ಸಂಗ್ರಹ ಚಿತ್ರ 
ರಾಜ್ಯ

ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ದ್ವೇಷಕ್ಕೆ ಅವಕಾಶವಿಲ್ಲ; ಬಸವ ತತ್ವಗಳ ವಿರೂಪಕ್ಕೆ ಆಕ್ರೋಶ; ಲಿಂಗಾಯತ ಸಮುದಾಯದಿಂದ ಕಾನೂನು ಕ್ರಮದ ಎಚ್ಚರಿಕೆ

ಭಾರತ ಸಂವಿಧಾನದ 19ನೇ ವಿಧಿಯು ವಾಕ್ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ. ಆದರೆ, ವಾಕ್ ಸ್ವಾತಂತ್ರ್ಯ ಎಂದರೆ ಯಾರನ್ನಾದರೂ ಅವಮಾನಿಸುವ ಅಥವಾ ಧಾರ್ಮಿಕ ದ್ವೇಷ ಸೃಷ್ಟಿಸುವ ಸ್ವಾತಂತ್ರ್ಯ ಎಂದರ್ಥವಲ್ಲ.

ಬೆಂಗಳೂರು: 12ನೇ ಶತಮಾನದ ಸಮಾಜ ಸುಧಾರಕ ಹಾಗೂ ಲಿಂಗಾಯತ ಚಳವಳಿಯ ಸಂಸ್ಥಾಪಕ ಬಸವಣ್ಣನವರ ಕುರಿತು ಸ್ವಯಂ ಘೋಷಿತ ಸಂಶೋಧಕನೊಬ್ಬ ಸಂದರ್ಶನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪಕ್ಕೆ ಕರ್ನಾಟಕದ ಲಿಂಗಾಯತ ಸಮುದಾಯದ ಅನುಯಾಯಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪೊಲೀಸ್ ದೂರು ದಾಖಲಿಸುವುದಾಗಿ ಸಮುದಾಯದ ಮುಖಂಡರು ಗುರುವಾರ ಘೋಷಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕರ್ನಾಟಕದಲ್ಲಿ ಪ್ರಬಲ ಸಮುದಾಯವಾಗಿರುವ ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಲೇಖನಗಳು, ಸಂದರ್ಶನ ಹಾಗೂ ಪುಸ್ತಕದ ಮೂಲಕ ಬಸವಣ್ಣ, ಶರಣರು ಮತ್ತು ವಚನ ಸಾಹಿತ್ಯಕ್ಕೆ ಕಳಂಕ ತರಲು ಲೇಖಕ ಹಾಗೂ ಸ್ಥಳೀಯ ಭಾಷೆಯ ದಿನಪತ್ರಿಕೆಯ ಸಂಪಾದಕ-ಪ್ರಕಾಶಕರು ಪ್ರಯತ್ನಿಸಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್, ಆಡಳಿತಾರೂಢ ಕಾಂಗ್ರೆಸ್ ಶಾಸಕ ಬಿ.ಎಸ್. ಪಾಟೀಲ್, ಬ್ರಿಟನ್‌ನ ಲೇಬರ್ ಪಕ್ಷದ ಸದಸ್ಯ ಡಾ. ನೀರಜ್ ಪಾಟೀಲ್ ಸೇರಿದಂತೆ ಬಸವಣ್ಣನವರ ಅನುಯಾಯಿಗಳು ಆರೋಪಿಸಿದ್ದಾರೆ.

ಭಾರತ ಸಂವಿಧಾನದ 19ನೇ ವಿಧಿಯು ವಾಕ್ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ. ಆದರೆ, ವಾಕ್ ಸ್ವಾತಂತ್ರ್ಯ ಎಂದರೆ ಯಾರನ್ನಾದರೂ ಅವಮಾನಿಸುವ ಅಥವಾ ಧಾರ್ಮಿಕ ದ್ವೇಷ ಸೃಷ್ಟಿಸುವ ಸ್ವಾತಂತ್ರ್ಯ ಎಂದರ್ಥವಲ್ಲ ಎಂದು ಡಾ. ನೀರಜ್ ಪಾಟೀಲ್ ಹೇಳಿದ್ದಾರೆ.

ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದ ಅವರು, ಕೃತ್ಯದ ಹಿಂದೆ ಇರುವ ಲೇಖಕನಷ್ಟೇ ಅಲ್ಲದೆ, ಪ್ರಕಟಣೆಗೆ ಸಹಕರಿಸಿದವರು ಅಥವಾ ಸಂಚು ರೂಪಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಪ್ರಕರಣವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ತಪ್ಪಿತಸ್ಥರು ಕಾನೂನು ಪರಿಣಾಮಗಳನ್ನು ಎದುರಿಸಬೇಕು ಎಂದು ತಿಳಿಸಿದ್ದಾರೆ.

ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಈ ವಿಚಾರವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು. ಸರ್ಕಾರ ಕಾನೂನಿನ ಅಂಶಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.

ಮೈಸೂರು ಮತ್ತು ಬಸವಕಲ್ಯಾಣ ಸೇರಿದಂತೆ ಹಲವು ಕಡೆ ಈಗಾಗಲೇ ದೂರುಗಳನ್ನು ಸಲ್ಲಿಸಲಾಗಿದ್ದು, ಪ್ರತಿಭಟನೆಗಳೂ ನಡೆದಿವೆ ಎಂದು ಹೇಳಿದ್ದಾರೆ.

ಇದು ಕೇವಲ ಲಿಂಗಾಯತ ಸಮುದಾಯದ ಅಸ್ಮಿತೆಗೆ ಸಂಬಂಧಿಸಿದ ವಿಚಾರವಲ್ಲ. ಬಸವಣ್ಣನವರು ವಿಶ್ವಮಾನವ ಸಂದೇಶ ಸಾರಿದವರು. ಧರ್ಮದ ಅಡಿಪಾಯ ಮಾನವೀಯತೆ ಎಂದು ಅವರು ಪ್ರತಿಪಾದಿಸಿದ್ದರು ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಈ ವಿಚಾರದಲ್ಲಿ ವೀರಶೈವರು ಮತ್ತು ಲಿಂಗಾಯತರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ನಿಲ್ಲಲಿದ್ದಾರೆ ಎಂದೂ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕ ಬಿ.ಎಸ್. ಪಾಟೀಲ್ ಅವರು ಮಾತನಾಡಿ, ಈ ವಿವಾದವನ್ನು ಒಂದು ಧಾರ್ಮಿಕ ಸಮುದಾಯಕ್ಕೆ ಸೀಮಿತವಾದ ಸಂಘರ್ಷವೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ.

ಇದು ಒಂದು ನಿರ್ದಿಷ್ಟ ಧರ್ಮಕ್ಕೆ ಮಾಡಿದ ಅವಮಾನವಲ್ಲ. ಪ್ರತಿಯೊಬ್ಬ ಕನ್ನಡಿಗನಿಗೂ ಮಾಡಿದ ಅವಮಾನ. ಈ ವಿಚಾರವನ್ನು ಯಾರೂ ಮರೆಯಬಾರದು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಈ ಹೇಳಿಕೆಗಳ ಬಗ್ಗೆ ಜನರು ನೋವು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಬಸವಣ್ಣನವರ ತತ್ವಗಳನ್ನು ವಿರೂಪಗೊಳಿಸುವ ಪ್ರಯತ್ನಗಳು ಹಲವು ವರ್ಷಗಳಿಂದ ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಇದರ ಹಿಂದೆ ಇರುವ ಶಕ್ತಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳನ್ನು ಗುರುತಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ; ಬಸವಪ್ರಜ್ಞೆಯಿಂದ ಹುಟ್ಟಿಕೊಂಡ ಪ್ರತಿರೋಧವಾಗಿದೆ ಎಂದು ಹೇಳಿದ್ದಾರೆ.

ಬ್ರಿಟಿಷ್ ಸಂಸತ್ ಭವನದ ಹೊರಗೆ ಬಸವಣ್ಣನವರ ಪ್ರತಿಮೆ ಸ್ಥಾಪನೆಯಾದ ಸಂದರ್ಭವನ್ನು ಸ್ಮರಿಸಿದ ಡಾ. ನೀರಜ್ ಪಾಟೀಲ್ ಅವರು, ಬಸವಣ್ಣನವರ ಜೀವನ ಮತ್ತು ತತ್ವಗಳ ಕುರಿತು ಅಧ್ಯಯನ ನಡೆಸಿ, ಪ್ರಸ್ತಾವನೆಗೆ ಅನುಮೋದನೆ ನೀಡಿದ ಬಳಿಕವೇ ಪ್ರತಿಮೆ ಸ್ಥಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಬಸವಣ್ಣನವರು ಸಾರಿದ ಸಂದೇಶದ ಸಾರ್ವತ್ರಿಕ ಮಹತ್ವಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದಾರೆ.

ಬಸವಣ್ಣನವರನ್ನು 'ಅಪರಾಧಿ' ಎಂದು ಬಣ್ಣಿಸಿರುವುದಕ್ಕೂ ಸಮುದಾಯದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಪದಪ್ರಯೋಗವನ್ನು ಸಂಶೋಧನೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಲೇಖಕರು ಉಲ್ಲೇಖಿಸಿರುವ ದಾಖಲೆಗಳು ಮತ್ತು ವಾದಗಳನ್ನು ಧಾರ್ಮಿಕ ಮುಖಂಡರು ಹಾಗೂ ವಿದ್ವಾಂಸರು ಪರಿಶೀಲಿಸಿ ಪ್ರತಿಕ್ರಿಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿವಾದವು ರಾಜಕೀಯ ಮತ್ತು ಸಮುದಾಯದ ಭೇದಗಳನ್ನು ಮೀರಿ ಬಸವಣ್ಣನವರ ಅನುಯಾಯಿಗಳನ್ನು ಒಗ್ಗೂಡಿಸಿದೆ. ಯಾವುದೇ ಪಕ್ಷದವರು ಆರೋಪಿತ ಹೇಳಿಕೆಗಳನ್ನು ಖಂಡಿಸಲು ಸ್ವತಂತ್ರರಾಗಿದ್ದಾರೆ. ಅವಹೇಳನಕ್ಕೆ ಕಾರಣರಾದವರನ್ನು ಗುರುತಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದೇ ನಮ್ಮ ಉದ್ದೇಶ ಎಂದು ಎಂದು ಎಂ.ಬಿ. ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ; ಮುಹಮ್ಮದ್ ಯೂನಸ್ ಮನೆಗೆ ಬೆಂಕಿ, ಗ್ರಾಮೀಣ್ ಬ್ಯಾಂಕ್ ಗಳ ಮೇಲೂ ದಾಳಿ, ಕನಿಷ್ಠ 4 ಸಾವು!

ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಂತುಕನ ಆತಂಕ: ಟಿಕೆಟ್ ಇಲ್ಲ, ದಾಖಲೆಗಳೂ ಇಲ್ಲ, ಬಲವಂತವಾಗಿ ನುಗ್ಗಲು ಯತ್ನಿಸಿದವ CISF ವಶಕ್ಕೆ! Video

Video: 'ಇನ್ಮೇಲೆ ನೀರಿಗಾಗಿ ಗಲಾಟೆ ಇರೋಲ್ಲ': ಕಾವೇರಿ-ಗೋದಾವರಿ ಜೋಡಣೆ ಕುರಿತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಹತ್ವದ ಹೇಳಿಕೆ!

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

Wellington Test: ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಫಿಲಿಪ್ಸ್-ನಿಕೋಲ್ಸ್ ಆಸರೆ, ಮೊದಲ ದಿನದಾಟದ ಅಂತ್ಯಕ್ಕೆ NZ 243/5