ಬೆಂಗಳೂರು: ರಾಜಧಾನಿ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಸುಮಾರು 160 ವರ್ಷಗಳ ಇತಿಹಾಸವುಳ್ಳ ಹಳೆಯ ಕುಮಾರಕೃಪಾ ಅತಿಥಿ ಗೃಹವನ್ನು ನವೀಕರಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸವನ್ನಾಗಿ ಪರಿವರ್ತಿಸಲಾಗಿದ್ದು, ಇದಕ್ಕೆ 'ಗಂಗಾ' ಎಂದು ಮರುನಾಮಕರಣ ಮಾಡುವುದರೊಂದಿಗೆ, ಖಾಸಗಿಯಾಗಿ ಹೋಮ-ಹವನ ನೆರವೇರಿಸಿ ಪೂಜೆ ಸಲ್ಲಿಸಿದ್ದರು. ಹಾಗಾಗಿ, ಇಂದು ಡಿಕೆಶಿ ದಂಪತಿಗಳು ಸಚಿವರು, ಶಾಸಕರು ಮತ್ತು ಸಂಸದರು ಸೇರಿದಂತೆ ಸುಮಾರು 500 ಗಣ್ಯರಿಗೆ ತಮ್ಮ ನೂತನ ನಿವಾಸದಲ್ಲಿ ವಿಶೇಷ ಭೋಜನಕೂಟವನ್ನು ಆಯೋಜಿಸಿದ್ದರು. ಆದರೆ, ಇದೇ ವೇಳೆ, ಗಂಗಾಗೆ ಆಗಮಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕಪ್ಪು ಪಟ್ಟಿ ಪ್ರದರ್ಶಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದು, 'ಕರ್ನಾಟಕ ಬಂದ್'ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಕರ್ನಾಟಕ ಬಂದ್ ಎಚ್ಚರಿಕೆ
ಕುಮಾರಕೃಪಾ ಅತಿಥಿ ಗೃಹದ ಹೆಸರನ್ನು ಬದಲಾಯಿಸಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಗಂಗಾ ಎಂದು ಮರುನಾಮಕರಣ ಮಾಡಿರುವುದನ್ನು ಹಾಗೂ ಕಟ್ಟಡದ ಮೂಲ ಕಲ್ಲುಗಳನ್ನು ಬದಲಾಯಿಸಿ ನವೀಕರಣ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ ವಾಟಾಳ್ ನಾಗರಾಜ್, "ನೂರಾರು ವರ್ಷಗಳ ಇತಿಹಾಸವಿರುವ ಕುಮಾರಕೃಪಾ ಗೆಸ್ಟ್ ಹೌಸ್ಗೆ ಮಹಾತ್ಮ ಗಾಂಧಿ, ದಲೈಲಾಮಾ ಸೇರಿದಂತೆ ಅನೇಕ ಮಹನೀಯರು ಭೇಟಿ ನೀಡಿದ್ದಾರೆ. ಇಲ್ಲಿ ಯಾರೂ ಒಂದು ಕಲ್ಲನ್ನೂ ಬದಲಾಯಿಸಿರಲಿಲ್ಲ. ಆದರೆ, ಸದಾಶಿವನಗರದಲ್ಲಿ ಸ್ವಂತ ಮನೆ ಇದ್ದರೂ ಡಿ.ಕೆ. ಶಿವಕುಮಾರ್ ಅವರು ಇಲ್ಲಿಗೆ ಬಂದು, ನವೀಕರಿಸಿ, ಗಂಗಾ ಎಂದು ಹೆಸರು ಬದಲಾಯಿಸಿರುವುದು ಸರಿಯಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಐತಿಹಾಸಿಕ ಕುಮಾರಕೃಪಾ ಅತಿಥಿ ಗೃಹವನ್ನು ಉಳಿಸಿಕೊಳ್ಳಲು ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ತಿಳಿಸಿರುವ ವಾಟಾಳ್ ನಾಗರಾಜ್, ಈ ವಿಚಾರವಾಗಿ ಕರ್ನಾಟಕ ಬಂದ್ ಕರೆ ಕೊಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದಿವಾನರ ನಿವಾಸ ಟು ಸಿಎಂ ನಿವಾಸ
1856ರ ಸುಮಾರಿಗೆ ನಿರ್ಮಾಣವಾದ ಈ ಪಾರಂಪರಿಕ ಬಂಗಲೆಯು ಹಿಂದೆ ಮೈಸೂರು ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರ ನಿವಾಸವಾಗಿತ್ತು. 1927ರಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಸುಮಾರು ಎರಡು ತಿಂಗಳ ಕಾಲ ಇದೇ ಕಟ್ಟಡದಲ್ಲಿ ತಂಗಿದ್ದರು.
ಆದರೆ, ಮುಖ್ಯಮಂತ್ರಿ ಶಿವಕುಮಾರ್ ಅವರ ಆಧ್ಯಾತ್ಮಿಕ ಗುರುಗಳಾದ ನೊಣವಿನಕೆರೆ ಅಜ್ಜಯ್ಯ ಅವರ ಸಲಹೆಯ ಮೇರೆಗೆ ಕಟ್ಟಡಕ್ಕೆ 'ಗಂಗಾ' ಎಂದು ಹೆಸರಿಡಲಾಗಿದೆ. ಕಳೆದ ಐದು ತಿಂಗಳುಗಳಿಂದ ವಾಸ್ತು ಪ್ರಕಾರ ಕಟ್ಟಡವನ್ನು ನವೀಕರಿಸಲಾಗಿದ್ದು, ಪೂರ್ವಾಭಿಮುಖವಾಗಿ ಹೊಸ ದ್ವಾರವನ್ನು ನಿರ್ಮಿಸಲಾಗಿದೆ. ಅಲ್ಲದೆ, ಒಳಗಿನ ಕೊಠಡಿಗಳಿಗೆ ಕರ್ನಾಟಕದ ನದಿಗಳ ಹೆಸರನ್ನು ಇಡಲಾಗಿದೆ.
ಅದರಂತೆ, ನವೆಂಬರ್ 16ರಂದು (ಕಾರ್ತಿಕ ಸೋಮವಾರ) ಸಿಎಂ ದಂಪತಿ ಖಾಸಗಿಯಾಗಿ ಹೋಮ-ಹವನ ನೆರವೇರಿಸಿ ಪೂಜೆ ಸಲ್ಲಿಸಿದ್ದರು. ಇಂದು (ನವೆಂಬರ್ 19) ಸಚಿವರು, ಶಾಸಕರು ಮತ್ತು ಸಂಸದರು ಸೇರಿದಂತೆ ಸುಮಾರು 500 ಗಣ್ಯರಿಗೆ ಈ ನೂತನ ನಿವಾಸದಲ್ಲಿ ವಿಶೇಷ ಭೋಜನಕೂಟವನ್ನು ಆಯೋಜಿಸಿದ್ದಾರೆ. ಇದರೊಂದಿಗೆ, ಇನ್ಮುಂದೆ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಅಧಿಕೃತ ಸಭೆಗಳು ಇಲ್ಲಿಂದಲೇ ನಡೆಯಲಿದ್ದು, ನವೆಂಬರ್ ಅಂತ್ಯದ ವೇಳೆಗೆ ಸಿಎಂ ಕುಟುಂಬ ಇಲ್ಲಿಗೆ ಸ್ಥಳಾಂತರಗೊಳ್ಳಲಿದೆ.