ಬೆಂಗಳೂರು: 15 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ 26.16 ಕೋಟಿ ರೂಪಾಯಿ ವೆಚ್ಚದ ಜಕ್ಕೂರು ರೈಲ್ವೆ ಮೇಲ್ಸೇತುವೆ ಕೊನೆಗೂ ಉದ್ಘಾಟನೆಗೊಂಡಿದೆ.
443 ಮೀಟರ್ ಉದ್ದದ ಈ ಮೇಲ್ಸೇತುವೆಯ ಕಾಮಗಾರಿ 2011ರಲ್ಲಿ ಆರಂಭವಾಗಿತ್ತು. ಆದರೆ ಭೂಸ್ವಾಧೀನದ ಅಡೆತಡೆಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು. 2024ರಲ್ಲಿ ಸ್ಥಳೀಯ ಸಂಸ್ಥೆಯು ಭೂಸ್ವಾಧೀನ ಪ್ರಕ್ರಿಯೆ ಹಾಗೂ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾದ ಬಳಿಕ ನಿರ್ಮಾಣ ಕಾರ್ಯ ಮತ್ತೆ ಆರಂಭಗೊಂಡಿತ್ತು. ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಈ ವರ್ಷ ಯೋಜನೆಯನ್ನು ಪೂರ್ಣಗೊಳಿಸಿತು.
ಮೇಲ್ಸೇತುವೆಯಲ್ಲಿ ಕಾಂಪೋಸಿಟ್ ಸ್ಟೀಲ್ ಗರ್ಡರ್‌ಗಳು ಮತ್ತು ಬಲವರ್ಧಿತ ಮಣ್ಣಿನ ಗೋಡೆಗಳನ್ನು ನಿರ್ಮಿಸಲಾಗಿದೆ.
ನಾಲ್ಕು ಪಥಗಳ, ದ್ವಿಮುಖ ಸಂಚಾರ ವ್ಯವಸ್ಥೆಯ ಈ ಮೇಲ್ಸೇತುವೆಯಿಂದ ವಾಹನ ಸವಾರರು ರೈಲ್ವೆ ಕ್ರಾಸಿಂಗ್ ನ್ನು ತಪ್ಪಿಸಿ ಥಣಿಸಂದ್ರ, ಹೆಬ್ಬಾಳ, ಕೊಗಿಲು, ಯಲಹಂಕ ಮತ್ತು ಬಳ್ಳಾರಿ ರಸ್ತೆ (ವಿಮಾನ ನಿಲ್ದಾಣ ರಸ್ತೆ) ಕಡೆಗೆ ಸಂಚರಿಸಬಹುದಾಗಿದೆ. ಇದರಿಂದ ಪ್ರಯಾಣದ ದೂರದಲ್ಲಿ 3 ಕಿ.ಮೀ. ಹಾಗೂ ಪ್ರಯಾಣದ ಸಮಯದಲ್ಲಿ ಸುಮಾರು 15 ನಿಮಿಷ ಉಳಿತಾಯವಾಗುವ ನಿರೀಕ್ಷೆಯಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಬರೆದುಕೊಂಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಭೂಸ್ವಾಧೀನ ಮತ್ತು ಸಮನ್ವಯದ ಸವಾಲುಗಳನ್ನು ಹಲವು ವರ್ಷಗಳ ಕಾಲ ಎದುರಿಸಿ ನಿವಾರಿಸಿದ ಬಳಿಕ, ಜಕ್ಕೂರು ರೈಲ್ವೆ ಮೇಲ್ಸೇತುವೆ ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ.
ನಿರಂತರ ಪ್ರಯತ್ನ ಮತ್ತು ಸಮನ್ವಯದ ಫಲವಾಗಿ ಬಹುಕಾಲದಿಂದ ನಿರೀಕ್ಷಿಸಲಾಗಿದ್ದ ಈ ಮೂಲಸೌಕರ್ಯ ಯೋಜನೆ ಸಾಕಾರಗೊಂಡಿದ್ದು, ಉತ್ತಮ ಸಂಪರ್ಕ ವ್ಯವಸ್ಥೆಯುಳ್ಳ ಉತ್ತಮ ಬೆಂಗಳೂರು ನಿರ್ಮಾಣದತ್ತ ಮತ್ತೊಂದು ಹೆಜ್ಜೆಯಾಗಿದೆ ಎಂದು ಬರೆದುಕೊಂಡಿದ್ಗಾರೆ.