ಡಿ.ಕೆ. ಶಿವಕುಮಾರ್ 
ರಾಜ್ಯ

ಏರ್‌ಪೋರ್ಟ್‌ಗೆ ಹೆಬ್ಬಾಳ ಮಾದರಿಯಲ್ಲಿ ಹೊಸ ಫ್ಲೈಓವರ್: ಜಕ್ಕೂರು ವಿಮಾನ ನಿಲ್ದಾಣದ ಎದುರು ಪಾಲಿಕೆ ಕಚೇರಿ ನಿರ್ಮಾಣ; ಸಿಎಂ ಡಿ.ಕೆ.ಶಿವಕುಮಾರ್

522.23 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರದ ವಿವಿದ ಕಡೆಗಳಲ್ಲಿ ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು ಸಿಎಂ ಡಿ ಕೆ‌ ಶಿವಕುಮಾರ್ ಅವರು ಬುಧವಾರ ನೆರವೇರಿಸಿದರು.

ಬೆಂಗಳೂರು: ಬೆಂಗಳೂರಿನ ಉತ್ತರ ಭಾಗದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸವಾರರ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಹೆಬ್ಬಾಳ ಮಾದರಿಯಲ್ಲಿ ಹೊಸ ಫ್ಲೈಓವರ್ ನಿರ್ಮಿಸುವ ಕುರಿತು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಜಕ್ಕೂರು ವಿಮಾನ ನಿಲ್ದಾಣದ ಎದುರೇ ನೂತನ ಪಾಲಿಕೆ ಕಚೇರಿ ನಿರ್ಮಾಣ ಮಾಡಲಾಗುವುದು" ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು

522.23 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರದ ವಿವಿದ ಕಡೆಗಳಲ್ಲಿ ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು ಸಿಎಂ ಡಿ ಕೆ‌ ಶಿವಕುಮಾರ್ ಅವರು ಬುಧವಾರ ನೆರವೇರಿಸಿದರು.

ಮೊದಲಿಗೆ ಬ್ಯಾಟರಾಯನಪುರದ ಜಕ್ಕೂರು ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದರು. ನಂತರ ಕೆ.ಆರ್. ಪುರಂನ ಗೆದ್ದಲಹಳ್ಳಿ ರೈಲ್ವೆ ಹಳಿಗೆ ಅಡ್ಡಲಾಗಿ ನಿರ್ಮಿಸಿರುವ ಮಳೆನೀರು ಕಾಲುವೆ ಉದ್ಘಾಟಿಸಿದರು. ಇದಾದ ಬಳಿಕ ಮಾರುತಿ ಸೇವಾನಗರ ಮುಖ್ಯರಸ್ತೆ ಐಒಸಿ ಜಂಕ್ಷನ್ ಬಳಿ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಏರ್‌ಪೋರ್ಟ್ ಕಡೆಗೆ ಹೋಗುವವರು ಹಾಗೂ ಉತ್ತರ ಬೆಂಗಳೂರಿನಿಂದ ನಗರದೊಳಗೆ ಬರುವವರು ಪ್ರತಿನಿತ್ಯ ಸಂಚಾರ ದಟ್ಟಣೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ಈ ಸಮಸ್ಯೆ ಇದೆ. ವಿಮಾನ ನಿಲ್ದಾಣಕ್ಕೆ ತೆರಳಲು ಈಗಿರುವ ಮಾರ್ಗವನ್ನೇ ಎಲ್ಲರೂ ಅವಲಂಬಿಸಬೇಕಾಗಿದೆ. ಹೀಗಾಗಿ ಇಲ್ಲಿ ಹೊಸ ಫ್ಲೈಓವರ್ ನಿರ್ಮಿಸುವ ಅಗತ್ಯವಿದೆ ಎಂದು ತೀರ್ಮಾನಿಸಿದ್ದೇವೆ ಎಂದರು.

ಫ್ಲೈಓವರ್ ಅನ್ನು ಯಾವ ಮಾದರಿಯಲ್ಲಿ ನಿರ್ಮಿಸಬೇಕು ಅಥವಾ ಬೇರೆ ರೀತಿಯ ವ್ಯವಸ್ಥೆ ಮಾಡಬೇಕೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಬೇಕಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅಧಿಕಾರಿಗಳು, ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿದ್ದು, ಯಾವ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

"ಜಕ್ಕೂರು ವಿಮಾನ ನಿಲ್ದಾಣದ ಎದುರು ಪಾಲಿಕೆ ಕಚೇರಿ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕ್ಷೇತ್ರದ ಜನ ಬೆಂಗಳೂರು ಪಾಲಿಕೆಗೆ ಹೋಗಬೇಕಿಲ್ಲ. ನಿಮ್ಮದೇ ಪಾಲಿಕೆ ಕಚೇರಿ ನಿರ್ಮಾಣವಾಗಲಿದೆ. ಬೆಳೆಯುತ್ತಿರುವ ಬೆಂಗಳೂರಿನ ಅಗತ್ಯಗಳಿಗೆ ತಕ್ಕಂತೆ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು.

ವಿಮಾನ ನಿಲ್ದಾಣ ನಿರ್ಮಾಣವಾದ ನಂತರ ಈ ಕ್ಷೇತ್ರದ ಆಸ್ತಿ ಬೆಲೆಯೂ ಹೆಚ್ಚಳವಾಗಿದೆ. ಹೊರ ರಾಜ್ಯಗಳ ಜನರೂ ಇಲ್ಲಿ ನೆಲೆಸಿದ್ದು ಅನೇಕರಿಗೆ ಅನುಕೂಲವಾಗಿದೆ. ಅದಕ್ಕೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ" ಎಂದು ಹೇಳಿದರು.

"ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ಹೆಬ್ಬಾಳ ಫ್ಲೈಓವರ್ ನಿರ್ಮಾಣವಾಯಿತು. ಬಳಿಕ ಇದುವೇ ಅತ್ಯಂತ ಪ್ರಮುಖವಾದ ಮೂಲಸೌಕರ್ಯ ನಿರ್ಮಾಣವಾಗಿದೆ. ಈ ಮೇಲ್ಸೇತುವೆ ಮೂರು ಕ್ಷೇತ್ರಗಳನ್ನು ಜೋಡಿಸುತ್ತದೆ. ಬೆಂಗಳೂರಿನ ನಾಗರಿಕರ ಸಮಯವನ್ನು ಉಳಿಸಬೇಕೆಂಬ ಉದ್ದೇಶದಿಂದ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಈ ರೋಟರಿ ಮೇಲ್ಸೇತುವೆ ಬೆಂಗಳೂರಿಗೆ ಕಿರೀಟವಾಗಲಿದೆ" ಎಂದು ಹೇಳಿದರು.

"ಈ ಮೇಲ್ಸೇತುವೆ ಕಾಮಗಾರಿ ತಾಂತ್ರಿಕವಾಗಿ ಕ್ಲಿಷ್ಟಕರವಾಗಿದೆ. ಆರು ಪಥಗಳ ಫ್ಲೈಓವರ್ ಸುಲಭದ ಕೆಲಸವಲ್ಲ. ಆದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗದಂತೆ ಕಾಮಗಾರಿಯನ್ನು ಕೈಗೊಳ್ಳಲು ಕ್ರಮ ಕೈಗೊಂಡಿದ್ದೇವೆ. ಜನರ ಸಲಹೆಗಳನ್ನು ಪಡೆದುಕೊಂಡು, ಸಂಚಾರಿ ಪೊಲೀಸರ, ನಾಗರಿಕರ ಸಲಹೆಗಳನ್ನು ಪಡೆದುಕೊಂಡು ಅನುಷ್ಠಾನ ಮಾಡಲಾಗುತ್ತಿದೆ" ಎಂದರು.

"ಇಡೀ ಬೆಂಗಳೂರು ನಗರದ ಅಭಿವೃದ್ಧಿಗೆ 1.50 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ. ಮೇಲ್ಸೇತುವೆಗಳು, ಮೆಟ್ರೋ, ಬೆಂಗಳೂರು ಬಿಜಿನೆಸ್ ಕಾರಿಡಾರ್, ಟನಲ್ ರಸ್ತೆ, ಸಬ್ ಅರ್ಬನ್ ರೈಲ್ವೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಇದರಲ್ಲಿ ಸೇರಿಸಲಾಗಿದೆ. ಜನರ ಅಭಿವೃದ್ಧಿಗೆ ಉತ್ತಮ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ. ಟೀಕೆಗಳನ್ನು ಹಾಗೂ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ದ" ಎಂದರು.

"ಗೆದ್ದಲಹಳ್ಳಿ ರೈಲ್ವೆ ಹಳಿಗೆ ಅಡ್ಡಲಾಗಿ ಮಳೆನೀರು ಕಾಲುವೆ ನಿರ್ಮಿಸುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿತ್ತು. ಈ ಹಿಂದೆ ಮೂರು ಬಾರಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲನೆ ಮಾಡಲಾಗಿತ್ತು. ರೈಲ್ವೆ ಸೇತುವೆ ಹಾಗೂ ಇತರ ನಿರ್ಮಾಣಗಳ ನಡುವೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸುಲಭದ ಕೆಲಸವಾಗಿರಲಿಲ್ಲ" ಎಂದರು.

"ಇದು ಬಹಳ ತಾಂತ್ರಿಕ ಸಮಸ್ಯೆ ಇದ್ದ ಜಾಗ. ಇಷ್ಟು ಅಗಲವಾದ ಪ್ರದೇಶದಲ್ಲಿ ಕೇವಲ 20 ಅಡಿ ಜಾಗದಲ್ಲಿ ಮಾತ್ರ ನೀರು ಹರಿದುಹೋಗಬೇಕಾದ ಪರಿಸ್ಥಿತಿ ಇತ್ತು. ಮಳೆ ಬಂದಾಗ ಹೆಬ್ಬಾಳ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಿ ಕಾಮಗಾರಿ ಪೂರ್ಣಗೊಳಿಸಿರುವುದು ಸಂತಸದ ಸಂಗತಿ" ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಂತುಕನ ಆತಂಕ: ಟಿಕೆಟ್ ಇಲ್ಲ, ದಾಖಲೆಗಳೂ ಇಲ್ಲ, ಬಲವಂತವಾಗಿ ನುಗ್ಗಲು ಯತ್ನಿಸಿದವ CISF ವಶಕ್ಕೆ! Video

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

ದೇವಾಲಯದ ಹುಂಡಿ ತುಂಬಿದರೂ ಅರ್ಚಕರ ಹೊಟ್ಟೆ ತುಂಬುತ್ತಿಲ್ಲ; ಹಾಲು, ತುಪ್ಪ, ಅಕ್ಕಿ ಬೆಲೆ ಏರಿಕೆ, ವೇತನ ಹೆಚ್ಚಳ, ವಿಮೆಗೆ ಆಗ್ರಹ!

ಮನರೇಗಾ ಯೋಜನೆಯ ₹13.57 ಲಕ್ಷ ಗುಳುಂ; ಕೆಲಸ ಮಾಡದೆ ಸರ್ಕಾರಿ ಹಣ ಲೂಟಿ, ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ!

ಊಟಿಯಲ್ಲಿ ಮೈಕೊರೆಯುವ ಚಳಿ; 5.9 ಡಿಗ್ರಿಗೆ ಕುಸಿದ ಕನಿಷ್ಠ ತಾಪಮಾನ, ಹಿಮದ ಹೊದಿಕೆಯಲ್ಲಿ ಗಿರಿಧಾಮ