ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟ ಕಡಿಮೆ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ಮೈಸೂರಿನ ಶಿಕ್ಷಕರೊಬ್ಬರು ತಮ್ಮ ಕೆಲಸದ ಮೂಲಕ ಉತ್ತರ ನೀಡಿದ್ದಾರೆ.
ಮೈಸೂರಿನ ಹಿಂಕಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಕೆ.ಎಸ್. ಮಧುಸೂದನ್, ಮಕ್ಕಳಿಗೆ ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ), ಡ್ರೋನ್ ತಂತ್ರಜ್ಞಾನ ಹಾಗೂ ವರ್ಚುವಲ್ ರಿಯಾಲಿಟಿ (ವಿಆರ್) ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳ ಪರಿಚಯ ಮಾಡಿಸುತ್ತಿದ್ದಾರೆ.
ಸರ್ಕಾರಿ ಶಾಲೆಯ ಮಕ್ಕಳಿಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಂತೆ ಗುಣಮಟ್ಟದ ಶಿಕ್ಷಣ ಮತ್ತು ತಂತ್ರಜ್ಞಾನ ಕಲಿಕೆಯ ಅವಕಾಶ ಸಿಗಬೇಕು ಎಂಬುದು ಅವರ ಆಶಯ. ಈ ಉದ್ದೇಶದಿಂದ 2022ರಲ್ಲಿ ಅವರು ವಿಶೇಷ ಕಲಿಕಾ ಯೋಜನೆಯನ್ನು ಆರಂಭಿಸಿದ್ದಾರೆ.
ತರಗತಿಯೇ ವಿಜ್ಞಾನ ಮತ್ತು ನಾವೀನ್ಯ ಪ್ರಯೋಗಾಲಯ
ಶಾಲೆಯ ಮೊದಲ ಮಹಡಿಯಲ್ಲಿರುವ ಒಂದು ತರಗತಿಯನ್ನು ವಿಜ್ಞಾನ ಮತ್ತು ನಾವೀನ್ಯ ಪ್ರಯೋಗಾಲಯವಾಗಿ ಪರಿವರ್ತಿಸಿದ್ದಾರೆ. ಇದಕ್ಕೆ ‘ಎಂ ಲೌಂಜ್’ (M Lounge – Meet, Make, Marvel) ಎಂದು ಹೆಸರಿಟ್ಟಿದ್ದಾರೆ. ಇಲ್ಲಿ ಮಕ್ಕಳು ಕೇವಲ ಪಾಠ ಕೇಳುವುದಲ್ಲದೆ, ಸ್ವತಃ ಪ್ರಯೋಗ ಮಾಡುವ ಮೂಲಕ ಹೊಸ ವಿಷಯಗಳನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಗೆ ಮಧುಸೂದನ್ ಅವರ ಸ್ನೇಹಿತರು, ಸಹಪಾಠಿಗಳು ಮತ್ತು ಸಂಬಂಧಿಕರು ನೆರವು ನೀಡಿದ್ದಾರೆ. ವಿದೇಶಗಳಲ್ಲಿರುವ ಹಲವು ಸ್ನೇಹಿತರೂ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಒದಗಿಸಲು ಸಹಕರಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರಲ್ಲಿನ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕಲೆ ಮತ್ತು ಗಣಿತ (STEAM) ಕಲಿಕೆಗೆ ಒತ್ತು ನೀಡುವ ಆಶಯದಂತೆ ಶಾಲೆಯಲ್ಲಿ ರೋಬೋಟಿಕ್ಸ್ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ.
ನಾಲ್ಕನೇ ತರಗತಿಯಿಂದಲೇ ರೋಬೋಟ್ ಪರಿಚಯ
ಮಕ್ಕಳ ವಯಸ್ಸು ಮತ್ತು ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂತ ಹಂತವಾಗಿ ರೋಬೋಟಿಕ್ಸ್ ಕಲಿಸಲಾಗುತ್ತಿದೆ.
- 4ನೇ ತರಗತಿ: ರೋಬೋಟ್‌ಗಳನ್ನು ಮುಟ್ಟಿ, ಅವುಗಳ ಕಾರ್ಯವೈಖರಿ ತಿಳಿದುಕೊಳ್ಳುವ ಪ್ರಾಥಮಿಕ ಕಲಿಕೆ.
- 5ನೇ ತರಗತಿ: ರೋಬೋಟ್‌ಗಳನ್ನು ಬಿಡಿಭಾಗಗಳಿಂದ ಜೋಡಿಸುವ ತರಬೇತಿ.
- 6 ಮತ್ತು 7ನೇ ತರಗತಿ: ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಪರಿಚಯ.
ಆರಂಭದಲ್ಲಿ ಅಮೆರಿಕದ ಟೆಸ್ಲಾ ಕಂಪನಿಯನ್ನು ಸಂಪರ್ಕಿಸಿ ಹ್ಯೂಮನಾಯ್ಡ್ ರೋಬೋಟ್‌ಗಳನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ ಭಾರತದಲ್ಲಿ ನಿರ್ವಹಣಾ ಸೌಲಭ್ಯ ಇಲ್ಲದ ಕಾರಣ ತಂತ್ರಜ್ಞರನ್ನು ಅಮೆರಿಕದಿಂದ ಕರೆಸಬೇಕಾಗುತ್ತದೆ. ಇದಕ್ಕೆ ಸುಮಾರು ₹5 ಲಕ್ಷ ವೆಚ್ಚವಾಗಬಹುದು ಎಂದು ಕಂಪನಿ ತಿಳಿಸಿತ್ತು.
ಇದು ಆರ್ಥಿಕವಾಗಿ ಕಷ್ಟಕರವಾಗಿದ್ದರಿಂದ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಫ್ರಾಂಚೈಸಿ ಹೊಂದಿರುವ ಚೀನಾದ ರೋಬೋಟಿಕ್ಸ್ ಕಂಪನಿ ಯುನಿಟ್ರೀ (Unitree) ಅನ್ನು ಸಂಪರ್ಕಿಸಿದರು. ಶಾಲೆಯ ಪಠ್ಯಕ್ರಮಕ್ಕೆ ಅನುಗುಣವಾಗಿ ರೋಬೋಟ್‌ಗಳನ್ನು ಒದಗಿಸಲು ಕಂಪನಿ ಒಪ್ಪಿಕೊಂಡಿದೆ.
ಎಐ ಸ್ಮಾರ್ಟ್ ಬೋರ್ಡ್, VR ಹೆಡ್‌ಸೆಟ್ ಸೌಲಭ್ಯ
ಶಾಲೆಯಲ್ಲಿ ಎಐ ಆಧಾರಿತ ಸ್ಮಾರ್ಟ್ ಬೋರ್ಡ್‌ಗಳಿವೆ. ವಿದ್ಯಾರ್ಥಿಗಳಿಗೆ ಕಲಿಕಾ ವಿಷಯಗಳನ್ನು ತೋರಿಸಲು ಮೆಟಾ ಕಂಪನಿಯ ವರ್ಚುವಲ್ ರಿಯಾಲಿಟಿ (ವಿಆರ್) ಹೆಡ್‌ಸೆಟ್‌ಗಳನ್ನು ಒದಗಿಸಲಾಗಿದೆ. ಮಧುಸೂದನ್ ಅವರ ಸಹಪಾಠಿಯೊಬ್ಬರು ಅಮೆರಿಕದ ಮೆಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ನೆರವಿನಿಂದ ಈ ಹೆಡ್‌ಸೆಟ್‌ಗಳು ಪ್ರಾಯೋಜಕತ್ವದಲ್ಲಿ ದೊರೆತಿವೆ. ಶಾಲೆಯಲ್ಲಿ ಒಟ್ಟು 11 ವಿಆರ್ ಹೆಡ್‌ಸೆಟ್‌ಗಳಿದ್ದು, ಪಠ್ಯಕ್ರಮಕ್ಕೆ ಹೊಂದುವ ಶೈಕ್ಷಣಿಕ ವಿಷಯಗಳನ್ನು ವೀಕ್ಷಿಸಲು ಪರವಾನಗಿಯನ್ನೂ ಪಡೆಯಲಾಗಿದೆ.
ಹಲವು ತಂತ್ರಜ್ಞಾನಗಳ ಕಲಿಕೆ
‘ಎಂ ಲೌಂಜ್’ನಲ್ಲಿ ರೋಬೋಟಿಕ್ಸ್, ಎಐ, ಮೆಕಾಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್, ಹೈಡ್ರಾಲಿಕ್ಸ್, ನ್ಯೂಮ್ಯಾಟಿಕ್ಸ್, ಆಪ್ಟಿಕ್ಸ್, ನವೀಕರಿಸಬಹುದಾದ ಇಂಧನ, ಮೈಕ್ರೋ ಪ್ರೋಗ್ರಾಮಿಂಗ್, 3ಡಿ ಪ್ರಿಂಟಿಂಗ್ ಮತ್ತು ವಿಆರ್ ಸೇರಿದಂತೆ ಹಲವು ವಿಷಯಗಳ ಪ್ರಾಯೋಗಿಕ ಕಲಿಕೆಗೆ ಅವಕಾಶವಿದೆ.
ಆಧುನಿಕ ಶಿಕ್ಷಣಕ್ಕೆ ಅಗತ್ಯವಾದ ಡಿಜಿಟಲ್ ಮೂಲಸೌಕರ್ಯವನ್ನೂ ಶಾಲೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಡಿಜಿಸ್ಯಾಪಿ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಅತ್ಯಾಧುನಿಕ ವೈ-ಫೈ 7 ವ್ಯವಸ್ಥೆ ಮತ್ತು ಸೈಬರ್ ಬೆದರಿಕೆ ಪತ್ತೆ, ವಿಶ್ಲೇಷಣೆ ಹಾಗೂ ಪ್ರತಿಕ್ರಿಯೆಗೆ ನೆರವಾಗುವ CDARK ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಗ್ರಾಮೀಣ ಶಾಲೆಗಳಿಗೂ ತಂತ್ರಜ್ಞಾನ ತಲುಪಿಸುವ ಕನಸು
ಮೈಸೂರು ನಗರದ ಶಾಲೆಗೆ ಮಾತ್ರ ಸೀಮಿತವಾಗದೆ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೂ ಆಧುನಿಕ ತಂತ್ರಜ್ಞಾನದ ಕಲಿಕೆ ತಲುಪಿಸಬೇಕು ಎಂಬುದು ಮಧುಸೂದನ್ ಅವರ ಮುಂದಿನ ಗುರಿ. ಇದಕ್ಕಾಗಿ ‘ವರ್ಚುವಲ್ ರಿಯಾಲಿಟಿ ಆನ್ ವೀಲ್ಸ್’ ಎಂಬ ಯೋಜನೆಯನ್ನು ರೂಪಿಸಿದ್ದಾರೆ. ಈ ಮೂಲಕ ವಿಆರ್ ಮತ್ತು ತಂತ್ರಜ್ಞಾನ ಕಲಿಕಾ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ಕೊಂಡೊಯ್ಯುವ ಉದ್ದೇಶ ಹೊಂದಿದ್ದಾರೆ.
ಡ್ರೋನ್ ತಂತ್ರಜ್ಞಾನದಲ್ಲೂ ತರಬೇತಿ
ಶಾಲೆಯ ಕಲಿಕಾ ಕಾರ್ಯಕ್ರಮದಲ್ಲಿ ಡ್ರೋನ್ ತಂತ್ರಜ್ಞಾನಕ್ಕೂ ಮಹತ್ವ ನೀಡಲಾಗಿದೆ. ಕೃಷಿ, ಭೂಪಟ ತಯಾರಿಕೆ ಮತ್ತು ಪರಿಸರ ಮೇಲ್ವಿಚಾರಣೆಯಂತಹ ಕ್ಷೇತ್ರಗಳಲ್ಲಿ ಡ್ರೋನ್‌ಗಳ ಬಳಕೆ ಹೇಗೆ ಎಂಬುದನ್ನು ಮಕ್ಕಳಿಗೆ ಪರಿಚಯಿಸಲಾಗುತ್ತಿದೆ.
ಈ ಪ್ರಾಯೋಗಿಕ ಚಟುವಟಿಕೆಗಳಿಂದ ಮಕ್ಕಳಿಗೆ ವಾಯುಬಲ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಪ್ರೋಗ್ರಾಮಿಂಗ್‌ನಂತಹ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ತರಗತಿಯ ಪಾಠಗಳನ್ನು ನೈಜ ಬದುಕಿನ ಅನ್ವಯಗಳೊಂದಿಗೆ ಬೆಸೆಯುವ ಮೂಲಕ ಭವಿಷ್ಯದ ಉದ್ಯೋಗಾವಕಾಶಗಳ ಬಗ್ಗೆಯೂ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ.