ಬೆಂಗಳೂರು: ಖ್ಯಾತ ಪತ್ರಕರ್ತೆ, ಅಂಕಣಕಾರ್ತಿ ಹಾಗೂ ಸಂಗೀತ ವಿದ್ವಾಂಸೆ ಶಕುಂತಲಾ ನರಸಿಂಹನ್ (86) ಅವರು ವಯೋಸಹಜ ಕಾಯಿಲೆಗಳಿಂದಾಗಿ ಬುಧವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹಲಸೂರಿನ ಕೇರ್ ಹೋಮ್‌ನಲ್ಲಿ ಬುಧವಾರ ಬೆಳಿಗ್ಗೆ 5:15 ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪುತ್ರಿ, ಖ್ಯಾತ ಭೌತವಿಜ್ಞಾನಿ ಪ್ರೊ. ಶೋಭನಾ ನರಸಿಂಹನ್ ಅವರನ್ನು ಅಗಲಿದ್ದಾರೆ.
ಮಹಿಳಾ ಅಧ್ಯಯನ ಮತ್ತು ಸಂಗೀತಶಾಸ್ತ್ರದಲ್ಲಿ ಎರಡು ಪಿಎಚ್‌ಡಿ ಪದವಿಗಳನ್ನು ಪಡೆದಿದ್ದ ಶಕುಂತಲಾ ನರಸಿಂಹನ್, ಹಲವು ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಪತ್ರಿಕೋದ್ಯಮದ ಜೊತೆಗೆ ಅವರು ಪ್ರಖ್ಯಾತ ಸಂಗೀತಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದರು. ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಎರಡರಲ್ಲೂ ಸಮಾನ ಪ್ರಾವೀಣ್ಯ ಹೊಂದಿದ್ದ ಅಪರೂಪದ ಕಲಾವಿದೆಯಾಗಿದ್ದರು.
ದೂರದರ್ಶನ ಮತ್ತು ಆಕಾಶವಾಣಿ ಆಯೋಜಿಸುತ್ತಿದ್ದ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಗಳಲ್ಲಿ ಅವರು ಗಾಯನ ಪ್ರಸ್ತುತಪಡಿಸಿದ್ದರು.
ಎರಡೂ ಸಂಗೀತ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಮೂಲಕ 'ಸ್ವಯಂ ಜುಗಲ್‌ಬಂದಿ' ಪ್ರದರ್ಶಿಸುತ್ತಿದ್ದದ್ದು ಅವರ ವಿಶೇಷತೆಯಾಗಿತ್ತು.
ಪ್ರವಾಸ ಕಥನಕಾರ್ತಿ, ಸಂಗೀತ ಸಂಶೋಧಕಿ, ವಿಮರ್ಶಕಿ ಹಾಗೂ ಗ್ರಾಹಕ ಹಕ್ಕುಗಳ ಹೋರಾಟಗಾರ್ತಿಯಾಗಿಯೂ ಶಕುಂತಲಾ ನರಸಿಂಹನ್ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಸಾಧನೆಗೆ ಹಲವು ಗೌರವಗಳು ಲಭಿಸಿದ್ದು, ರಾಜ್ಯ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಅವರಿಗೆ ಲಭಿಸಿತ್ತು.