ರಾಯಚೂರು: ಮನೆಕೆಲಸ ಪೂರ್ಣಗೊಳಿಸದ ಹಾಗೂ ಸರಿಯಾಗಿ ಓದದ ಕಾರಣಕ್ಕೆ ಮದರಸಾ ವಸತಿ ಶಾಲೆಯ ಶಿಕ್ಷಕರೊಬ್ಬರು ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಬಾಲಕನ ಕಣ್ಣಿನ ಸುತ್ತ ಗಾಯಗಳಾಗಿದ್ದು, ದೇಹದಾದ್ಯಂತ ಹಲವು ಕಡೆಗಳಲ್ಲಿ ಏಟು ಬಿದ್ದ ಗುರುತುಗಳಾಗಿವೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಗ್ರಾಮದ ಮದರಸಾ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶದಿಂದ ಹಟ್ಟಿ ಪಟ್ಟಣದ ನಿವಾಸಿಗಳಾದ ಬಾಲಕನ ಪೋಷಕರು ಆತನನ್ನು ಈ ಶಿಕ್ಷಣ ಸಂಸ್ಥೆಗೆ ದಾಖಲಿಸಿದ್ದರು.
ಬಾಲಕನ ಪೋಷಕರ ಆರೋಪದ ಪ್ರಕಾರ, ಅಬ್ಬಾಸ್ ಎಂಬ ಶಿಕ್ಷಕ ಬಾಲಕನ ಬಾಯಿಗೆ ಬಟ್ಟೆ ತುರುಕಿ, ಕೈಕಾಲುಗಳನ್ನು ಕಟ್ಟಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಬಾಲಕನ ಮುಖ ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿದ್ದು, ಕಣ್ಣಿನ ಸುತ್ತ ರಕ್ತ ಹೆಪ್ಪುಗಟ್ಟಿದೆ ಎನ್ನಲಾಗಿದೆ.
ಘಟನೆ ಕುರಿತು ಕುಟುಂಬದವರಿಗೆ ತಿಳಿಸದಂತೆ ಇತರ ಶಿಕ್ಷಕರು ಕೂಡ ಬಾಲಕನಿಗೆ ಬೆದರಿಕೆ ಹಾಕಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
ಪೋಷಕರು ತಮ್ಮ ಮಗನನ್ನು ನೋಡಲು ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಪೋಷಕರನ್ನು ಕಂಡ ಬಾಲಕ ಕಣ್ಣೀರಿಡುತ್ತಾ ಅವರ ಬಳಿಗೆ ಓಡಿ ಬಂದು ತಬ್ಬಿಕೊಂಡಿದ್ದಾನೆ. ಮಗನ ಮೈಮೇಲಿನ ಗಾಯಗಳನ್ನು ಕಂಡು ಪೋಷಕರು ಆಘಾತಕ್ಕೊಳಗಾಗಿದ್ದಾರೆ.
ಈ ಸಂಬಂಧ ಪೋಷಕರು ನೀಡಿದ ದೂರಿನ ಮೇರೆಗೆ ಮುಖ್ಯಶಿಕ್ಷಕ ಅಬ್ಬಾಸ್ ಸೇರಿದಂತೆ ಆರು ಮಂದಿ ಶಿಕ್ಷಕರ ವಿರುದ್ಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದೇ ವೇಳೆ, ಬಾಲಕನ ತಂದೆ ಅಬ್ದುಲ್ ನಯೀಮ್ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಮದರಸಾ ಆಡಳಿತ ಮಂಡಳಿಯ ಕಡೆಯಿಂದ ಪ್ರತಿ ದೂರು ಕೂಡ ದಾಖಲಾಗಿದೆ.
ಪೋಷಕರ ದೂರನ್ನು ಪೊಲೀಸರು ಆರಂಭದಲ್ಲಿ ಸರಿಯಾಗಿ ಸ್ವೀಕರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕವಿತಾಳ ಪೊಲೀಸ್ ಠಾಣೆ ಎದುರು ರಾತ್ರಿಯಿಡೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮದರಸಾ ಪರವಾಗಿರುವವರ ಒತ್ತಡಕ್ಕೆ ಮಣಿದು ಪೋಷಕರ ವಿರುದ್ಧ ಪ್ರತಿ ದೂರು ದಾಖಲಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ, ಘಟನೆಯ ಗಂಭೀರತೆಯನ್ನು ಪರಿಗಣಿಸಿ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಕವಿತಾಳ ಪೊಲೀಸ್ ಠಾಣೆಯ ಪ್ರಭಾರ ಪಿಎಸ್ಐ ಆಗಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಮಸ್ಕಿ ಪೊಲೀಸ್ ಠಾಣೆಯ ಪಿಎಸ್ಐ ರಂಗಪ್ಪ ಅವರನ್ನು ಕವಿತಾಳ ಠಾಣೆಯ ಪ್ರಭಾರ ಪಿಎಸ್ಐ ಆಗಿ ನೇಮಕ ಮಾಡಲಾಗಿದೆ.
ಈ ಘಟನೆಯು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಕ್ಕೆ ಕಾರಣವಾಗಿದ್ದು, ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.