ಮೈಸೂರು: ನಾನು ಪೂಜೆ ಪುನಸ್ಕಾರಗಳನ್ನು ಮಾಡಲ್ಲ. ಹಾಗಂತ ದೇವರಿಲ್ಲ ಅಂತ ಹೇಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದೇವರನ್ನು ಪ್ರಸನ್ನಗೊಳಿಸಲು ಪೂಜೆ ಮಾಡುವುದು ಒಂದು ಮಾರ್ಗ. ಬಹಳ ಶ್ರದ್ಧಾ ಭಕ್ತಿಯಿಂದ ದೇವರ ಪೂಜೆ ಮಾಡಬೇಕು. ಕೆಟ್ಟ ಕೆಲಸ ಮಾಡಿ ದೇವರ ಬಳಿ ಪ್ರಾರ್ಥಿಸಿದರೆ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವರುಣ ಕ್ಷೇತ್ರ ವ್ಯಾಪ್ತಿಯ ಹೊಸ ಕೆಂಪಯ್ಯನಹುಂಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮತ್ತೊಮ್ಮೆ ದೇವರ ಬಗ್ಗೆ ಮಾತನಾಡಿದ್ದಾರೆ. ನಾನು ದೇವರಿಗೆ ಪೂಜೆ ಮಾಡಲ್ಲ. ಹಾಗಂತ ದೇವರಿಲ್ಲ ಅಂತ ಹೇಳಲ್ಲ ದೇವರಿದ್ದಾನೆ. ಎಲ್ಲಾ ಕಡೆಯೂ ದೇವರಿದ್ದಾನೆ. ನಾವು ಮಾಡುವ ಕೆಲಸದಲ್ಲೂ ದೇವರಿದ್ದಾನೆ. ಕೆಟ್ಟ ಕೆಲಸ ಮಾಡಿ ಪೂಜೆ ಮಾಡಿದ್ರೆ ದೇವರು ಒಳ್ಳೇದು ಮಾಡಲ್ಲ. ಸಾವಿರಾರು ದೇವರಿಲ್ಲ, ಒಬ್ಬನೇ ದೇವರಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದರು.