ದಕ್ಷಿಣ ಕನ್ನಡ: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ 'ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ನವೆಂಬರ್ 17 ರಂದು ಬರೋಬ್ಬರೀ 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ.
ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್ಬ್ರ್ಯಾಂಡಿಂಗ್ ಹಾಗೂ ಲೇಬಲಿಂಗ್ ಲೋಪದೋಷಗಳನ್ನು ಎಸಗುತ್ತಿದ್ದ ಹಿನ್ನೆಲೆಯಲ್ಲಿ, ಆಹಾರೋತ್ಪನ್ನ ಘಟಕದಿಂದ ಬರೋಬ್ಬರಿ 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಿಬ್ಬಂದಿ ದಾಳಿ ಮಾಡಿದಾಗ ಘಟಕದಲ್ಲಿನ ಲೇಬಲಿಂಗ್ ಹಾಗೂ ಬ್ರ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿವೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಖರೀದಿಸಿದ ಕಚ್ಚಾ ಶೇಂಗಾ ಎಣ್ಣೆಯನ್ನು ಮರು-ಪ್ಯಾಕ್ ಮಾಡಿ, ಅದನ್ನು 'ಕೋಲ್ಡ್-ಪ್ರೆಸ್ಡ್' (ಗಾಣದ) ಶೇಂಗಾ ಎಣ್ಣೆ ಎಂದು ಮಾರುಕಟ್ಟೆ ಮಾಡುವ ಮೂಲಕ ಗ್ರಾಹಕರನ್ನು ದಾರಿತಪ್ಪಿಸಲಾಗುತ್ತಿತ್ತು ಎಂಬುದು ಅಧಿಕಾರಿಗಳ ತಪಾಸಣೆಯ ವೇಳೆ ಪತ್ತೆಯಾಗಿದೆ.
ಇದು ಸ್ಪಷ್ಟವಾಗಿ ಮಿಸ್ಬ್ರ್ಯಾಂಡಿಂಗ್ ಹಾಗೂ ಗ್ರಾಹಕರನ್ನು ದಾರಿತಪ್ಪಿಸುವ ಕೃತ್ಯವಾಗಿರುವುದರಿಂದ ಈ ಜಪ್ತಿ ಕ್ರಮ ಕೈಗೊಳ್ಳಲಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಪ್ರಕಾರ, ವಶಪಡಿಸಿಕೊಂಡ ದಾಸ್ತಾನಿನಲ್ಲಿ ಶೇಂಗಾ ಎಣ್ಣೆಯ 11 ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಗೆ 10 ಕೆಜಿ), ಶೇಂಗಾ ಎಣ್ಣೆಯ 30 ಕ್ಯಾನ್ಗಳು (ಪ್ರತಿ ಕ್ಯಾನ್ಗೆ 35 ಲೀಟರ್) ಮತ್ತು ಕೊಬ್ಬರಿ ಎಣ್ಣೆಯ 4 ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಗೆ 20 ಕೆಜಿ) ಸೇರಿವೆ.