ಬೆಂಗಳೂರು: ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ಆರ್. ಹಿತೇಂದ್ರ (R Hithendra IPS) ನಿನ್ನೆ ಬುಧವಾರ ಅಧಿಕಾರ ಸ್ವೀಕರಿಸಿಕೊಂಡರು. ನೇಮಕಾತಿ ಆದೇಶ ಹೊರಬಂದ ಕೆಲವೇ ಗಂಟೆಗಳಲ್ಲಿ ಅವರು ತಮ್ಮ ಹೊಸ ಹುದ್ದೆಯ ಕರ್ತವ್ಯ ಆರಂಭಿಸಿದ್ದಾರೆ. ಹಿಂದಿನ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಆರ್. ಹಿತೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ಬಳಿಕ ಮಾತನಾಡಿದ ಆರ್. ಹಿತೇಂದ್ರ ಅಧಿಕಾರ ಸ್ವೀಕಾರ; ಕಾನೂನು ಸುವ್ಯವಸ್ಥೆ, ಸಂಚಾರ ನಿರ್ವಹಣೆ ಮತ್ತು ಮಾದಕ ವಸ್ತು ನಿಯಂತ್ರಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಹೊಸ ಆಯುಕ್ತರು ತರುವ ಕಾನೂನು ಆದೇಶಗಳು ಜಾರಿಗೆ ಬರಬೇಕು, ಅದು ನನ್ನ ಮೊದಲ ಸವಾಲಾಗಿದೆ, ಎರಡನೆಯದಾಗಿ, ಆಡಳಿತಾತ್ಮಕ ಪುನರ್ರಚನೆ ನಡೆದರೆ ಅದಕ್ಕೆ ಸಾರ್ವಜನಿಕರ ಅಭಿಪ್ರಾಯ ಮುಖ್ಯವಾಗುತ್ತದೆ, ಸರ್ಕಾರದ ಮಟ್ಟದಲ್ಲಿ ಬದಲಾವಣೆಯಾದರೆ ಸಾರ್ವಜನಿಕರಿಗೆ ಒಳ್ಳೆಯದಾಗಬೇಕು, ನನ್ನ ಮುಂದೆ ಅವೆರಡೂ ದೊಡ್ಡ ಸವಾಲುಗಳಿವೆ, ನಾನು ಮತ್ತು ನನ್ನ ತಂಡ ಅವುಗಳನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂಬ ವಿಶ್ವಾಸವಿದೆ ಎಂದರು,
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು 5 ಪ್ರತ್ಯೇಕ ಪೊಲೀಸ್ ಕಮಿಷನರೇಟ್ಗಳ ರಚನೆಗೆ ಅಕ್ಟೋಬರ್ 6ರಂದು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಪೊಲೀಸ್ ಕಮಿಷನರ್ ಹುದ್ದೆಯನ್ನು 'ಮುಖ್ಯ ಪೊಲೀಸ್ ಕಮಿಷನರ್' ಎಂದು ಉನ್ನತೀಕರಿಸಲಾಗಿತ್ತು. ಇದೀಗ ನಗರದ ಮೊದಲ 'ಮುಖ್ಯ ಪೊಲೀಸ್ ಕಮಿಷನರ್' ಆಗಿ ಆರ್. ಹಿತೇಂದ್ರ ನೇಮಕಗೊಂಡಿದ್ದಾರೆ.
ಸದ್ಯ ಜಾರಿಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ಮುಖ್ಯ ಪೊಲೀಸ್ ಆಯುಕ್ತರ ಒಟ್ಟಾರೆ ಮೇಲ್ವಿಚಾರಣೆಯಡಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಪ್ರತ್ಯೇಕ ಪೊಲೀಸ್ ಕಮಿಷನರೇಟ್ಗಳಾಗಿ ವಿಭಜಿಸಲಾಗಿದೆ.
ಈ ಹಿಂದೆ ಹಿತೇಂದ್ರ ಅವರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರ ಅನುಭವಕ್ಕೆ ಬೆಂಗಳೂರು ನಗರದ ಪೊಲೀಸ್ ಇಲಾಖೆಯ ನೇತೃತ್ವ ವಹಿಸುವ ಜವಾಬ್ದಾರಿ ನೀಡಲಾಗಿದೆ. ನೇಮಕಾತಿ ಆದೇಶ ಪ್ರಕಟವಾದ ಬೆನ್ನಲ್ಲೇ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.
ಇದೇ ವೇಳೆ, ಬೆಂಗಳೂರು ಸಂಚಾರ, ರೌಡಿನಿಗ್ರಹ ದಳ ಹಾಗೂ ಅಪರಾಧ ನಿಯಂತ್ರಣ ವಿಭಾಗದ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕರಿಸಿಕೊಂಡರು. ಸಂಚಾರ ನಿರ್ವಹಣೆಯನ್ನು ಸುಗಮಗೊಳಿಸುವುದು, ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಹಾಗೂ ರಾಜ್ಯ ರಾಜಧಾನಿಯಲ್ಲಿ ಒಟ್ಟಾರೆ ಕಾನೂನು ಜಾರಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರೂಪಿಸಲಾಗಿರುವ ಹೊಸ ಆಡಳಿತಾತ್ಮಕ ವ್ಯವಸ್ಥೆಯ ಭಾಗವಾಗಿ ಹೇಮಂತ್ ನಿಂಬಾಳ್ಕರ್ ಅವರು ಈ ನೂತನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.