೆಸಿದ ತಪಾಸಣೆಯಲ್ಲಿ ದೇಶದ ಒಟ್ಟು 47 ಸೂಪರ್ಫಾಸ್ಟ್ ರೈಲುಗಳು ಈ ನಿಗದಿತ ವೇಗವನ್ನು ತಲುಪಲು ವಿಫಲವಾಗಿರುವುದು ಕಂಡುಬಂದಿದೆ. ಈ ಕಾರಣದಿಂದಾಗಿ, ಜನವರಿ 1 ರಿಂದ ಈ ರೈಲುಗಳಿಗೆ ನೀಡಲಾಗಿದ್ದ ಸೂಪರ್ಫಾಸ್ಟ್ ಸ್ಥಾನಮಾನವನ್ನು ರದ್ದುಗೊಳಿಸಿ, ಸಾಮಾನ್ಯ ಎಕ್ಸ್ಪ್ರೆಸ್ ರೈಲುಗಳಾಗಿ ಮರುವರ್ಗೀಕರಿಸಲಾಗುತ್ತಿದೆ. ಅದರಲ್ಲೂ, ಸೂಪರ್ಫಾಸ್ಟ್ ಟ್ಯಾಗ್ ಕಳೆದುಕೊಳ್ಳುವುದರಿಂದ, ಈ ರೈಲುಗಳ ಟಿಕೆಟ್ ಮೇಲೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಸೂಪರ್ಫಾಸ್ಟ್ ಸರ್ಚಾರ್ಜ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ. ಇದರ ನೇರ ಲಾಭ ಪ್ರಯಾಣಿಕರ ಜೇಬಿಗೆ ತಲುಪಲಿದೆ.
ಯಾವೆಲ್ಲಾ ರೈಲುಗಳು ಈ ಪಟ್ಟಿಯಲ್ಲಿವೆ?
ದೇಶದ ವಿವಿಧ ರೈಲ್ವೆ ವಲಯಗಳ ಒಟ್ಟು 47 ರೈಲುಗಳು (ಸುಮಾರು 23 ಕ್ಕೂ ಹೆಚ್ಚು ಜೋಡಿ ರೈಲುಗಳು) ಈ ವ್ಯಾಪ್ತಿಗೆ ಬರಲಿದ್ದು, ಪ್ರಮುಖವಾಗಿ ಈ ಕೆಳಗಿನ ರೈಲುಗಳು ಸೇರಿವೆ:
ಸೆಂಟ್ರಲ್ ರೈಲ್ವೆ: CSMT-ಪುಣೆ ಪ್ರಗತಿ ಎಕ್ಸ್ಪ್ರೆಸ್, LTT-ಅಯೋಧ್ಯಾ ಕಂಟೋನ್ಮೆಂಟ್ ತುಳಸಿ ಎಕ್ಸ್ಪ್ರೆಸ್ ಸೇರಿದಂತೆ 18 ಸರ್ವೀಸ್ಗಳು.
ಈಸ್ಟ್ ಸೆಂಟ್ರಲ್ ರೈಲ್ವೆ: ಸಪ್ತ್ ಕ್ರಾಂತಿ ಎಕ್ಸ್ಪ್ರೆಸ್ ಮತ್ತು ಶ್ರಮಜೀವಿ ಎಕ್ಸ್ಪ್ರೆಸ್ ಒಳಗೊಂಡಂತೆ 20 ಸೇವೆಗಳು.
ಉತ್ತರ ರೈಲ್ವೆ: ತಾನಕ್ಪುರ-ದೆಹಲಿ, ಡೆಹ್ರಾಡೂನ್-ಕಾಠ್ಗೋಡಮ್ ಸೇರಿದಂತೆ 8 ಮಾರ್ಗಗಳು ಹಾಗೂ ಪೂರ್ಣಗಿರಿ ಜನ್ ಶತಾಬ್ದಿ ಮತ್ತು ಗೋವಾ ಎಕ್ಸ್ಪ್ರೆಸ್ ರೈಲುಗಳು ಈ ಪಟ್ಟಿಯಲ್ಲಿವೆ.
ಕರ್ನಾಟಕ ಪ್ರಯಾಣಿಕರಿಗೆ ಗಮನ:
ಮೈಸೂರು - ಕೆಎಸ್ಆರ್ ಬೆಂಗಳೂರು - ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ಸೇರಿದಂತೆ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಕೆಲವು ಪ್ರಮುಖ ರೈಲುಗಳೂ ಸಹ ಈ ಹೊಸ ಬದಲಾವಣೆಯ ಪಟ್ಟಿಗೆ ಒಳಪಡಲಿವೆ.
ಹೊಸ ರೈಲು ಸಂಖ್ಯೆಗಳು (Effective Jan 1, 2027):
ರೈಲು ಸಂಖ್ಯೆ 20676 (ಮೈಸೂರು - ಬೆಂಗಳೂರು - ಬೆಳಗಾವಿ) ಇನ್ನು ಮುಂದೆ 16275 ಆಗಿ ಬದಲಾಗಲಿದೆ.
ರೈಲು ಸಂಖ್ಯೆ 20675 (ಬೆಳಗಾವಿ - ಬೆಂಗಳೂರು - ಮೈಸೂರು) ಇನ್ನು ಮುಂದೆ 16276 ಆಗಿ ಬದಲಾಗಲಿದೆ.
ವಿಶ್ವಮಾನವ ರೈಲು ಮಾತ್ರವಲ್ಲದೆ, ಕರ್ನಾಟಕದ ಮೂಲಕ ಸಂಚರಿಸುವ ಇನ್ನೂ 8 ಜೋಡಿ (ಒಟ್ಟು 16) ರೈಲುಗಳ ಸಂಖ್ಯೆಯನ್ನು ತಾಂತ್ರಿಕ ಕಾರಣಗಳಿಗಾಗಿ ಬದಲಾಯಿಸಲಾಗುತ್ತಿದೆ. ಆದರೆ ಇವುಗಳ ಸೂಪರ್ಫಾಸ್ಟ್ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗಾಗಿ, ಅವುಗಳ ದರವು ಹಾಗೆ ಇರಲಿದೆ. ಅವು,
ಮಾಲ್ಗುಡಿ ಡೈಲಿ ಎಕ್ಸ್ಪ್ರೆಸ್ (ಅಶೋಕಪುರಂ/ಮೈಸೂರು - ಕೆಎಸ್ಆರ್ ಬೆಂಗಳೂರು):
ರೈಲು ಸಂಖ್ಯೆ 20623 ಇನ್ನು ಮುಂದೆ 16123 ಆಗಿ ಬದಲಾಗಲಿದೆ.
ರೈಲು ಸಂಖ್ಯೆ 20624 ಇನ್ನು ಮುಂದೆ 16124 ಆಗಿ ಬದಲಾಗಲಿದೆ.
ತಿರುಪತಿ - ಎಸ್ಎಂವಿಟಿ ಬೆಂಗಳೂರು ಟ್ರೈ-ವೀಕ್ಲಿ ಎಕ್ಸ್ಪ್ರೆಸ್:
ರೈಲು ಸಂಖ್ಯೆ 22617 ಇನ್ನು ಮುಂದೆ 16627 ಆಗಿ ಬದಲಾಗಲಿದೆ.
ಲೋಕಮಾನ್ಯ ತಿಲಕ್ ಟರ್ಮಿನಸ್ (LTT) - ತಿರುವನಂತಪುರಂ ಗರಿಬ್ ರಥ್ ಎಕ್ಸ್ಪ್ರೆಸ್: (ಇದು ಕಾರವಾರ, ಉಡುಪಿ ಮತ್ತು ಮಂಗಳೂರು ಜಂಕ್ಷನ್ ಮೂಲಕ ಹಾದುಹೋಗುತ್ತದೆ).
ರೈಲು ಸಂಖ್ಯೆ 12201 ಇನ್ನು ಮುಂದೆ 16371 ಆಗಿ ಬದಲಾಗಲಿದೆ.
ರೈಲು ಸಂಖ್ಯೆ 12202 ಇನ್ನು ಮುಂದೆ 16372 ಆಗಿ ಬದಲಾಗಲಿದೆ.
ಯಶವಂತಪುರ - ತಿರುವನಂತಪುರಂ ಸೆಂಟ್ರಲ್ ಎಕ್ಸ್ಪ್ರೆಸ್:
ರೈಲು ಸಂಖ್ಯೆ 12257 ಇನ್ನು ಮುಂದೆ 16537 ಆಗಿ ಬದಲಾಗಲಿದೆ.
ರೈಲು ಸಂಖ್ಯೆ 12258 ಇನ್ನು ಮುಂದೆ 16538 ಆಗಿ ಬದಲಾಗಲಿದೆ.
ಹಾಗಾದ್ರೆ, ಪ್ರಯಾಣಿಕರು ಏನು ಮಾಡಬೇಕು?
ನೀವು ಜನವರಿ 1, 2027 ಅಥವಾ ಆ ನಂತರದ ದಿನಾಂಕಗಳಿಗೆ ಈ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸಲು ಬಯಸಿದರೆ, ಐಆರ್ಸಿಟಿಸಿ ವೆಬ್ಸೈಟ್ ಅಥವಾ ಕೌಂಟರ್ನಲ್ಲಿ ಹಳೆಯ ಸಂಖ್ಯೆಯ ಬದಲಾಗಿ ಹೊಸದಾಗಿ ಪರಿಷ್ಕರಿಸಲಾದ ರೈಲು ಸಂಖ್ಯೆಗಳನ್ನು ನಮೂದಿಸಬೇಕಾಗುತ್ತದೆ. ಏತನ್ಮಧ್ಯೆ, ಸಂಖ್ಯೆಗಳು ಬದಲಾದರೂ ರೈಲುಗಳು ನಿಲ್ದಾಣಗಳಿಗೆ ಬರುವ ಮತ್ತು ಹೊರಡುವ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.