ಡಿಸಿ ತಮ್ಮಣ್ಣ ಮತ್ತು ಪ್ರಮೀಳಾ 
ರಾಜ್ಯ

ನನ್ನ ಜೀವನದ ಅರ್ಧ ಭಾಗವೇ ನನ್ನನ್ನು ಅಗಲಿದಂತಾಗಿದೆ: ಇನ್ನಷ್ಟು ವರ್ಷ ನಿನ್ನೊಂದಿಗೆ ಬದುಕುವ ಆಸೆಯಿತ್ತು; ಡಿಸಿ ತಮ್ಮಣ್ಣ ಪೋಸ್ಟ್!

ನನ್ನ ಪ್ರತಿಯೊಂದು ಉಸಿರಿಗೂ ಉಸಿರಾಗಿ, ನನ್ನ ಸುಖದಲ್ಲಿ ಸಂತೋಷವನ್ನು ಕಂಡು, ನನ್ನ ದುಃಖದಲ್ಲಿ ಕಣ್ಣೀರಾಗಿ, ನನ್ನ ಕಷ್ಟಗಳಲ್ಲಿ ಧೈರ್ಯವಾಗಿ, ನನ್ನ ಸಾಧನೆಗಳಲ್ಲಿ ಬೆನ್ನೆಲುಬಾಗಿ ನಿಂತ ನನ್ನ ಪ್ರೀತಿಯ ಅರ್ಧಾಂಗಿ .

ಮದ್ದೂರು: 57 ವಸಂತಗಳ ಸುಮಧುರ ದಾಂಪತ್ಯ ಪಯಣಕ್ಕೆ ವಿಧಿಯು ಇಂದು ವಿದಾಯ ಹೇಳಿದೆ… ನನ್ನ ಬದುಕಿನ ಅರ್ಧ ಭಾಗವೇ ನನ್ನನ್ನು ಅಗಲಿದಂತಾಗಿದೆ ಎಂದು ಮಾಜಿ ಶಾಸಕ ಡಿಸಿ ತಮ್ಮಣ್ಣ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ತಮ್ಮ ಪತ್ನಿ ಪ್ರಮೀಳಾ ನಿಧನದ ಬೆನ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಬದುಕಿನ ಸುದೀರ್ಘ ಪಯಣದಲ್ಲಿ ನನ್ನ ಪ್ರತಿಯೊಂದು ಹೆಜ್ಜೆಗೂ ಹೆಜ್ಜೆಯಾಗಿ, ನನ್ನ ಪ್ರತಿಯೊಂದು ಉಸಿರಿಗೂ ಉಸಿರಾಗಿ, ನನ್ನ ಸುಖದಲ್ಲಿ ಸಂತೋಷವನ್ನು ಕಂಡು, ನನ್ನ ದುಃಖದಲ್ಲಿ ಕಣ್ಣೀರಾಗಿ, ನನ್ನ ಕಷ್ಟಗಳಲ್ಲಿ ಧೈರ್ಯವಾಗಿ, ನನ್ನ ಸಾಧನೆಗಳಲ್ಲಿ ಬೆನ್ನೆಲುಬಾಗಿ ನಿಂತ ನನ್ನ ಪ್ರೀತಿಯ ಅರ್ಧಾಂಗಿ ಶ್ರೀಮತಿ ಪ್ರಮೀಳ ತಮ್ಮಣ್ಣ ಇಂದು ನನ್ನನ್ನು ಶಾಶ್ವತವಾಗಿ ಆಗಲಿದ್ದಾಳೆ.

57 ವರ್ಷಗಳ ಹಿಂದೆ ಆರಂಭವಾದ ನಮ್ಮ ದಾಂಪತ್ಯ ಜೀವನ ಕೇವಲ ಗಂಡ-ಹೆಂಡತಿಯ ಸಂಬಂಧವಾಗಿರಲಿಲ್ಲ. ಅದು ಪ್ರೀತಿ, ವಿಶ್ವಾಸ, ತ್ಯಾಗ, ಸಹನೆ, ಪರಸ್ಪರ ಗೌರವ ಹಾಗೂ ಅಚಲವಾದ ನಂಬಿಕೆಯಿಂದ ಬೆಸೆದುಕೊಂಡ ಎರಡು ಜೀವಗಳ ಅವಿನಾಭಾವ ಬಾಂಧವ್ಯವಾಗಿತ್ತು. ನನ್ನ ಬದುಕಿನ ಏರಿಳಿತಗಳಲ್ಲಿ ಎಂದಿಗೂ ನನ್ನ ಕೈಬಿಡದೆ, ಎಂತಹ ಕಠಿಣ ಸಂದರ್ಭಗಳು ಎದುರಾದರೂ ಧೈರ್ಯ ತುಂಬಿ, ನನ್ನ ನೋವನ್ನು ತನ್ನ ನೋವೆಂದು ಭಾವಿಸಿ, ನನ್ನ ಸಂತೋಷವನ್ನೇ ತನ್ನ ಸಂತೋಷವೆಂದು ಕಂಡು, ನನ್ನ ಜೀವನಕ್ಕೆ ಅರ್ಥ ಮತ್ತು ಸಾರ್ಥಕತೆಯನ್ನು ನೀಡಿದ ಜೀವ ನೀನು.

ನಾನು ಸಾರ್ವಜನಿಕ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಅದರ ಹಿಂದೆ ನಿನ್ನ ಮೌನವಾದ ತ್ಯಾಗ, ಅಪಾರ ಸಹನೆ, ನಿಸ್ವಾರ್ಥ ಪ್ರೀತಿ ಹಾಗೂ ಬೆಂಬಲವಿತ್ತು ಎಂಬುದನ್ನು ನನ್ನ ಬದುಕಿನ ಕೊನೆಯ ಕ್ಷಣದವರೆಗೂ ಮರೆಯಲಾರೆ. ಜನಸೇವೆಯ ಜವಾಬ್ದಾರಿಗಳಲ್ಲಿ ನಾನು ತೊಡಗಿಸಿಕೊಂಡಿದ್ದಾಗ ಮನೆಯ ಜವಾಬ್ದಾರಿಗಳನ್ನು ನಿನ್ನ ಹೆಗಲ ಮೇಲೆ ಹೊತ್ತು, ಕುಟುಂಬದ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಪೊರೆದು, ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನಗೆ ಶಕ್ತಿಯಾಗಿ ನಿಂತಿದ್ದೆ. ನನ್ನ ಗೆಲುವಿನಲ್ಲಿ ಸಂಭ್ರಮಿಸಿದ ನೀನು, ನನ್ನ ಸೋಲಿನಲ್ಲಿ ಧೈರ್ಯ ತುಂಬಿದ್ದೆ. ನಾನು ಕುಗ್ಗಿದಾಗ ಆತ್ಮವಿಶ್ವಾಸ ತುಂಬಿದ್ದೆ. ನಾನು ಮೌನವಾದಾಗ ನನ್ನ ಮನಸ್ಸಿನ ನೋವನ್ನು ಮಾತಿಲ್ಲದೆ ಅರ್ಥಮಾಡಿಕೊಳ್ಳುತ್ತಿದ್ದೆ.

ಬದುಕಿನಲ್ಲಿ ಎಷ್ಟೇ ಜನರು ನಮ್ಮೊಂದಿಗೆ ಇದ್ದರೂ, ನಮ್ಮ ಮನಸ್ಸಿನ ನೋವನ್ನು ಹೇಳಿಕೊಳ್ಳಲು, ನಮ್ಮ ಸಂತೋಷವನ್ನು ಹಂಚಿಕೊಳ್ಳಲು, ನಮ್ಮ ಕಷ್ಟಗಳನ್ನು ಮರೆಯಲು ಒಬ್ಬ ಆತ್ಮೀಯ ಜೀವ ಬೇಕಾಗುತ್ತದೆ. ನನ್ನ ಪಾಲಿಗೆ ಆ ಜೀವ ನೀನೇ ಆಗಿದ್ದೆ.

ಇಂದು ಹಿಂತಿರುಗಿ ನೋಡಿದಾಗ ನಮ್ಮ 57 ವರ್ಷಗಳ ದಾಂಪತ್ಯ ಜೀವನದ ಒಂದೊಂದು ಕ್ಷಣವೂ ಕಣ್ಣಮುಂದೆ ಬರುತ್ತಿದೆ. ಜೊತೆಯಾಗಿ ಕಂಡ ಕನಸುಗಳು, ಹಂಚಿಕೊಂಡ ಸಂತೋಷಗಳು, ಎದುರಿಸಿದ ಸಂಕಷ್ಟಗಳು, ಒಟ್ಟಾಗಿ ನಕ್ಕ ಕ್ಷಣಗಳು, ಕಷ್ಟದ ದಿನಗಳಲ್ಲಿ ಒಬ್ಬರಿಗೊಬ್ಬರು ಧೈರ್ಯ ತುಂಬಿಕೊಂಡ ನೆನಪುಗಳು… ಎಲ್ಲವೂ ಇಂದು ನನ್ನ ಕಣ್ಣಂಚಿನಲ್ಲಿ ನೀರಾಗಿ ಹರಿಯುತ್ತಿವೆ.

ಇಷ್ಟು ವರ್ಷ ನನ್ನೊಂದಿಗೆ ಹೆಜ್ಜೆ ಹಾಕಿದ ನೀನು, ಮುಂದಿನ ಬದುಕಿನ ಪಯಣದಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗುತ್ತೀಯೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ನನ್ನ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಅವುಗಳನ್ನು ಎದುರಿಸುವ ಧೈರ್ಯ ನನಗಿತ್ತು. ಏಕೆಂದರೆ ನನ್ನೊಂದಿಗೆ ನೀನಿದ್ದೆ. ಆದರೆ ಇಂದು ನಿನ್ನ ಅಗಲಿಕೆಯ ನೋವನ್ನು ಎದುರಿಸಲು ಬೇಕಾದ ಧೈರ್ಯವನ್ನೇ ಹುಡುಕುವಂತಾಗಿದೆ.

ನಿತ್ಯವೂ ಕೇಳುತ್ತಿದ್ದ ನಿನ್ನ ಮಾತುಗಳು, ಮನೆಯಲ್ಲೆಲ್ಲ ತುಂಬಿರುತ್ತಿದ್ದ ನಿನ್ನ ಉಪಸ್ಥಿತಿ, ನನ್ನ ಬಗ್ಗೆ ನೀನು ತೋರುತ್ತಿದ್ದ ಕಾಳಜಿ, ಪ್ರೀತಿಯಿಂದ ವಿಚಾರಿಸಿಕೊಳ್ಳುತ್ತಿದ್ದ ಆ ಕ್ಷಣಗಳು… ಇವೆಲ್ಲವೂ ಇನ್ನು ನೆನಪುಗಳಾಗಿ ಉಳಿಯುತ್ತವೆ ಎಂಬ ಸತ್ಯವನ್ನು ಮನಸ್ಸು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬದುಕಿನುದ್ದಕ್ಕೂ ನನ್ನ ನೆರಳಾಗಿ ನಿಂತವಳು ನೀನು. ಇಂದು ಆ ನೆರಳೇ ನನ್ನನ್ನು ಬಿಟ್ಟು ದೂರವಾಗಿದೆ.

ನಿನ್ನೊಂದಿಗೆ ಕಳೆದ 57 ವಸಂತಗಳು ನನಗೆ 57 ವರ್ಷಗಳಲ್ಲ; ಅವು ನನ್ನ ಇಡೀ ಬದುಕಿನ ಅತ್ಯಮೂಲ್ಯ ಸಂಪತ್ತು. ಆ ನೆನಪುಗಳನ್ನು ಯಾವ ಕಾಲವೂ ಅಳಿಸಲು ಸಾಧ್ಯವಿಲ್ಲ. ನಿನ್ನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ನೀನು ನನ್ನಿಂದ ದೂರವಾಗಿರಬಹುದು. ಆದರೆ ನನ್ನ ಹೃದಯದಿಂದ, ನನ್ನ ನೆನಪುಗಳಿಂದ, ನನ್ನ ಬದುಕಿನ ಪ್ರತಿಯೊಂದು ಕ್ಷಣದಿಂದ ನಿನ್ನನ್ನು ದೂರಮಾಡಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬದುಕಿಗೆ ಬೆಳಕಾಗಿ, ನನ್ನ ಜೀವನಕ್ಕೆ ಅರ್ಥವಾಗಿ, ನನ್ನ ಕುಟುಂಬಕ್ಕೆ ಆಧಾರವಾಗಿ, ನನ್ನ ಸುಖದುಃಖಗಳಿಗೆ ಸಂಗಾತಿಯಾಗಿ 57 ವರ್ಷಗಳ ಕಾಲ ಜೊತೆಯಾದ ನಿನಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕದನದಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್! 11 ಟಿಎಂಸಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಎರಡೂ ಅರ್ಜಿ ಸುಪ್ರೀಂನಲ್ಲಿ ವಜಾ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಒಂದೆಡೆ ತನಿಖೆ ಬೇಕೆನ್ನುತ್ತೀರಿ, ಈಗ FIR ರದ್ದು ಕೋರುತ್ತಿದ್ದೀರಿ: SIT ತನಿಖೆ ರದ್ದು ಕೋರಿದ್ದ ಗಿರೀಶ್ ಮಟ್ಟಣ್ಣನವರ್‌ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

'ಅಕ್ವಾನ್ ಚಂಡಮಾರುತ': ಒಡಿಶಾದ ಗೋಪಾಲಪುರ ಸಮೀಪ ಪ್ರವೇಶ ಪ್ರಕ್ರಿಯೆ ಆರಂಭ; 3 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ

35 ವರ್ಷದ ಬಳಿಕ ' ಭಯೋತ್ಪಾದಕರಿಂದ ಕಾಶ್ಮೀರ ಮುಕ್ತ': ಲತೀಫ್ ಭಟ್ ಹತ್ಯೆ ನಂತರ ಅಮಿತ್ ಶಾ ಘೋಷಣೆ

21,900 ಕೋಟಿ ರೂ.ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಸಮ್ಮತಿ; ಬೆಂಗಳೂರಿನ 88 ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ, ಸಾಲಗಾರರಿಗೆ ಬಿಗ್ ರಿಲೀಫ್..!