ಬೆಂಗಳೂರು: ಕುಮಾರಕೃಪಾ ಅತಿಥಿಗೃಹಕ್ಕೆ ಗಂಗಾ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ನವೀಕೃತ ಸಮ್ಮೇಳನ ಸಭಾಂಗಣಕ್ಕೆ ಸಂಗಮ ಎಂದು ನಾಮಕರಣ ಮಾಡಿ ಉದ್ಘಾಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಗಂಗಾ ಬಳಿಕ ಸಂಗಮ
ಕೆಲ ದಿನಗಳ ಹಿಂದೆ ತಾವು ವಾಸವಿರುವ ನವೀಕೃತ ಕುಮಾರಕೃಪಾ ಅತಿಥಿಗೃಹವನ್ನು ಸಿಎಂ ಅಧಿಕೃತ ನಿವಾಸವನ್ನಾಗಿ ಬದಲಾಯಿಸಿ, ಅದಕ್ಕೆ ಗಂಗಾ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಸರು ಬದಲಾಯಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ, ರಾಜ್ಯದ ಅಭಿವೃದ್ಧಿ ಪರ ಚರ್ಚೆಗಳು ಮತ್ತು ಆಡಳಿತಾತ್ಮಕ ನಿರ್ಣಯಗಳ ಕೇಂದ್ರವಾಗಿರುವ ವಿಧಾನಸೌಧದ 3ನೇ ಮಹಡಿಯ ಐತಿಹಾಸಿಕ ಸಮ್ಮೇಳನ ಸಭಾಂಗಣವನ್ನು ಆಧುನೀಕರಿಸಿ 'ಸಂಗಮ' ಎಂದು ಮರುನಾಮಕರಣ ಮಾಡಲಾಗಿದೆ. ಏತನ್ಮಧ್ಯೆ, ನೂತನ ಸಂಗಮ ಸಭಾಂಗಣದ ಉದ್ಘಾಟನೆಯ ಜೊತೆಗೆ, ಸರ್ಕಾರದ ಪ್ರತಿಯೊಂದು ಯೋಜನೆ, ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾರ್ವಜನಿಕ ಹಣದ ಬಳಕೆಯ ವಿವರಗಳು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವಂತೆ ರೂಪಿಸಲಾದ ಸಿಎಂ ಡ್ಯಾಶ್‌ಬೋರ್ಡ್ ಅನ್ನು ಸಹ ಸಿಎಂ ಡಿ.ಕೆ. ಶಿವಕುಮಾರ್ ಲೋಕಾರ್ಪಣೆಗೊಳಿಸಿದರು.
ಉದ್ಘಾಟನೆಗೊಂಡ ತಕ್ಷಣವೇ ಅಧಿಕಾರಿಗಳ ಸಭೆ ನಡೆಸಿದ ಡಿಕೆಶಿ
ಉದ್ಘಾಟನೆಗೊಂಡ ತಕ್ಷಣವೇ ಸಿಎಂ ಡಿಕೆಶಿ ಅವರು ಸಂಗಮ ಸಭಾಂಗಣದಲ್ಲಿ ಬೆಂಗಳೂರು ನಗರ ಹಾಗೂ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಕಾನೂನು ಸುವ್ಯವಸ್ಥೆ ಕುರಿತು ಮೊದಲ ಮಹತ್ವದ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಸಲೀಂ ಅಹಮದ್ ಹಾಗೂ ನಗರ ಪೊಲೀಸ್ ಆಯುಕ್ತ ಹಿತೇಂದ್ರ ಉಪಸ್ಥಿತರಿದ್ದರು.
ಏನಿದು ಸಿಎಂ ಡ್ಯಾಶ್‌ಬೋರ್ಡ್?
ಸಭಾಂಗಣದ ಉದ್ಘಾಟನೆಯ ಜೊತೆಗೇ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಡ್ಯಾಶ್‌ಬೋರ್ಡ್ ಕರ್ನಾಟಕ ಪೋರ್ಟಲ್ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ. ಸರ್ಕಾರದ ಪ್ರತಿಯೊಂದು ಯೋಜನೆ, ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾರ್ವಜನಿಕ ಹಣದ ಬಳಕೆಯ ವಿವರಗಳನ್ನು ನಾಗರಿಕರು ನೇರವಾಗಿ ಈ ಪೋರ್ಟಲ್‌ನಲ್ಲಿ ಪರಿಶೀಲಿಸಬಹುದು. ಅದರಂತೆ, ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ವಿವರ, ಕೃಷಿ, ಶಿಕ್ಷಣ, ಉದ್ಯೋಗ, ಆರೋಗ್ಯ, ಕೈಗಾರಿಕೆ, ಲೋಕೋಪಯೋಗಿ ಕಾಮಗಾರಿಗಳು, ಸಾರ್ವಜನಿಕ ಕುಂದುಕೊರತೆ ನಿವಾರಣೆ ಹಾಗೂ ಸರ್ಕಾರಿ ನೌಕರರ ಹಾಜರಾತಿಯ ದೈನಂದಿನ ಅಪ್‌ಡೇಟ್‌ಗಳು ಇದರಲ್ಲಿ ಲಭ್ಯವಿರುತ್ತವೆ.