ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ಉಚ್ಛಾಟಿತರಾಗಿರುವ ಕೃಪಾ ಆಳ್ವಾ ಸೋಮವಾರ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಸೈಬರ್ ಕ್ರೈಂ ಪೊಲೀಸರು ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ವಿಚಾರಣೆಗೆ ಹಾಜರಾಗಲು ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್ ನೀಡಿತ್ತು. ಮೊಬೈಲ್, ಲ್ಯಾಪ್‌ಟಾಪ್ ಸಮೇತ ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ಪ್ರಕರಣ ಸಂಬಂಧ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದ ಬಳಿಕ ಇದೇ ಮೊದಲ ಬಾರಿಗೆ ಕೃಪಾ ಆಳ್ವಾ ವಿಚಾರಣೆಗೆ ಹಾಜರಾದರು. 2 ಗಂಟೆ ವಿಚಾರಣೆ ಬಳಿಕ ಮತ್ತೆ ನವೆಂಬರ್ 11 ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಪಾ ಆಳ್ವಾ ಪರ ವಕೀಲೆ ನಿಖಿತಾ, ಕೃಪಾ ಆಳ್ವಾ ಈಗಾಗಲೇ ಹೇಳಿಕೆ ದಾಖಲಿಸಿದ್ದಾರೆ.
ಮತ್ತೊಮ್ಮೆ ಬರೋದಕ್ಕೆ ಹೇಳಿದ್ದರಿಂದ ಈಗ ಬಂದಿದ್ದಾರೆ. ಈಗಾಗಲೇ ಡಿಸಿಪಿ ಎದುರು ಎರಡು ಸಾರಿ ಹೇಳಿಕೆ ಕೊಟ್ಟಿದ್ದರು. ಅಧಿಕೃತವಾಗಿ ಇಂದು ಹೇಳಿಕೆ ನೀಡಲು ನೋಟಿಸ್ ನೀಡಲಾಗಿತ್ತು. ಹೀಗಾಗಿ, ಸಿಸಿಬಿ ಸೈಬರ್ ತನಿಖಾಧಿಕಾರಿ ಮುಂದೆ ಹೇಳಿಕೆ ಕೊಡಲು ಬಂದಿದ್ದಾರೆ ಎಂದು ಹೇಳಿದರು.
ಮಗಳ ಜೊತೆಗೆ ವಿದೇಶಕ್ಕೆ ಹೋಗಿದ್ದರು ಅಷ್ಟೆ. ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ಕೇಸ್ ಆದ ಮೇಲೆ ಅವರು ವಿದೇಶಕ್ಕೇನು ಹೋಗಿರಲಿಲ್ಲ. ಕೇವಲ ವಿಚಾರಣೆಗೆ ಕರೆದಿದ್ದಾರೆ. ಅದಕ್ಕೆ ಬಂದಿದ್ದಾರೆ. ನಿರೀಕ್ಷಣಾ ಜಾಮೀನು ಸಿಕ್ಕ ಬಳಿಕ ಕೃಪಾ ಆಳ್ವಾ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣವಾಗಿ ಮಾತಾಡಲಿದ್ದಾರೆ ಎಂದು ತಿಳಿಸಿದರು.