ಕೃಷ್ಣ ಬೈರೇಗೌಡ  
ರಾಜ್ಯ

'ನ್ಯಾಯಯುತ ಪಾಲು ಕೇಳಿದ್ದಕ್ಕೆ ಸಿಕ್ಕ ಬಹುಮಾನವೇ ನನ್ನ ಭಾಷಣಕ್ಕೆ ಕತ್ತರಿ ': ಕೃಷ್ಣ ಬೈರೇಗೌಡ ಅಸಮಾಧಾನ

ಮೆಟ್ರೋ ಹಂತಗಳು 1, 2, 2A, 2B ಮತ್ತು ಹಂತ 3ರ ಅಂದಾಜು ವೆಚ್ಚವನ್ನು ಒಳಗೊಂಡ ಒಟ್ಟು ವೆಚ್ಚದ ಸುಮಾರು ಶೇ 84 ರಷ್ಟು ಭಾಗವನ್ನು ಕರ್ನಾಟಕವೇ ಭರಿಸುತ್ತಿದೆ, ಆದರೆ ಕೇಂದ್ರದ ಕೊಡುಗೆ ಸುಮಾರು ಶೇ 16 ರಷ್ಟಿದೆ ಎಂದು ಹೇಳಿದ್ದರು.

ಬೆಂಗಳೂರು: ನಗರದ ಮೆಟ್ರೋ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ ಕರ್ನಾಟಕಕ್ಕೆ ಸಿಗಬೇಕಾದ 'ನ್ಯಾಯಯುತ ಪಾಲು' ನೀಡುವಂತೆ ಸಾರ್ವಜನಿಕವಾಗಿ ಆಗ್ರಹಿಸಿದ ಮರುದಿನವೇ, ಬೆಂಗಳೂರು ಮೆಟ್ರೋದ 'ಪಿಂಕ್ ಲೈನ್' ಉದ್ಘಾಟನಾ ಕಾರ್ಯಕ್ರಮದಿಂದ ತಮ್ಮ ಭಾಷಣವನ್ನು ಕೈಬಿಡಲಾಗಿದೆ ಎಂದು ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಗುರುವಾರ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ, ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ 7.5 ಕಿಮೀ ಉದ್ದದ ಎಲಿವೇಟೆಡ್ ಮಾರ್ಗವನ್ನು (elevated section) ಉದ್ಘಾಟಿಸಲಿದ್ದಾರೆ. ಈ ಮಾರ್ಗವನ್ನು ಸುಮಾರು ₹3,470 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

'ಎಕ್ಸ್'ನಲ್ಲಿನ ಪೋಸ್ಟ್ ಒಂದರಲ್ಲಿ, 'ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ- ನನ್ನ ಭಾಷಣ ಕಟ್!. ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ಇಲ್ಲ' ಎಂದು ದೂರಿದ್ದಾರೆ.

'ಸಭಾ ಕಾರ್ಯಕ್ರಮದ ಡ್ರಾಫ್ಟ್‌ನಲ್ಲಿ ನನ್ನ ಮಾತಿಗೆ ಅವಕಾಶ ನಿಗದಿಯಾಗಿತ್ತು. ನಿನ್ನೆ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತನ್ನು ಕಟ್ ಮಾಡಲಾಗಿದೆ' ಎಂದಿದ್ದಾರೆ.

'ಬಹುತೇಕ ಬಂಡವಾಳ ಮತ್ತು ಖರ್ಚು ನಮ್ಮದು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆಯಾಗುತ್ತದೆ. ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡುವುದನ್ನು ನಿಲ್ಲಿಸಲು ಆಗುವುದಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ' ಎಂದು ಅವರು ತಿಳಿಸಿದ್ದಾರೆ.

ಮೆಟ್ರೋ ಹಂತಗಳು 1, 2, 2A, 2B ಮತ್ತು ಹಂತ 3ರ ಅಂದಾಜು ವೆಚ್ಚವನ್ನು ಒಳಗೊಂಡ ಒಟ್ಟು ವೆಚ್ಚದ ಸುಮಾರು ಶೇ 84 ರಷ್ಟು ಭಾಗವನ್ನು ಕರ್ನಾಟಕವೇ ಭರಿಸುತ್ತಿದೆ, ಆದರೆ ಕೇಂದ್ರದ ಕೊಡುಗೆ ಸುಮಾರು ಶೇ 16 ರಷ್ಟಿದೆ ಎಂದು ಕೃಷ್ಣ ಬೈರೇಗೌಡ ಬುಧವಾರ ಹೇಳಿದ್ದರು.

ಕೇಂದ್ರದಿಂದ ನೀಡುವ ಅನುದಾನವನ್ನು ಹೆಚ್ಚಿಸುವಂತೆಯೂ ಹಾಗೂ ಯೋಜನೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆಯೂ ಅವರು ಪ್ರಧಾನಿಯನ್ನು ಕೋರಿದ್ದರು.

ಯೋಜನೆಯ ಒಟ್ಟು ವೆಚ್ಚವು ‌₹77,891 ಕೋಟಿಗಳಷ್ಟಿದೆ. ಇದರಲ್ಲಿ ಕರ್ನಾಟಕದ ಪಾಲು ₹65,291 ಕೋಟಿ (ಸುಮಾರು ಶೇ 84ರಷ್ಟು) ಆಗಿದ್ದರೆ, ಕೇಂದ್ರದ ಪಾಲು ₹12,600 ಕೋಟಿ (ಸುಮಾರು ಶೇ 16ರಷ್ಟು) ಆಗಿದೆ. ಕೇಂದ್ರ ಸರ್ಕಾರ ನೀಡುವ ಪ್ರತಿ ರೂಪಾಯಿಗೆ ರಾಜ್ಯ ಸರ್ಕಾರ ವಾಸ್ತವವಾಗಿ ಸುಮಾರು ಐದು ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮೆಟ್ರೋ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಉಲ್ಲೇಖಿಸಲಾಗುವ '50:50'ರ ಆರ್ಥಿಕ ಹಂಚಿಕೆ ವ್ಯವಸ್ಥೆಗೂ, ಕರ್ನಾಟಕದ ಮೇಲಿರುವ ನೈಜ ಆರ್ಥಿಕ ಹೊರೆಗೂ ಬಹಳ ವ್ಯತ್ಯಾಸವಿದೆ. ಮೆಟ್ರೋ ಯೋಜನೆಗಳ ಆರಂಭಿಕ ಹಂತದಲ್ಲಿ ಕೇಂದ್ರದ ಪಾಲು ಗಣನೀಯವಾಗಿ ಹೆಚ್ಚಿತ್ತು. ಆದರೆ, ನಂತರದ ಹಂತಗಳಲ್ಲಿ ಅದು ಕಡಿಮೆಯಾಗುತ್ತಾ ಬಂದಿದೆ. ಒಟ್ಟಾರೆ ಲೆಕ್ಕಾಚಾರದಲ್ಲಿ ಕೇಂದ್ರದ ಪಾಲು ಸುಮಾರು ಶೇ 16ರಷ್ಟಿದೆ ಎಂದು ಅವರು ತಿಳಿಸಿದರು.

ಜಿಎಸ್‌ಟಿ ಮತ್ತು ಆದಾಯ ತೆರಿಗೆಗೆ ದೇಶದ ಅತಿದೊಡ್ಡ ಕೊಡುಗೆದಾರರಲ್ಲಿ ಒಂದಾಗಿರುವ ಹಾಗೂ ತನ್ನ ತಂತ್ರಜ್ಞಾನ ಮತ್ತು ಸೇವಾ ವಲಯಗಳ ಮೂಲಕ ವಿದೇಶಿ ವಿನಿಮಯ ಗಳಿಕೆಗೆ ಪ್ರಮುಖ ಮೂಲವಾಗಿರುವ ಬೆಂಗಳೂರು, ತನ್ನ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಹೂಡಿಕೆಯಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಅರ್ಹವಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಹಿಳಾ ಮೀಸಲಾತಿ ಮಸೂದೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಚಿಂತನೆ,15-18 ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ!

'ಜೈಲಿನಲ್ಲಿದ್ದ ಚಾರ್ಲ್ಸ್ ಶೋಭರಾಜ್ ಗರ್ಲ್​ಫ್ರೆಂಡ್ ಗೂ ಸೋನಿಯಾ ಗಾಂಧಿ ಮನೆಯೂಟ ತಂದಾಗ...': ಆತ್ಮಕಥೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ಮೋದಿ ಸರ್ಕಾರ ಸುಗಮವಾಗಿ ನಡೆಯಲು ನಮ್ಮದೇ ನೆರವು; ಆದರೆ ಕೇಂದ್ರದಿಂದ ನಮಗೇ ವಂಚನೆ- ಪ್ರಿಯಾಂಕ್ ಖರ್ಗೆ

ಬೆನ್ನು ನೋವು ಹೇಗಿದೆ? ಇನ್ನು ಎಷ್ಟು ದಿನ ಇರಬೇಕು? ನರಕ ಆಗ್ತಿದೆ...: ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡ ಸುಬ್ಬಾ – ಸುಬ್ಬಿ!

ಚುನಾವಣೆ ಮಾದರಿಯಲ್ಲಿ kpsc ಪರೀಕ್ಷೆ: ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ