ಎನ್ ಟಿಎ ಮುಖ್ಯಸ್ಥ ಅಭಿಷೇಕ್ ಸಿಂಗ್ 
ರಾಜ್ಯ

ಮಕ್ಕಳೇ, ಎಐ ಬಳಕೆ ಕಡಿಮೆ ಮಾಡಿ; ವಾರಕ್ಕೊಂದು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ!: NTA ಮುಖ್ಯಸ್ಥರ ಸಲಹೆ

ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬಗಳ ಹೆಚ್ಚಿನ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಕಷ್ಟು ಶ್ರಮ ಮತ್ತು ಒತ್ತಡ ಎದುರಿಸುತ್ತಿದ್ದಾರೆ. ಹೀಗಾಗಿ ಪರೀಕ್ಷೆಗಳನ್ನು ಸರಳ, ಪಾರದರ್ಶಕ ಮತ್ತು ಅಭ್ಯರ್ಥಿಗಳಿಗೆ..

ಬೆಂಗಳೂರು: ಮಕ್ಕಳು ವಾರಕ್ಕೆ ಕನಿಷ್ಠ ಒಂದು ಮುದ್ರಿತ ಪುಸ್ತಕವನ್ನಾದರೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ದೊಡ್ಡ ಭಾಷಾ ಮಾದರಿಗಳ (ಎಲ್‌ಎಲ್‌ಎಂ) ಬಳಕೆಯಿಂದ ದೂರವಿರಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಶೃಂಗಸಭೆ 2026ರ ಭಾಗವಾಗಿ ಮಂಗಳವಾರ ಆಯೋಜಿಸಿದ್ದ 'ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಬೋಧನೆ, ಕಲಿಕೆ ಮತ್ತು ಪರೀಕ್ಷೆ' ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬಗಳ ಹೆಚ್ಚಿನ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಕಷ್ಟು ಶ್ರಮ ಮತ್ತು ಒತ್ತಡ ಎದುರಿಸುತ್ತಿದ್ದಾರೆ. ಹೀಗಾಗಿ ಪರೀಕ್ಷೆಗಳನ್ನು ಸರಳ, ಪಾರದರ್ಶಕ ಮತ್ತು ಅಭ್ಯರ್ಥಿಗಳಿಗೆ ಅನುಕೂಲಕರವಾಗಿಸುವುದು ಎನ್‌ಟಿಎಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

'ಒಂದು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಲ್ಲಿ ಸುಮಾರು ಶೇ.10ರಷ್ಟು ಮಂದಿ ಮಾತ್ರ ಅರ್ಹತೆ ಪಡೆಯುತ್ತಾರೆ. ಇಂತಹ ಸಂದರ್ಭದಲ್ಲಿ ಅಭ್ಯರ್ಥಿಗಳು ಎದುರಿಸುವ ಕಷ್ಟಗಳನ್ನು ಕಡಿಮೆ ಮಾಡಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು. ಎನ್‌ಟಿಎ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ' ಎಂದು ಅಭಿಷೇಕ್ ಸಿಂಗ್ ತಿಳಿಸಿದರು.

ಪರೀಕ್ಷೆಯಲ್ಲಿ ಎಐ ಬಳಕೆ; ನ್ಯಾಯಸಮ್ಮತತೆಗೆ ಆದ್ಯತೆ

ಪರೀಕ್ಷಾ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸುವಾಗ ಎಲ್ಲ ಅಭ್ಯರ್ಥಿಗಳಿಗೂ ನ್ಯಾಯಯುತ ಅವಕಾಶ ಸಿಗುವಂತೆ ನೋಡಿಕೊಳ್ಳುವುದು ಮುಖ್ಯ ಎಂದು ಅವರು ಹೇಳಿದರು.

'ಪರೀಕ್ಷೆಗಳಲ್ಲಿ ಸಾಧ್ಯವಾದಷ್ಟು ನ್ಯಾಯಸಮ್ಮತ ವಿಧಾನ ಜಾರಿಯಾಗುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಬೇಕು. ಇದಕ್ಕಾಗಿ ಸಾಕಷ್ಟು ಚಿಂತನೆ ಮತ್ತು ಯೋಜನೆ ಅಗತ್ಯ. ಈ ಪ್ರಕ್ರಿಯೆಯಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಅಭಿಪ್ರಾಯಪಟ್ಟರು. ಆದರೆ, ಎಐ ಬಳಕೆಯಿಂದ ವಿದ್ಯಾರ್ಥಿಗಳ ವಿಮರ್ಶಾತ್ಮಕ ಚಿಂತನಾ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದೂ ಎಚ್ಚರಿಸಿದರು.

'ಪರೀಕ್ಷೆಗಳು ಕೇವಲ ಕಂಠಪಾಠದ ಸಾಮರ್ಥ್ಯವನ್ನು ಅಳೆಯಬಾರದು. ಅಭ್ಯರ್ಥಿಗಳು ಎಷ್ಟು ಚೆನ್ನಾಗಿ ಯೋಚಿಸುತ್ತಾರೆ, ಸಮಸ್ಯೆಗಳನ್ನು ಹೇಗೆ ವಿಶ್ಲೇಷಿಸುತ್ತಾರೆ ಎಂಬುದನ್ನು ಪರೀಕ್ಷಿಸಬೇಕು. ಆದ್ದರಿಂದ ಎಐ ಬಳಕೆಯಲ್ಲೂ ಮಾನವ ಶಿಕ್ಷಣ ತಜ್ಞರೇ ಪ್ರಮುಖ ಪಾತ್ರ ವಹಿಸಬೇಕು' ಎಂದು ಹೇಳಿದರು.

ಡಿಜಿಟಲ್ ಶಿಕ್ಷಣ ವ್ಯವಸ್ಥೆಗೆ ಮೆಚ್ಚುಗೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಡಿಜಿಟಲೀಕರಣವನ್ನೂ ಅಭಿಷೇಕ್ ಸಿಂಗ್ ಶ್ಲಾಘಿಸಿದರು. ಅದರಲ್ಲೂ ಡಿಜಿಲಾಕರ್ ವ್ಯವಸ್ಥೆಯನ್ನು ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದರು.

ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್ ಮೂಲಕ ಪರಿಶೀಲಿಸಲು ಡಿಜಿಲಾಕರ್ ನೆರವಾಗುತ್ತಿದೆ. ಪ್ರವೇಶ ಪ್ರಕ್ರಿಯೆ ಮತ್ತು ಕೌನ್ಸೆಲಿಂಗ್ ವ್ಯವಸ್ಥೆಯನ್ನೂ ಡಿಜಿಟಲ್ ರೂಪದಲ್ಲಿ ಸುಗಮಗೊಳಿಸಲಾಗಿದೆ. ಇದರಿಂದ ನಕಲಿ ದಾಖಲೆಗಳ ಬಳಕೆಯನ್ನು ತಡೆಯಲು ಸಾಧ್ಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಭವಿಷ್ಯದಲ್ಲಿ ಉದ್ಯೋಗ ನೀಡುವ ಕಂಪನಿಗಳೂ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳನ್ನು ಸುಲಭವಾಗಿ ಪರಿಶೀಲಿಸಲು ಈ ವ್ಯವಸ್ಥೆ ನೆರವಾಗಲಿದೆ ಎಂದರು.

'ಎಐಗೂ ಮಿತಿಗಳಿವೆ; ಮೂಲ ಜ್ಞಾನವೇ ಮುಖ್ಯ'

ಚರ್ಚೆಯಲ್ಲಿ ಭಾಗವಹಿಸಿದ್ದ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವೀಳಿನಾಥನ್ ಕಾಮಕೋಟಿ ಕೂಡ ಎಐ ಬಳಕೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. 'ಕೃತಕ ಬುದ್ಧಿಮತ್ತೆಗೂ ಕೆಲವು ಮಿತಿಗಳಿವೆ. ಆ ಮಿತಿಗಳನ್ನು ಮೀರಿದ ಜ್ಞಾನ ಮತ್ತು ಸಾಮರ್ಥ್ಯವನ್ನು ಪರೀಕ್ಷೆಗಳು ಅಳೆಯಬೇಕು. ವಿದ್ಯಾರ್ಥಿಗಳ ಮೂಲಭೂತ ಜ್ಞಾನ ಮತ್ತು ಕಲಿಕೆಯ ಅಡಿಪಾಯವನ್ನು ಪರೀಕ್ಷಿಸುವುದು ಮುಖ್ಯ. ಈ ಅಡಿಪಾಯವನ್ನು ಬಲಪಡಿಸಲು ಯಾವುದೇ ಯಂತ್ರ ಸಹಾಯ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lateef Bhat ಎನ್‌ಕೌಂಟರ್‌; ಎ ಕೆಟಗರಿ ಉಗ್ರ, ಮರಗೆಲಸ ಮಾಡುತ್ತಿದ್ದವ ಉಗ್ರನಾಗಿದ್ದೇ ರೋಚಕ; LeT ಸೇರಿದ ಒಂದೇ ವರ್ಷಕ್ಕೆ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!

'ಕೆಲವು ಲೆಕ್ಕಾಚಾರಗಳನ್ನು ತಣ್ಣಗೇ ಮುಗಿಸಬೇಕು': ಉಗ್ರ ಲತೀಫ್ ಭಟ್ ಎನ್ಕೌಂಟರ್ ಬೆನ್ನಲ್ಲೇ CRPF ಮುಖ್ಯಸ್ಥರ ಪೋಸ್ಟ್ ವೈರಲ್!

'ಅಪರಿಚಿತರ ಜೊತೆ ಪ್ರಯಾಣಿಸಬೇಡಿ': ಎಚ್ಚರಿಕೆ ನಿರ್ಲಕ್ಷಿಸಿ ಸ್ಥಳೀಯರೊಂದಿಗೆ ಬ್ರೆಜಿಲ್ ಮಹಿಳೆ ಮರುಭೂಮಿಯಲ್ಲಿ ಕ್ಯಾಂಪಿಂಗ್, ಮುಂದೇನಾಯ್ತು?

ಉತ್ತರ ಪ್ರದೇಶದಲ್ಲಿ ಮತ್ತೆ ಎನ್ಕೌಂಟರ್; ಪೊಲೀಸರ ಗುಂಡಿಗೆ Gangster ವಹೀದ್ ಅನ್ಸಾರಿ ಹತ

Kulgam Encounter: LeT ಸಂಘಟನೆಯ ಪ್ರಮುಖ ಉಗ್ರ ಲತೀಫ್ ಭಟ್ ಹೊಡೆದುರುಳಿಸಿದ ಭಾರತೀಯ ಸೇನೆ! ಮಸೀದಿಯಲ್ಲಿ ಅಡಗಿದ್ದ ಭಯೋತ್ಪಾದಕ!